Advertisement

ಯುವ ಮನಸ್ಸುಗಳಿಗೆ ಪ್ರೇಮಪಾಠ : ಮುಗಿಲ್‌ಪೇಟೆ

08:37 AM Nov 21, 2021 | Team Udayavani |

ಒಂದು ಸುಂದರವಾದ ಪ್ರೀತಿಯಲ್ಲಿ ಅಪನಂಬಿಕೆ ಮೂಡಲು, ಸಂಬಂಧಗಳು ಹಾಳಾಗಲು ಕೆಲವೊಮ್ಮೆ ಚಿಕ್ಕ ಸಂಗತಿಗಳೂ ಕಾರಣವಾಗಬಹುದು. ಇಂಥ ಚಿಕ್ಕ ಸಂಗತಿಗಳನ್ನು ಬದಿಗಿಟ್ಟು ಬದುಕು ಸಾಗಿಸಿದರೆ, ಅದು ಸುಂದರವಾಗಿರುತ್ತದೆ. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಮುಗಿಲ್‌ಪೇಟೆ’.

Advertisement

ಅಲ್ಲಲ್ಲಿ ಕೇಳಿರುವ, ಕೆಲವೊಮ್ಮೆ ನಮ್ಮ ಜೀವನದಲ್ಲೂ ನಡೆಯಬಹುದಾದ ಇಂಥ ವಿಷಯವನ್ನು ಇಟ್ಟುಕೊಂಡು “ಮುಗಿಲ್‌ಪೇಟೆ’ ಸಿನಿಮಾದಲ್ಲಿ ಅದಕ್ಕೊಂದು ದೃಶ್ಯರೂಪ ಕೊಟ್ಟಿದ್ದಾರೆ ನಿರ್ದೇಶಕ ಭರತ್‌ ನಾವುಂದ. ಆದರೆ ಸರಳವಾದ ಕಥೆಯನ್ನು ಸುಂದರವಾಗಿ ಕಟ್ಟಿಕೊಡುವ ಇನ್ನಷ್ಟು ಸಾಧ್ಯತೆಗಳಿದ್ದರೂ, ನಿರ್ದೇಶಕರು ಅದನ್ನು ಪರಿಣಾಮಕಾರಿಯಾಗಿ ಚಿತ್ರದಲ್ಲಿ ಬಳಸಿಕೊಂಡಂತೆ ಕಾಣುವುದಿಲ್ಲ.

ಅನಗತ್ಯ ತಿರುವು, ಅನಪೇಕ್ಷಿತ ಪಾತ್ರಗಳು, ಸಸ್ಪೆನ್ಸ್‌ ಗೊತ್ತಾಗಲು ತೆಗೆದುಕೊಳ್ಳುವ ಸಮಯ ಇವೆಲ್ಲವೂ ಚಿತ್ರಕಥೆಯ ಸಾರಾಗ ಓಟಕ್ಕೆ ಅಲ್ಲಲ್ಲಿ ಬ್ರೇಕ್‌ ಹಾಕುವಂತಿದೆ. ಇನ್ನು ತಮ್ಮ ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ, ನಾಯಕ ನಟ ಮನುರಂಜನ್‌ ಒಂದಷ್ಟು ಮಾಗಿದಂತೆ ಕಾಣುತ್ತದೆ. ನಾಯಕಿ ಖಯಾದು ಲೋಹರ್‌ ತಮ್ಮ ಅಂದ ಮತ್ತು ಅಭಿನಯ ಎರಡರಲ್ಲೂ ನೋಡುಗರಿಗೆ ಇಷ್ಟವಾಗುತ್ತಾರೆ. ಉಳಿದಂತೆ ತಾರಾ ಅನುರಾಧಾ, ಅವಿನಾಶ್‌, ರಂಗಾಯಣ ರಘು, ಸಾಧುಕೋಕಿಲ ಮತ್ತಿತರದ್ದು ಎಂದಿನಂತೆ ಸಹಜ ಅಭಿನಯ.

ತೆರೆಯ ಮೇಲೆ ಕಾಣುವ ಹಸಿರು, ಮಳೆ, ಮಂಜು ಎಲ್ಲವನ್ನು ಕಟ್ಟಿಕೊಡುವ ಛಾಯಾಗ್ರಹಣ ಮತ್ತು ಅದಕ್ಕೊಪ್ಪುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ “ಮುಗಿಲ್‌ಪೇಟೆ’ಯ ಸೌಂದರ್ಯಕ್ಕೆ ಪ್ಲಸ್‌ ಆಗಿದೆ. ಅತಿಯಾದ ನಿರೀಕ್ಷೆಗಳಿಲ್ಲದೆ, ಮಾಮೂಲಿ ಪ್ರೇಮಕಥೆಯನ್ನು ಹೊಸದಾಗಿ ಮತ್ತೂಮ್ಮೆ ನೋಡಿಬರಲು ಅಡ್ಡಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next