“ಎಲ್ಲಾ ಪ್ರೇಮಿಗಳು ಒಂದೆಡೆ ಸೇರುವ ಜಾಗಕ್ಕೆ “ಅಭಿಸಾರ’ ಎಂಬ ಹೆಸರು. ಅಭಿ ಎಂಬ ಹುಡುಗ ಮತ್ತು ಸಾರಿಕೆ ಎಂಬ ಹುಡುಗಿಯ ಲವ್‌ಸ್ಟೋರಿ ಇದಾಗಿರುವುದರಿಂದ ಚಿತ್ರಕ್ಕೆ “ಅಭಿಸಾರಿಕೆ’ ಎಂಬ ಹೆಸರಿಟ್ಟು ಚಿತ್ರ ಮಾಡಿದ್ದೇವೆ …’
ಹಾಗಂತ ಹೇಳಿಕೊಂಡರು ಮಧುಸೂದನ್. ಈ ವಾರ ಬಿಡುಗಡೆಯಾಗುತ್ತಿರುವ “ಅಭಿಸಾರಿಕೆ’ ಚಿತ್ರವನ್ನು ನಿರ್ದೇಶಿಸಿರುವ ಅವರು, ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. “ಇಲ್ಲಿ ಚಿತ್ರಕಥೆ ಹೈಲೆಟ್. ನಾನು ನೋಡಿದ ಕನ್ನಡ ಚಿತ್ರಗಳಲ್ಲಿ ಇರದೇ ಇರುವಂತಹ ಚಿತ್ರಕಥೆ ಇಲ್ಲಿದೆ. ಹೊಸ ಪ್ರಯತ್ನದೊಂದಿಗೆ ಚಿತ್ರ ಮಾಡಿದ್ದೇನೆ. ಈಗಿನ ಲವ್‌ಸ್ಟೋರಿ ಇಲ್ಲಿದ್ದರೂ, ಬೇರೆ ರೀತಿಯ ಸೆಳೆತ ಇಲ್ಲಿದೆ. ಒಂದು ಸಿನಿಮಾ ರೂಪುಗೊಳ್ಳಲು ನಿರ್ಮಾಪಕರು ಕಾರಣ. ನಿರ್ಮಾಪಕ ಪ್ರಶಾಂತ್ ಎಲ್ಲವನ್ನು ಒದಗಿಸಿಕೊಟ್ಟಿದ್ದರಿಂದ ಇಂಥಧೊªಂದು ಚಿತ್ರ ಮಾಡಲು ಸಾಧ್ಯವಾಯ್ತು. ಚಿತ್ರ ತಡವಾಗಿದೆ. ಅದಕ್ಕೆ ಕಾರಣ, ತಾಂತ್ರಿಕ ಕೆಲಸಗಳು. ಒಂದು ಪಫೆìಕ್ಟ್ ಸಿನಿಮಾಗೆ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ಕಥೆ ಏನು, ಏನೆಲ್ಲಾ ನಡೆದು ಹೋಗುತ್ತೆ ಅನ್ನುವುದನ್ನು ಕೇಳುವುದಕ್ಕಿಂತ ಅದನ್ನು ಚಿತ್ರದಲ್ಲೇ ನೋಡಬೇಕು’ ಅಂದರು ಮಧುಸೂದನ್.
ನಾಯಕ ತೇಜ್‌ಗೆ ಇದು ಮೊದಲ ಚಿತ್ರ. “ನಟನೆ ಗೊತ್ತಿರಲಿಲ್ಲ. ನಿರ್ದೇಶಕರು ಹೇಳಿದಂತೆ ಮಾಡಿದ್ದರಿಂದ ಆ ಪಾತ್ರದಲ್ಲಿ ಚೆನ್ನಾಗಿ ನಟಿಸಲು ಸಾಧ್ಯವಾಗಿದೆ. ಆಗಷ್ಟೇ ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿಕೊಂಡ ಹುಡುಗನೊಬ್ಬ ಲವ್‌ನಲ್ಲಿ ಬಿದ್ದಾಗ ಯಾವೆಲ್ಲಾ ಸಮಸ್ಯೆ ಎದುರಾಗುತ್ತೆ ಎಂಬುದು ಕಥೆ’ ಅಂದರು ತೇಜ್ ಗೌಡ.
ನಾಯಕಿ ಸೋನಾಲ್‌ಗೆ ಇದು ಮೊದಲ ಕನ್ನಡ ಚಿತ್ರವಂತೆ. ಈ ಚಿತ್ರಕ್ಕೆ ಯಾವಾಗ ಸಹಿ ಹಾಕಿದರೋ, ಅಲ್ಲಿಂದ ಅವರಿಗೆ ಅದೃಷ್ಟ ಹುಡುಕಿ ಬಂತಂತೆ. ಅವರು ಈ ಚಿತ್ರ ನೋಡಿದ್ದು, ಈವರೆಗೆ ಕನ್ನಡದಲ್ಲಿ ಚಿತ್ರ ಬಂದೇ ಇಲ್ಲ ಅಂತ ಹೇಳಿಕೊಂಡರು. “ಇಲ್ಲಿ ಫ್ರೆಶ್ ಕಥೆ ಇದೆ. ಹೊಸ ಪ್ರಯೋಗವಿದೆ. ಯೂಥ್ ನೋಡುವಂತಹ ಅಂಶಗಳಿವೆ. ಚಿತ್ರದಲ್ಲಿ ಒಬ್ಬ ಮಿಡ್ಲ್ಕ್ಲಾಸ್ ಹುಡುಗಿಯಾಗಿ ನಟಿಸಿದ್ದು, ಕಾಲೇಜು ಓದುವ ವಿದ್ಯಾರ್ಥಿನಿ ಲೈಫಲ್ಲಿ ನಡೆಯೋ ಕಥೆಯಲ್ಲಿ ಹಲವು ಏರಿಳಿತಗಳಿವೆ. ಅದನ್ನು ಚಿತ್ರದಲ್ಲೇ ನೋಡಬೇಕೆಂದರು’ ಸೋನಾಲ್.
ಸಂಗೀತ ನಿರ್ದೇಶಕ ಕರಣ್ ಬಿ. ಕೃಪ ಅವರಿಗೆ ಇದು ಮೂರನೇ ಚಿತ್ರ. ಈ ಹಿಂದೆ ಅವರು “ಗಣಪ’, “ಕರಿಯ 2′ ಚಿತ್ರ ಮಾಡಿದ್ದಾರೆ. ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಿರ್ಮಾಪಕ ಪ್ರಶಾಂತ್ ಅವರಿಗೆ ಚಿತ್ರ ತಡವಾಗಿದ್ದಕ್ಕೆ ಬೇಸರವಿಲ್ಲವಂತೆ. ರಾಜ್ಯಾದ್ಯಂತ ಸುಮಾರು 80 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು ಪ್ರಶಾಂತ್.