ಶ್ರೀನಗರ: ಸೇನಾ ಶಿಬಿರಗಳ ಮೇಲೆ ದಾಳಿ ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್‌ವೊಬ್ಬನನ್ನು ಸೋಮವಾರ ಭದ್ರತಾ ಪಡೆಗಳು ಹತ್ಯೆಗೈದಿವೆ. ಕಣಿವೆ ರಾಜ್ಯದಲ್ಲಿ ಇಂತಹ ಎನ್‌ಕೌಂಟರ್‌ಗಳೇನೂ ಹೊಸತಲ್ಲ. ಆದರೆ, ಸೋಮವಾರ ನಡೆದ ಪಾಕಿಸ್ತಾನಿ ನಾಗರಿಕ, ಉಗ್ರ ಉಮರ್ ಖಾಲಿದ್ ಎನ್‌ಕೌಂಟರ್‌ನಲ್ಲೊಂದು ಇಂಟರೆಸ್ಟಿಂಗ್ ಸ್ಟೋರಿ ಮತ್ತು ಸಖತ್ ಟ್ವಿಸ್ಟ್ ಇದೆ.
ಹೌದು, ಇದೊಂದು “ಲವ್, ಸೆಕ್ಸ್ ಮತ್ತು ಧೋಕಾ’ದ ಕತೆ. ಜೈಶ್ ಕಮಾಂಡರ್ ಉಮರ್ ಖಾಲಿದ್‌ನ ಎನ್‌ಕೌಂಟರ್ ಹಿಂದಿನ ಘಟನೆಗಳ ಎಳೆಗಳನ್ನು ಬಿಡಿಸುತ್ತಾ ಹೋದರೆ, “ಇದೇನು ಬಾಲಿವುಡ್ ಸಿನಿಮಾದ ಕತೆಯೇ’ ಎಂಬ ಪ್ರಶ್ನೆ ಮೂಡದೇ ಇರದು. ಉಗ್ರ ಖಾಲಿದ್‌ನ ಹತ್ಯೆಯ ಹಿಂದೆ ಭಗ್ನ ಪ್ರೇಮವೊಂದು ಕೆಲಸ ಮಾಡಿದೆ. ಕಾಶ್ಮೀರದ 20ರ ಆಸುಪಾಸಿನ ಯುವತಿಯೊಬ್ಬಳ ಆಕ್ರೋಶದ ಬೆಂಕಿಯು ಉಮರ್‌ನನ್ನು ಸುಟ್ಟುಹಾಕಿದೆ.
ಅವನು ಸಾಯಬೇಕು ಅಷ್ಟೆ: ಕಳೆದ ವರ್ಷ ನೇರವಾಗಿ ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯ ಕಚೇರಿಗೆ ಆಗಮಿಸಿದ್ದ ಯುವತಿಯು ಹೇಳಿದ್ದಿಷ್ಟು “ಉಮರ್ ಖಾಲಿದ್ ಸಾಯಬೇಕು. ನನಗೆ ಬೇಕಾಗಿರುವುದು ಅಷ್ಟೆ. ಅವನಿರುವ ಜಾಗಕ್ಕೆ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ. ನಂತರದ ಕೆಲಸವನ್ನು ನೀವು ಮುಗಿಸಿಬಿಡಿ.’ ಹೀಗೆಂದು ಹೇಳಿದ ಯುವತಿಯ ನಿಷ್ಠುರ ಹಾಗೂ ಆಕ್ರೋಶಭರಿತ ಮಾತುಗಳನ್ನು ಕೇಳಿ ಅಲ್ಲಿದ್ದ ಪೊಲೀಸರೇ ದಂಗಾಗಿದ್ದರು. ಬೇರೇನೂ ಯೋಚಿಸಲು ಹೋಗದೇ “ಓಕೆ ಡನ್’ ಎಂದು ತಲೆಯಾಡಿಸಿದ್ದರು.
ಆಕೆಯ ಕೋಪಕ್ಕೆ ಕಾರಣವೇನು?: ಇಲ್ಲೇ ಇರುವುದು “ರಿಯಲ್ ಪ್ರೇಮ ಕತೆ’. ಉಮರ್ ಖಾಲಿದ್‌ನನ್ನು ಕೊಲ್ಲಲು ಬಯಸಿದ್ದ ಆ ಯುವತಿ ಬೇರಾರೂ ಅಲ್ಲ. ಅವನ ಗರ್ಲ್ಫ್ರೆಂಡ್. ಆತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳು. ಇವರಿಬ್ಬರ ಪ್ರೇಮದ ಫಲವಾಗಿ ಆಕೆಯ ಗರ್ಭದಲ್ಲಿ ಕೂಸು ಹುಟ್ಟುವುದರಲ್ಲಿತ್ತು. ವಿಷಯ ತಿಳಿದೊಡನೆ ಖುಷಿಯಿಂದ ತೇಲಾಡಿದ್ದ ಆಕೆ ಉಮರ್‌ನತ್ತ ಧಾವಿಸಿ, “ನೀನು ನನ್ನ ಮಗುವಿಗೆ ಅಪ್ಪನಾಗುತ್ತಿದ್ದೀಯ’ ಎಂದು ಹೇಳಿ ಸಂಭ್ರಮಿಸಿದ್ದಳು. ಆದರೆ, ಅವನ ಪ್ರತಿಕ್ರಿಯೆ ಬಗ್ಗೆ ಅವಳ ನಿರೀಕ್ಷೆ ಸುಳ್ಳಾಗಿತ್ತು. “ನನಗೂ ನಿನ್ನ ಹೊಟ್ಟೆಯಲ್ಲಿರುವ ಮಗುವಿಗೂ ಯಾವುದೇ ಸಂಬಂಧವಿಲ್ಲ’ ಎಂದು ಕಡ್ಡಿಮುರಿದಂತೆ ಹೇಳಿ ತೆರಳಿದ್ದ. ಆಕೆಯ ಹೃದಯ ಚೂರಾಗಿತ್ತು. ನಂತರ, ಈ ವಿಷಯ ಮನೆಯವರಿಗೆ ಗೊತ್ತಾದರೆ ಸಮಸ್ಯೆಯಾದೀತು ಎಂದು ಅಂಜಿದ ಆಕೆ, ಪಂಜಾಬ್‌ನ ಜಲಂಧರ್‌ಗೆ ತೆರಳಿ ಗರ್ಭಪಾತ ಮಾಡಿಸಿಕೊಂಡಿದ್ದಳು. ಭ್ರೂಣವನ್ನು ಹತ್ಯೆಗೈದು ವಾಪಸ್ ಬರುತ್ತಲೇ, “ಉಮರ್ ಖಾಲಿದ್‌ನನ್ನು ನಿರ್ನಾಮ ಮಾಡದೇ ವಿರಮಿಸುವುದಿಲ್ಲ’ ಎಂಬ ಶಪಥ ಮಾಡಿದ್ದಳು.
ಆಪರೇಷನ್ ಲವರ್‌ಬಾಯ್: ಕಳೆದ 8 ವರ್ಷಗಳಲ್ಲಿ ಹಲವು ಬಾರಿ ಜೈಶ್ ಕಮಾಂಡರ್ ಖಾಲಿದ್ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದ. ಲವರ್‌ಬಾಯ್ ಆಗಿದ್ದ ಆತ, ಸಾಯುವ ಸಮಯದಲ್ಲೂ ಮೂವರು ಗರ್ಲ್ಫ್ರೆಂಡ್‌ಗಳನ್ನು ಹೊಂದಿದ್ದ. ಕೆಲ ದಿನಗಳ ಹಿಂದೆ ಆ ಯುವತಿಯು ಮೊದಲೇ ತಿಳಿಸಿದಂತೆ, ಖಾಲಿದ್‌ನ ಚಲನವಲನಗಳು, ಆತ ಇರುವ ಪ್ರದೇಶ, ಹೆಚ್ಚಾಗಿ ಭೇಟಿ ನೀಡುವ ಸ್ಥಳ… ಇವೆಲ್ಲದರ ಬಗ್ಗೆ ಮಾಹಿತಿ ಕೊಟ್ಟಿದ್ದಳು. ಅದರಂತೆ, ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿದ್ದವು.
ಆದರೂ, ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದ. ಸೋಮವಾರ ಆತ ಸೋಪೋರ್‌ಗೆ ಭೇಟಿ ನೀಡುವ ಮಾಹಿತಿಯು ಯುವತಿಯ ಕಡೆಯಿಂದಲೇ ಸಿಕ್ಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವಿಶೇಷ ಕಾರ್ಯಾಚರಣೆ ತಂಡ(ಎಸ್‌ಒಜಿ), ಅವನು ಸೋಪೋರ್ ತಲುಪುತ್ತಲೇ ಸುತ್ತುವರಿಯಿತು. ಕೂಡಲೇ ಉಗ್ರ ಖಾಲಿದ್ ಗುಂಡಿನ ಮಳೆಗರೆಯಲು ಆರಂಭಿಸಿದ. 4 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆದು, ಕೊನೆಯಲ್ಲಿ ಆತನನ್ನು ಹತ್ಯೆಗೈಯ್ಯಲಾಯಿತು. ಈ ಮೂಲಕ ಒಂದೆಡೆ, ಭಗ್ನ ಪ್ರೇಮಿಯ ಸೇಡೂ ತೀರಿತು, ಮತ್ತೂಂದೆಡೆ ಕಣಿವೆ ರಾಜ್ಯದ ಉಗ್ರ ಕಮಾಂಡರ್‌ವೊಬ್ಬನ ಕತೆಯೂ ಅಂತ್ಯವಾಯಿತು.
ಎನ್‌ಕೌಂಟರ್: ಯೋಧ ಹುತಾತ್ಮ
ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಸೋಮವಾರ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಉಗ್ರರ ಗುಂಡಿಗೆ ಸುಬೇದಾರ್ ರಾಜ್‌ಕುಮಾರ್ ಬಲಿಯಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ತದನಂತರ, ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲೂ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.