Advertisement

ಸಂಬಂಧಗಳನ್ನು ಪ್ರೀತಿಸಬೇಕೇ ಹೊರತು ವಸ್ತುಗಳನ್ನಲ್ಲ!

12:30 AM Mar 22, 2019 | |

ಜೀವನದಲ್ಲಿ ಎಲ್ಲರಿಗೂ ಆಸೆಗಳಿರುತ್ತವೆ, ಕಂಡಿದ್ದೆಲ್ಲ ಬೇಕು ಅನ್ನುವ ಹಾಗೆ. ಆದರೆ, ಅದೆಲ್ಲವನ್ನು ಪಡೆದು ಹೇಗಿರಬೇಕು? ಅದನ್ನು ಉಳಿಸಿಕೊಳ್ಳುವ ಜಾಯಮಾನ ನಮಗಿದೆಯೋ ಎಂದು ನಮ್ಮನ್ನು ನಾವು ಪ್ರಶ್ನಿಸಬೇಕಾಗಿದೆ. ಆಸೆಗಳು ಸಹಜ ಮತ್ತು ಸ್ವಾಭಾವಿಕ. ಕನಸುಗಳೂ ಆಸೆಯೇ. ಹಾಗಂತ ಕನಸುಗಳೆಲ್ಲವೂ ನನಸಾಗಲು ಸಾಧ್ಯವಿಲ್ಲ. ಮರಕ್ಕೆ ಚಿಗುರು ಎಷ್ಟು ಮುಖ್ಯವೋ, ಬತ್ತುತ್ತಿರುವ ಕೆರೆಗೆ ನೀರಿನ ಒರತೆಯೂ ಅಷ್ಟೇ ಮುಖ್ಯ. ಹಾಗೆಯೇ ನಮ್ಮ ಬದುಕಿಗೂ ಕನಸುಗಳು ಮುಖ್ಯ. ಕನಸು ನನಸಾಗಲು ನಾವು ಭರವಸೆಯಿಂದ, ಜವಾಬ್ದಾರಿಯಿಂದ ಬದುಕುವುದು ಬಹುಮುಖ್ಯವಾಗುತ್ತದೆ. ಮನುಷ್ಯ ಅಂದಮೇಲೆ ಆಸೆಗಳು ಕನಸುಗಳು ಇದ್ದೇ ಇರುತ್ತವೆ. ಅದಿಲ್ಲದಿದ್ದರೆ ಅವನು ಮನುಷ್ಯನಲ್ಲ. ಯಾಕೆಂದರೆ, ಜೀವನ ಇರೋದು ಒಂದೇ.

Advertisement

ಅದನ್ನು ಹಾಳುಮಾಡಿಕೊಳ್ಳುತ್ತೇವೋ, ಕಾಪಾಡಿಕೊಳ್ಳುತ್ತೇವೋ ಅದು ಅವರವರಿಗೆ ಬಿಟ್ಟಿದ್ದು !ಇತ್ತೀಚೆಗೆ ನಡೆಯುತ್ತಿರುವ ರಸ್ತೆ ಅಪಘಾತಗಳನ್ನು ಗಮನಿಸಿ ನನ್ನಲ್ಲಿ ಇಂತಹ ಅನೇಕ ಆಲೋಚನೆಗಳು ಬರಲಾರಂಭಿಸಿವೆ. ವಿಶೇಷವಾಗಿ ಯುವಕರಿಗೆ ಬೈಕ್‌ ಎಂದರೆ ಪ್ರಾಣ. ಅದರಲ್ಲಿ ಜಾಲಿ ರೈಡಿಂಗ್‌ ಅಂದರೆ ಬಲು ಇಷ್ಟ. ಅವರ ಕೈಗೆ ಬೈಕ್‌ ಸಿಕ್ಕರಂತೂ ರಸ್ತೆಯನ್ನು ಬಿಡಿ, ತಮ್ಮನ್ನು ತಾವೇ ಮರೆತು ಬಿಡುತ್ತಾರೆ. ಹೀಗೆ ಬೈಕ್‌ ರೈಡ್‌ನಿಂದ ಅಪಘಾತಕ್ಕೊಳಗಾಗಿ ತಮ್ಮ ಮನೆಯವರು, ಗೆಳೆಯರನ್ನು ಬಿಟ್ಟು ಶಾಶ್ವತವಾಗಿ ಕಳೆದು ಹೋದ ಅನೇಕ ಗೆಳೆಯರ ನೆನಪು ನನ್ನನ್ನು ಆಗಾಗ ಕಾಡುತ್ತವೆೆ. ಇಂದಿನ ಯುವಕರ ಬೈಕ್‌ರೈಡ್‌ ಹುಚ್ಚು ಎಷ್ಟಿರುತ್ತದೆ ಎಂದರೆ, ಅವರನ್ನು ಪ್ರೀತಿಸುವ ಜೀವಗಳಿಗಿಂತಲೂ ಹೆಚ್ಚು. ಆ ಸಮಯದಲ್ಲಿ ತಂದೆ-ತಾಯಿಯರನ್ನೂ ಅವರು ಮರೆತುಬಿಡುತ್ತಾರೆ. ಬೈಕ್‌ರೈಡ್‌ನ‌ ಎದುರು ತಂದೆತಾಯಿ ಪ್ರೀತಿಗೆ ಬೆಲೆ ಇರುವುದಿಲ್ಲ. 

ಜೀವ, ಜೀವನ ಎಂಬುದು ತುಂಬಾ ಅಮೂಲ್ಯವಾದದ್ದು. ಒಂದು ಸಲ ಕಳೆದುಕೊಂಡ ಜೀವ ಮತ್ತೆ ಬರುವುದಿಲ್ಲ. ಆಸೆ ಪಟ್ಟದ್ದೇ ಸಿಗಲಿ, ಆದರೆ, ಜವಾಬ್ದಾರಿಯೂ ನಮ್ಮ ಮೇಲಿರಬೇಕು ಅಲ್ಲವೆ? ನಮ್ಮನ್ನು ಪ್ರೀತಿಸುವವರ ಬಗ್ಗೆಯೂ ಸ್ವಲ್ಪ ಯೋಚಿಸಬೇಕು. ನಾವು ಸಂಬಂಧಗಳನ್ನು ಪ್ರೀತಿಸಬೇಕೇ ವಿನಾ ವಸ್ತುಗಳನ್ನಲ್ಲ ತಾನೆ !

– ರೋಶ್ನಿ
ದ್ವಿತೀಯ ಬಿ.ಕಾಂ.,
ಮಿಲಾಗ್ರಿಸ್‌ ಕಾಲೇಜು, ಕಲ್ಯಾಣಪುರ

Advertisement

Udayavani is now on Telegram. Click here to join our channel and stay updated with the latest news.

Next