Advertisement
ಸಂಚಾರಿ ವಿಜಯ್ ತುಂಬಾ ವಿಶ್ವಾಸದಿಂದ ಹೇಳಿಕೊಂಡರು. ಅವರು ಹಾಗೆ ಹೇಳಿಕೊಂಡಿದ್ದು ತಮ್ಮ “ಪಾದರಸ’ ಚಿತ್ರದ ಬಗ್ಗೆ. ಆಗಸ್ಟ್ 10 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಮೊದಲಿಗೆ ಮಾತಿಗಿಳಿದ ಸಂಚಾರಿ ವಿಜಯ್, “ಇಲ್ಲಿ ಪೋಲಿತನವಿದೆ, ತುಂಟತನವಿದೆ. ಇವೆಲ್ಲದರ ಜೊತೆಗೊಂದು ಒಳ್ಳೆಯ ಸಂದೇಶವೂ ಇದೆ. ನನಗೆ ಸಿಕ್ಕ ಮೊದಲ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು. ಹಾಸ್ಯ ಹೆಚ್ಚಾಗಿದೆ, ಡಬ್ಬಲ್ ಮೀನಿಂಗ್ ಛಾಯೆ ಇದೆಯಾದರೂ, ಎಲ್ಲೂ ಅಸಹ್ಯ ಹುಟ್ಟಿಸುವುದಿಲ್ಲ. ಫೈಟ್ ಬಿಟ್ಟರೆ ಇಲ್ಲಿ ಅಪ್ಪಟ ಮನರಂಜನೆಗೆ ಮೋಸವಿಲ್ಲ. ವಿನಾಕಾರಣ ಹೊಡೆದಾಟವನ್ನು ತುರುಕುವುದು ಬೇಡ ಎಂಬ ಕಾರಣಕ್ಕೆ ಅದರ ಗೋಜಿಗೆ ಹೋಗಿಲ್ಲ. ಸಮಾಜದಲ್ಲಿ ಎಲ್ಲರಲ್ಲೂ ಒಳ್ಳೆಯದು, ಕೆಟ್ಟದ್ದು ಇರುತ್ತೆ. ಆದರೆ, ಕೆಟ್ಟ ಗುಣ ತೋರಿಸಿಕೊಳ್ಳದೆ, ಒಳ್ಳೆಯ ಗುಣವನ್ನಷ್ಟೇ ತೋರಿಸುತ್ತಾರೆ. ಆದರೆ, ಅದು ಗೊತ್ತಾಗಲ್ಲ. ಜೊತೆಯಲ್ಲಿದ್ದುಕೊಂಡೇ, ಯಾಮಾರಿಸೋ ವ್ಯಕ್ತಿಗಳಿಂದ ಹೇಗೆಲ್ಲಾ ಇರಬೇಕು ಎಂಬ ಸಾರಾಂಶ ಈ ಚಿತ್ರದಲ್ಲಿದೆ. ಚಿತ್ರ ನೋಡಿದಾಗ, ಯಾರನ್ನ ಹೇಗೆ ನಂಬಬೇಕು ಎಂಬ ಪ್ರಶ್ನೆ ಕಾಡುವುದಂತೂ ನಿಜ. ಇಲ್ಲಿ ಹೊಸತನದ ನಿರೂಪಣೆ ಜೊತೆಗೆ ಕಚಗುಳಿ ಇಡುವ ಸಂಭಾಷಣೆಗಳೂ ಇವೆ. ಮೊದಲರ್ಧ ಒಂದು ರೀತಿಯ ಜರ್ನಿ ಇದ್ದರೆ, ದ್ವಿತಿಯಾರ್ಧ ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತದೆ’ ಎಂಬುದು ಸಂಚಾರಿ ವಿಜಯ್ ಮಾತು.
Related Articles
Advertisement