ಈ ಭೂಮಿಯಲ್ಲಿ ಅದೆಷ್ಟೋ ಸಹಸ್ರ ವಿಧದ ಜೀವವೈವಿಧ್ಯಗಳಿವೆ. ಇವುಗಳಲ್ಲಿ ಮಾನವ ಕೇವಲ ಒಂದು ಜೀವಿಯಷ್ಟೇ. ಆದರೆ ಮಾನವನಿಗೆ ಬೇರೆಲ್ಲ ಜೀವಿಗಳಿಗಿರದ ಬುದ್ಧಿ ಎಂಬ ಮಾಂತ್ರಿಕ ಶಕ್ತಿ ಇದೆ. ವಿದ್ಯಾಭ್ಯಾಸದ ಮೂಲಕ ಜ್ಞಾನ ಸಂಪಾದನೆಯನ್ನು ಮಾಡುವ ಅಪೂರ್ವ ಅವಕಾಶ ಮಾನವನಿಗಿದೆ. ಆದರೆ ಮಾನವ ಶ್ರಮ ಮತ್ತು ಜ್ಞಾನದ ಮಹತ್ವವನ್ನು ಅರಿಯದೇ ನಿರಂತರವಾಗಿ ಪ್ರಕೃತಿಯ ಮೇಲೆ ದಬ್ಟಾಳಿಕೆ ನಡೆಸುತ್ತಲೇ ಬಂದಿದ್ದಾನೆ.
ಕನಕಪುರ ಎಂಬ ಊರಿನಲ್ಲಿ ಸೋಮಪ್ಪ ಎಂಬ ರೈತನಿದ್ದ. ಆತನಿಗೆ ಒಂದು ಎಕರೆ ಜಮೀನು ಇತ್ತು. ಆ ಜಮೀನಿನಲ್ಲಿಯೇ ಕಷ್ಟಪಟ್ಟು ದುಡಿದು ಆರಾಮವಾದ ಜೀವನ ನಡೆಸುತ್ತಿದ್ದನು. ಆತನಿಗೆ ಒಬ್ಬನೇ ಮಗ ರಂಗ. ರಂಗ ಚಿಕ್ಕವನಿರುವಾಗಲೇ ಸೋಮಪ್ಪ ತನ್ನ ಹೆಂಡತಿಯನ್ನು ಕಳೆದುಕೊಂಡನು. ತಾಯಿ ಇಲ್ಲದ ಮಗು ಎಂದು ಬಹು ಮುದ್ದಿನಿಂದ ಸಾಕಿದ. ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಲಿ ಎಂದು ಶಾಲೆಗೆ ಸೇರಿಸಿದ. ಆದರೆ ವಿದ್ಯೆ ಅವನ ತಲೆಗೆ ಹತ್ತಲಿಲ್ಲ. ಉಡಾಫೆಯಾಗಿ, ಸೋಮಾರಿಯಾಗಿ ಬೆಳೆದ. ಸೋಮಪ್ಪನಿಗೆ ರಂಗನದೇ ಚಿಂತೆಯಾಯಿತು!
ಇದ್ದಕ್ಕಿದ್ದಂತೆ ಸೋಮಪ್ಪ ನಿತ್ರಾಣಗೊಳ್ಳಲು ಆರಂಭಿಸಿದನು. ವೈದ್ಯರು ಪರೀಕ್ಷಿಸಿ “ನೀನು ಹೆಚ್ಚು ದಿನ ಬದುಕುಳಿಯುವುದಿಲ್ಲ’ ಎಂದರು. ಸೋಮಪ್ಪ ಚಿಂತಾಕ್ರಾಂತನಾದ. ತನ್ನ ಅನಂತರ ಮಗನ ಜೀವನ ಹೇಗೆ? ಎಂದು ಆಲೋಚಿಸಿಯೇ ಹಾಸಿಗೆ ಹಿಡಿದ. ಒಂದು ದಿನ ರಂಗನನ್ನು ಕರೆದು ಒಂದು ಚೀಲವನ್ನು ಕೊಟ್ಟು “ಇದರಲ್ಲಿ ಸ್ವಲ್ಪ ಹಣವಿದೆ. ನಿನ್ನ ಜೀವನಕ್ಕೆ ಆಗುತ್ತದೆ. ಇದರಲ್ಲಿರುವ ಹಣ ಖಾಲಿಯಾದ ಮೇಲೆ ಪ್ರತೀ ಅಡಿಕೆ ಮರದ ಕೆಳಗೆ ಹಣವನ್ನು ಹುಗಿದಿಟ್ಟಿದ್ದೇನೆ. ಅದನ್ನು ತೆಗೆದುಕೋ’ ಎಂದು ಹೇಳಿ ಕಣ್ಮುಚ್ಚಿದನು.
ರಂಗ ತಂದೆ ಕೊಟ್ಟ ಹಣವನ್ನು ಖಾಲಿ ಮಾಡತೊಡಗಿದ. “ಕೂತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬಂತೆ ಸೋಮಪ್ಪ ಕೊಟ್ಟ ಹಣವೆಲ್ಲ ಖಾಲಿಯಾಯಿತು. ಮುಂದೇನು? ಎಂದು ಯೋಚಿಸಲಾರಂಭಿಸಿದ ಆತನಿಗೆ “ಪ್ರತೀ ಅಡಿಕೆ ಮರದ ಬುಡದಲ್ಲಿ ಹಣ ಇಟ್ಟಿದ್ದೇನೆ’ ಎಂದು ತಂದೆ ಹೇಳಿದ ಮಾತು ನೆನಪಾಯಿತು. ಪ್ರತೀ ಅಡಿಕೆ ಮರದ ಬುಡ ಅಗೆಯಲು ಪ್ರಾರಂಭಿಸಿದನು. ಆದರೆ ಒಂದೂ ಅಡಿಕೆ ಮರದ ಬುಡದಲ್ಲಿ ಹಣ ಸಿಗಲಿಲ್ಲ. ನಿರಾಶೆಗೊಂಡ ರಂಗ ತಂದೆಗೆ ಬೈಯಲಾರಂಭಿಸಿದನು. ಆ ಸಮಯಕ್ಕೆ ಆಗಮಿಸಿದ ಪಕ್ಕದ ಮನೆಯವನು ಹೇಗೂ ಅಡಿಕೆ ಮರದ ಬುಡ ಅಗೆದಿದ್ದೀಯಾ. ಅದಕ್ಕೆ ಸೊಪ್ಪು, ಗೊಬ್ಬರ ಹಾಕಿ ಮಣ್ಣು ಮುಚ್ಚು ಎಂದನು. ರಂಗ ಒಲ್ಲದ ಮನಸ್ಸಿನಿಂದ ಹಾಗೆಯೇ ಮಾಡಿದ. ಕಾಲಕ್ಕೆ ಸರಿಯಾಗಿ ಮಳೆಯೂ ಸುರಿಯಿತು. ಉತ್ತಮ ಫಸಲು ಬಂದಿತು. ಅದಕ್ಕೆ ಸರಿಯಾಗಿ ಅಡಿಕೆಗೆ ಉತ್ತಮ ಬೆಲೆಯೂ ಸಿಗಲಾರಂಭಿಸಿತು. ರಂಗ ತನ್ನ ಇಳುವರಿಯನ್ನು ಮಾರಿ ಹಣ ಸಂಪಾದಿಸಿದ. ಇದರಿಂದ ತನ್ನ ಜೀವನವನ್ನು ನಡೆಸಲಾರಂಭಿಸಿದ. ಈ ಹಿಂದಿನ ಸೋಮಾರಿತನವನ್ನು ಬಿಟ್ಟು ತೋಟದಲ್ಲಿ ದುಡಿಯಲಾರಂಭಿಸಿದ. ಉತ್ತಮ ಜೀವನ ಕಂಡುಕೊಂಡ. ತಂದೆ ಸೋಮಪ್ಪ ಹೇಳಿದ ಮಾತಿನ ಮರ್ಮ ಅರಿವಾಯಿತು.
ಇದೊಂದು ಕಥೆಯಷ್ಟೆ! ಆದರೆ ಇದರಲ್ಲಿರುವ ನೀತಿ ನಮ್ಮ ಜೀವನಕ್ಕೆ ಆಧಾರವಾಗಿದೆ. ಪ್ರತಿಯೊಬ್ಬರೂ ದುಡಿದು ತಿನ್ನಬೇಕು. ಬೆವರು ಸುರಿಸಿ ದುಡಿದರೆ ದೇವರು ಉತ್ತಮ ಪ್ರತಿಫಲವನ್ನು ನೀಡುತ್ತಾನೆ. ಭೂಮಿಯಲ್ಲಿ ದುಡಿಯುವುದರಿಂದ ನಮ್ಮ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಾನವನ ಅತಿಯಾದ ಸ್ವಾರ್ಥದಿಂದಾಗಿ, ಹಣದ ಮೇಲಿನ ವ್ಯಾಮೋಹದಿಂದಾಗಿ ಇಡೀ ಪ್ರಕೃತಿಯೇ ಮಾನವನ ಚಟುವಟಿಕೆಗಳಿಂದ ನಾಶವಾಗಿ ಹೋಗುತ್ತಿದೆ. ಇದರ ಪರಿಣಾಮವಾಗಿ ಕಂಡು ಕೇಳರಿಯದ ರೋಗಗಳು ಮಾನವನನ್ನು ಆವರಿಸಿಕೊಂಡಿದೆ. ಕಾಲ ಮಿಂಚಿ ಹೋಗುವ ಮೊದಲೇ ಪಶ್ಚಾತ್ತಾಪ ಪಡುವ ಮುನ್ನವೇ ಎಚ್ಚೆತ್ತುಕೊಳ್ಳೋಣ. ಮುಂದಿನ ಪೀಳಿಗೆಯವರಿಗೆ ಒಂದಿಷ್ಟು ಶುದ್ಧವಾದ ಗಾಳಿ, ಶುದ್ಧವಾದ ನೀರು ಉಳಿಸೋಣ. ಪ್ರಕೃತಿಯನ್ನು ಉಳಿಸೋಣ…ಬೆಳೆಸೋಣ….
-ಭಾಗ್ಯಶ್ರೀ, ಹಾಲಾಡಿ