ಪಂಡರಾಪುರ, ಮಹಾರಾಷ್ಟ್ರ : ಅಪರಿಚಿತ ವ್ಯಕ್ತಿಯೋರ್ವ ಬರೆದ ಲವ್ ಲೆಟರ್ 15ರ ಹರೆಯದ ವಿದ್ಯಾರ್ಥಿನಿಯ ಜೀವಕ್ಕೇ ಎರವಾದ ಘಟನೆ ಇಲ್ಲಿ ನಡೆದಿದೆ.
ವಿದ್ಯಾರ್ಥಿನಿಯ ಕೈಯಲ್ಲಿದ್ದ ಲವ್ ಲೆಟರ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡ ತರಗತಿ ಶಿಕ್ಷಕ,ವಿದ್ಯಾರ್ಥಿನಿಗೆ ಯದ್ವಾತದ್ವಾ ಬೈದು, ನಿಂದಿಸಿ, ಗದರಿಸಿ ಆಕೆಯ ತಂದೆಯನ್ನು ಶಾಲೆಗೆ ಕರೆಸಿಕೊಂಡಿದ್ದ. ಇದರಿಂದ ತೀವ್ರವಾಗಿ ಮನನೊಂದ ಬಾಲಕಿಯು ಆತ್ಮಹತ್ಯೆಗೆ ಶರಣಾಗಲು ಕಾರಣವಾಯಿತೆನ್ನಲಾಗಿದೆ.
‘ಲವ್ ಲೆಟರ್ ಬರೆದವ ಯಾರೆಂದು ನನಗೆ ಗೊತ್ತಿಲ್ಲ;ನಾನು ಯಾವುದೇ ಹುಡುಗನನ್ನು ಲವ್ ಮಾಡುತ್ತಿಲ್ಲ’ ಎಂದು ಬಾಲಕಿ ಎಷ್ಟೇ ಹೇಳಿದರೂ ಸುಮ್ಮನಾಗದ ಶಿಕ್ಷಕ ಆಕೆಯನ್ನು ಗದರಿಸುವುದನ್ನು ನಿಲ್ಲಿಸಲೇ ಇಲ್ಲ. ಮೇಲಾಗಿ ಆಕೆಯ ತಂದೆಯನ್ನು ಒಡನೆಯೇ ಶಾಲೆಗೆ ಕರೆಸಿಕೊಂಡು ಅವರಲ್ಲೂ ‘ನಿಮ್ಮ ಮಗಳು ದಾರಿ ತಪ್ಪುತ್ತಿದ್ದಾಳೆ’ಎಂದು ದೂರಿದ.
ವಿದ್ಯಾರ್ಥಿನಿಯನ್ನು ಆಕೆಯ ತಂದೆ ಶಾಲೆಯಿಂದ ಮನೆಗೆ ಕರೆದೊಯ್ದ ಸಂಜೆಯೇ ಆಕೆ ತನ್ನ ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.
ಇದನ್ನು ಅನುಸರಿಸಿ ವಿದ್ಯಾರ್ಥಿನಿ ವಾಸವಾಗಿರುವ ವಾಖರಿ ಗ್ರಾಮದ ಜನರು ಪಂಡರಾಪುರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಬಾಲಕಿಗೆ ಲವ್ ಲೆಟರ್ ಬರೆದು ಆಕೆಯ ಜೀವ ಬಲಿಪಡೆದ ಅನಾಮಿಕನನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಒತ್ತಾಯಿಸಿದರೆ.
ಲವ್ ಲೆಟರ್ ಬರೆದ ಅಪರಿಚಿತ, ಅನಾಮಿಕನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಈಗ ಸವಾಲಾಗಿದೆ. ಅವರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.