Advertisement

ಬಿಸಿನೀರಿಗೊಂದು ಲವ್‌ ಲೆಟರ್‌ ಸ್ನಾನದ ಕುರಿತು ಪುಟ್ಟ ಟಿಪ್ಪಣಿ

03:45 AM Jan 24, 2017 | |

ಸ್ನಾನ ಅನ್ನೋದು ಎಷ್ಟು ಚೆನ್ನಾದ ಕೆಲಸ ಅಂತ ಅನ್ನಿಸುತ್ತೆ. ಕೆಲಸ ಅಂದ ತಕ್ಷಣ ಅದು ಎಷ್ಟೇ ಚೆನ್ನಾಗಿರಲಿ ಅದಕ್ಕೊಂದು ಕಷ್ಟದ ಲೇಪ ಹಚ್ಚಿಬಿಡ್ತೀವಿ . ಆದರೆ ಸ್ನಾನ ಮಾತ್ರ ಇಷ್ಟದ ಕೆಲಸಾನೆ.

Advertisement

ಸ್ವತ್ಛ, ಶುಭ್ರವಾಗಿರೋದಕ್ಕೆ ಸ್ನಾನ ಮಾಡ್ತೀವಿ ಅಂದ್ರೂ ಅದೊಂದು ನೆಪ ಮಾತ್ರ.

ಗಡಿಬಿಡಿಲಿ ಸ್ನಾನ ಮಾಡೋದು ಬಿಟ್ಟು ಬಿಡಿ. ಅರಾಮಾಗಿ ನೀವು ಸ್ನಾನ ಮಾಡಿರೋದು ಜ್ಞಾಪಿಸಿಕೊಳ್ಳಿ.. ಅದೊಂದು ಅದ್ಭುತ ಫೀಲಿಂಗ್‌.

ಟವೆಲ್ಲು ಬಟ್ಟೆ ತೊಗೊಂಡು ಸ್ನಾನದ ಮನೆಯನ್ನ ಹೊಕ್ಕು, ಒಂದು ಚೊಂಬು ಬಿಸಿ ನೀರು ಮೈಮೇಲೆ ಬಿದ್ದ ತಕ್ಷಣ ನೆನಪು-ರಿವರ್ಸ್‌ ಗೇರ್‌ ನಲ್ಲಿ! – ಅಮ್ಮನ ಹಾಡು, ತಂಗಿ ಜೊತೆ ಕೀಟಲೆ ,ಅಪ್ಪನ ತಮಾಷೆ-ಕಾಳಜಿಯ ಮಾತು, ತಾತನ ನಗು- ಪ್ರೀತಿ, ಅಜ್ಜಿಯ ಧಾವಂತಗಳು, ಚಿಕ್ಕಪ್ಪನ ಧೈರ್ಯ, ಪಕ್ಕದ ಮನೆ ಕುಳ್ಳಿà ಜಲಜನ ಜೊತೆ ಜಗಳ, ಹೀಗೆ ನೂರಾರು ನೆನಪುಗಳು ಸ್ನಾನದ ಕೋಣೆಯ ಪ್ರತಿ ನಲ್ಲಿಗು, ಷವರ್‌ ಗೂ, ಅಲ್ಲಿನ ಸೋಪ್‌ ಸ್ಟಾಂಡ್‌ ಗೂ, ಅಪ್ಪನ ಸಿಂತಾಲ್‌ ಸೋಪ್‌ ಗೂ – ಹೀಗೆ ನೂರು-ನೂರು ನೆನಪು ಹಂಚಬಹುದು.

ಇಲ್ಲಾ….ನಿಮ್ಮ ಮನಸ್ಸೆಂಬ ಹಕ್ಕಿಗೆ ನೂರಾರು ಕನಸು. ಇವತ್ತು ನಾನು ಮಾಡಬೇಕಾಗಿರೊ ಕೆಲಸಾನ ಹೇಗೆ ಮಾಡಬೇಕು, ಏನೇನು ವ್ಯವಸ್ಥೆ ಮಾಡಬೇಕು, ಮುಂದೆ ದುಡ್ಡಿದಾಗ ಅಂಥಾ ಮನೆ ಕಟ್ಟಿಸಬೇಕು, ಮತ್ತು ಎಲ್ಲೆಲ್ಲಿಗೆ ಪ್ರವಾಸ ಹೋಗಬೇಕು ಇನ್ನು ಏನೇನೋ ಕನಸುಗಳು….

Advertisement

ನಾನು ಸಾಮಾನ್ಯ ಸಂಜೆ ಸ್ನಾನ ಮಾಡ್ತೀನಿ. ಕ್ಲಾಸ್‌ ಅದಮೇಲೆ, ಅರಾಮಾಗಿ ಆರರಿಂದ ಏಳು. ಈ ಹುಡುಗಿಗೆ ಏನಾಗಿದೆ ಸ್ನಾನದ ಮನೆಯಲ್ಲೆ ಎಷ್ಟೊಂದು ಹೊತ್ತು ಕಳೀತಾಳಲ್ಲ ಎಷ್ಟೊಂದು ಟೈಮ್‌ ವೇಸ್ಟ್‌.. ಅಂತ ಅಪ್ಪಂಗೆ ಚಿಂತೆ ಆದ್ರೆ ಸೋಲಾರಿನ ಬಿಸಿ ನೀರೆಲ್ಲ ಇವಳೇ ಸುರುಕೊಂಡಾಗಿರುತ್ತೆ. ಛೇ.. ಬೆಳಗ್ಗೆ ಎದ್ದು ಗೀಸರ್‌ ಆನ್‌ ಮಡಬೇಕು.. ಎಷ್ಟೊಂದು ಕರೆಂಟ್‌ ವೇಸ್ಟ್‌ ಅನ್ನೋ ಚಿಂತೆ ಅಮ್ಮಂಗೆ.

ಗೀಸರ್‌, ಸೋಲಾರ್‌, ಬಾಯ್ಲರ್ಗಿಂತ ಹಂಡೇಲಿ ಕಾಸಿದ ನೀರು ಎಷ್ಟು ಚೆಂದ. ಒಂಥರ ಹಿತ.. ಸೌದೆ ಒಲೆ ಹತ್ತಿಸೋದು, ಅದರ ಹೊಗೆ ಈಗಿನ ಕಾಲದ ನಮಗೆ ರೇಜಿಗೆ ಅನ್ನಿಸಬಹುದು ಆದ್ರು ಹಂಡೆ ನೀರು ಅಂದ್ರೆ ಏನೋ ಒಂದು ಅಟ್ಯಾಚ್‌ ಮೆಂಟ್‌.. ರಜದಲ್ಲಿ ಅಜ್ಜನ ಮನೆಗೆ ಹೋದಾಗ ಎಷ್ಟು ಆರಾಮ. ಹಂಡೆ- ಬಿಸಿ ನೀರು -ಕರೆಗಟ್ಟಿದ ಬಚ್ಚಲು- ಮೂಲೇಲಿ ಮಣೆ- ತಾಮ್ರದ ಚೊಂಬು- ಗೂಡಲ್ಲಿ ಅರಿಶಿನ, ಪಕ್ಕದಲ್ಲಿ ಸೀಗೇಕಾಯಿ ಮೆಲೆ ಚಿಕ್ಕಪ್ಪನ ಮೈಸೂರು ಸ್ಯಾಂಡಲ್‌ ಸೋಪು ಘಮ್‌ ಅಂತ.

ಯಾರು ಸ್ನಾನ ಮಾಡ್ಕೊಳ್ಳೊಕೆ ಮಾತ್ರ ಬೇಜಾರು ಪಟ್ಟುಕೋಬಾರದು.ಯಾವಾಗಲಾದರೂ ಮಾಡಿ ದಿನಕ್ಕೊಂದು ಸಲ ಅರಾಮಾಗಿ. ಸ್ನಾನದಮನೆಯಿಂದ ಬಂದ ತಕ್ಷಣ-ನಿಮ್ಮ ಮನಸು ಹಗುರ ಹಗುರ. ನೆನಪು ಬಚ್ಚಲಲ್ಲಿ ಭದ್ರ- ಕನಸು ಬಿಸಿನೀರಿನ ಆವಿ, ಹೊಗೆ ರೂಪದಲ್ಲಿ ಆಕಾಶದ ಹತ್ತಿರ.

– ನೀಲಿ ಕಣ್ಣಿನ ಹುಡುಗಿ

Advertisement

Udayavani is now on Telegram. Click here to join our channel and stay updated with the latest news.

Next