ನವ ಪ್ರತಿಭೆಗಳಾದ ಪ್ರಜಯ್ ಜಯರಾಮ್ ಹಾಗೂ ವೃಷಾ ಪಾಟೀಲ್ ನಾಯಕ-ನಾಯಕಿಯಾಗಿ ಅಭಿನಯಿಸಿರುವ “ಲವ್’ ಸಿನಿಮಾ ಈ ವಾರ ಬಿಡುಗಡೆಯಾಗಿ ತೆರೆಗೆ ಬಂದಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, “ಲವ್’ ಅಪ್ಪಟ ಲವ್ ಸ್ಟೋರಿಯ ಸಿನಿಮಾ. ಹಿಂದೂ-ಮುಸ್ಲಿಂ ಪ್ರೇಮಕಥೆ ಈ ಸಿನಿಮಾದ ಕೇಂದ್ರ ಬಿಂದು. ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿ ಪರಸ್ಪರ ಪ್ರೀತಿಸಿದಾಗ ಅವರ ನಡುವಿನ ಪ್ರೀತಿಗೆ ಎದುರಾಗುವ ಸವಾಲುಗಳು, ಸಮಸ್ಯೆಗಳೇನು? ಅಂತಿಮವಾಗಿ ಧರ್ಮ ಮತ್ತು ಪ್ರೀತಿಯ ನಡುವಿನ ಸಂಘರ್ಷದಲ್ಲಿ ಯಾವುದು ಗೆಲ್ಲುತ್ತದೆ, ಯಾವುದು ಉಳಿಯುತ್ತದೆ ಎಂಬುದೇ “ಲವ್’ ಸಿನಿಮಾ ಕಥೆಯ ಒಂದು ಎಳೆ.
ಕೆಲ ವರ್ಷಗಳ ಹಿಂದೆ ಕರಾವಳಿ ಭಾಗದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಅದನ್ನು ಸಿನಿಮ್ಯಾಟಿಕ್ ಆಗಿ ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. “ಲವ್’ ಸಿನಿಮಾದಲ್ಲಿ ಲವ್ ಸ್ಟೋರಿಯ ಜೊತೆಜೊತೆಗೆ ಧಾರ್ಮಿಕ ಮತ್ತು ಸಾಮಾಜಿಕ ಭಾವನೆಗಳು, ಅದನ್ನು ಸಮಾಜ ಸ್ವೀಕರಿಸುವ ರೀತಿ ಎಲ್ಲವನ್ನೂ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಹಿಂದೂ ಹುಡುಗನಾಗಿ ನವ ಪ್ರತಿಭೆ ಪ್ರಜಯ್ ಜಯರಾಮ್ ಹಾಗೂ ಮುಸ್ಲಿಂ ಹುಡುಗಿಯಾಗಿ ವೃಷಾ ಪಾಟೀಲ್ ಜೋಡಿ ತೆರೆಮೇಲೆ ಗಮನ ಸೆಳೆಯುತ್ತದೆ. ಉಳಿದಂತೆ ಪ್ರಭಾಕರ್ ಕುಂದರ್, ಸತೀಶ್, ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ, ರಜತ್ ಶೆಟ್ಟಿ ಮತ್ತಿತರ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಚಿತ್ರದಲ್ಲಿ ಕರಾವಳಿಯ ದೃಶ್ಯಗಳು ಮತ್ತು ಹಿನ್ನೆಲೆ ಸಂಗೀತ ತೆರೆಮೇಲೆ ಗಮನ ಸೆಳೆಯುತ್ತದೆ. ಒಂದೆರಡು ಹಾಡುಗಳು ಮೆಲೋಡಿಯಾಗಿ ಮೂಡಿಬಂದಿದ್ದು, ತಾಂತ್ರಿಕ ಕಾರ್ಯಗಳು ಗುಣಮಟ್ಟದಲ್ಲಿ ಮೂಡಿಬಂದಿದೆ. ಚಿತ್ರಕಥೆ ಮತ್ತು ನಿರೂಪಣೆಗೆ ಚಿತ್ರತಂಡ ಇನ್ನಷ್ಟು ಗಮನ ನೀಡಿದ್ದರೆ, ಹೊಸಬರ “ಲವ್’ ಸ್ಟೋರಿ ಇನ್ನಷ್ಟು ಪರಿಣಾಮಕಾರಿಯಾಗಿ ಮನಮುಟ್ಟುವ ಸಾಧ್ಯತೆಗಳಿದ್ದವು. ಒಟ್ಟಾರೆ ಹೊಸಬರ “ಲವ್’ ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್