“ಯಾರೇ ನಿನ್ನ ರಾಜ್ಕುಮಾರ?’
ಯಾವುದಾದರೂ ಹುಡುಗಿಯನ್ನು ಹೀಗೆ ಕೇಳಿದಾಗ, ಅವಳು ನಾಚಿ ನೀರಾಗದಿದ್ದರೆ ಕೇಳಿ. ಯಾಕಂದ್ರೆ, ಪ್ರತಿ ಹುಡುಗಿಯಲ್ಲೂ ತನ್ನ ರಾಜಕುಮಾರ ಹೇಗಿರಬೇಕೆಂಬ ಕುರಿತು ಕಲ್ಪನೆ ಇರುತ್ತದೆ. ನಾನು ಮಾತ್ರ ಈಗಲೂ, ನನ್ನ ರಾಜ್ಕುಮಾರ ಬಿಳಿ ಕುದುರೆ ಮೇಲೆ, ಚಂದದ ಬಟ್ಟೆ ಹಾಕ್ಕೊಂಡು ಬರ್ತಾನೆ ಅಂತಲೇ ಕಲ್ಪಿಸಿಕೊಳ್ಳುವುದು. ಅದಕ್ಕೆ ಚಿಕ್ಕ ವಯಸ್ಸಿನಲ್ಲಿ ಕೇಳಿದ್ದ ರಾಜಕುಮಾರನ ಕಥೆಗಳೇ ಕಾರಣವಿರಬಹುದು.
ಮೊನ್ನೆ ಮಾಲ್‌ನಲ್ಲಿ ಪುಟ್ಟ ಹುಡುಗಿಯೊಬ್ಬಳು, “ನಂಗೆ, ಕುದುರೆ ಮೇಲಿರೋ ರಾಜಕುಮಾರನ ಗೊಂಬೆಯೇ ಬೇಕು’ ಅಂತ ಅಳುತ್ತಿದ್ದುದನ್ನು ನೋಡಿದೆ. ಸದ್ಯ, ಈಗಲೂ ರಾಜಕುಮಾರನ ಜೊತೆ ಕುದುರೆ ಇದೆಯಲ್ಲ ಅಂತ ಖುಷಿಯಾಯ್ತು. ಕಾಲ ಬದಲಾದರೂ ಕಲ್ಪನೆಗಳು ಬದಲಾಗದೆ ಉಳಿದುಕೊಂಡಿವೆ.
“ಒಂದೂರಲ್ಲಿ ಒಬ್ಬ ರಾಜಕುಮಾರ ಇದ್ನಂತೆ’ ಅಂತ ಶುರುವಾಗುತ್ತಿದ್ದ ಅಜ್ಜಿಯ ಕಥೆಗಳೆಲ್ಲ ಎಷ್ಟು ಚೆಂದ ಇರುತ್ತಿದ್ದವು. ಕಥೆ ಮುಗಿಯುವಾಗ ನನ್ನೊಳಗೂ ರಾಜಕುಮಾರಿಯೊಬ್ಬಳು ಹುಟ್ಟಿಕೊಂಡಿರುತ್ತಿದ್ದಳು. ಶಾಲೆಯ ನಾಟಕ, ಡ್ಯಾನ್ಸ್‌ನಲ್ಲೂ ರಾಜಕುಮಾರಿ ಜೊತೆಗೊಬ್ಬ ರಾಜಕುಮಾರ ಇರ್ತಿದ್ದ. ದೊಡ್ಡವಳಾಗ್ತಾ ಇದ್ದ ಹಾಗೆ ಓದು- ಪುಸ್ತಕದ ಮಧ್ಯೆ ಆ ರಾಜಕುಮಾರ ಮರೆಯಾದನೇನೋ! ಮುಂದೆ ಸ್ವಲ್ಪ ವರ್ಷಗಳ ಕಾಲ ಆತ ನನ್ನನ್ನು ಕಾಡಲೇ ಇಲ್ಲ.
ಆದರೂ, ಇತ್ತೀಚೆಗೆ ನನಗಾಗಿ ಸಪ್ತಸಾಗರವನ್ನು ಈಜಬಲ್ಲ ರಾಜಕುಮಾರ ಇದ್ದಿದ್ದರೆ ಎಷ್ಟು ಚಂದ ಇರಿ¤ತ್ತು ಅಂತ ಅನ್ನಿಸುತ್ತಿದೆ. ದುಂಡು ಮುಖ, ಕುಡಿ ಮೀಸೆ, ಧೃಡಕಾಯ, ಗತ್ತು, ಗಾಂಭೀರ್ಯದ ನನ್ನ ರಾಜಕುಮಾರ ಎಲ್ಲಿರಬಹುದು? ಹಿಂದೆ ಮುಂದೆ ಸುತ್ತುವ ಹುಡುಗರ ಮಧ್ಯೆ ನನ್ನ ರಾಜಕುಮಾರನನ್ನು ಹುಡುಕಿ ಸೋತಿದ್ದೇನೆ. ಮನೆಯ ಮೂಲೆಯಲ್ಲಿ ಜೋಡಿಸಿಟ್ಟ ಜರಿಬಣ್ಣದ ಬಟ್ಟೆ ತೊಟ್ಟ ರಾಜಕುಮಾರನ ಗೊಂಬೆಗಾದರೂ ಜೀವ ಬರಬಾರದೆ? ಬೇಜಾರಾದಾಗ ನನ್ನ ಜೊತೆ ಮಾತಾಡಬಾರದೆ…
ಕನ್ನಡಿ ಮುಂದೆ ನಿಂತು ಗೊಂಬೆ ಜೊತೆ ಮಾತಾಡುವಾಗ ಹೀಗೆಲ್ಲಾ ಅನ್ನಿಸೋದು ನನಗೊಬ್ಬಳಿಗೇನಾ? ನಿಮಗೆಲ್ಲಾ ನಿಮ್ಮ ಕಲ್ಪನೆಯ ರಾಜಕುಮಾರ ಆಗಲೇ ಸಿಕ್ಕಿಬಿಟ್ಟಿದ್ದಾನ? ಇರಲಿ ಬಿಡಿ, ಪ್ರೀತಿಯ ಅಂಬಾರಿ ಏರಿ ಮುಂದೊಂದು ದಿನ ಆತ ಬಂದೇ ಬರುತ್ತಾನೆ. ಅಲ್ಲಿವರೆಗೂ ಕಾಯೋದ್ರಲ್ಲಿ ತಪ್ಪೇನು ಇಲ್ಲಾ ಅಲ್ವಾ?
— ಮೇಘಾ ಹೆಗ್ಡೆ