ಮೂವರಿಗೆ ಮೂರು ಬೇಸರ. ಆದರೆ, ಒಂದಕ್ಕೊಂದು ಸಂಬಂಧವಿಲ್ಲ. ಬೇಸರ ಮರೆಯಲು ಗೋವಾಕ್ಕೆ ಪಯಣ. ಅಲ್ಲಿ ಪರಿಚಯ. ಸ್ನೇಹ, ಜೊತೆಗೆ ಫ್ಲ್ಯಾಶ್‌ಬ್ಯಾಕ್, ತೆರೆದುಕೊಳ್ಳುವ ಬದುಕಿನ ಬಣ್ಣಗಳು … “ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರ ಆರಂಭವಾಗುವ ರೀತಿ ಇದು. ವಿವಿಧ ಮನಸ್ಥಿತಿಯ ಪಾತ್ರಗಳನ್ನು ಒಟ್ಟು ಸೇರಿಸಿ ದಿನಕರ್ ಒಂದು ಯೂತ್‌ಫುಲ್ ಸಿನಿಮಾ ಮಾಡಿದ್ದಾರೆ. ಇಡೀ ಸಿನಿಮಾವನ್ನು ಮುನ್ನಡೆಸಿಕೊಂಡು ಹೋಗೋದು ಇಬ್ಬರ ಬದುಕಿನ ಫ್ಲ್ಯಾಶ್‌ಬ್ಯಾಕ್. ಫ್ಲ್ಯಾಶ್‌ಬ್ಯಾಕ್ ತೆರೆದುಕೊಳ್ಳುವ ಮೂಲಕ ಸಿನಿಮಾ ಫ್ಯಾಮಿಲಿ ಡ್ರಾಮಾ ಆಗಿ ಬದಲಾಗಿ ಬಿಡುತ್ತದೆ.
ಕುಟುಂಬ, ಅಲ್ಲಿನ ಹಿರಿಯರ ಕಟ್ಟುಪಾಡು, ಯುವ ಮನಸುಗಳ ಕಸಿವಿಸಿ … ಇಂತಹ ಅಂಶಗಳ ಮೂಲಕ ಫ್ಯಾಮಿಲಿ ಆಡಿಯನ್ಸ್ ಅನ್ನು ಟಾಗೇìಟ್ ಮಾಡಿದ್ದಾರೆ. ಸಿನಿಮಾದ ಆರಂಭ ನೋಡಿದರೆ ಇದು ಮೂವರು ಯುವ ಮನಸುಗಳ ಜಾಲಿ ರೈಡ್ ಎಂಬ ಭಾವನೆ ಬರದು. ಆದರೆ, ಚಿತ್ರದಲ್ಲಿ ಸಾಕಷ್ಟು ಸೆಂಟಿಮೆಂಟ್ ದೃಶ್ಯಗಳಿವೆ. ಮುಖ್ಯವಾಗಿ ಈ ಸಿನಿಮಾ ಮೂರು ಅಂಶಗಳೊಂದಿಗೆ ಸಾಗುತ್ತದೆ. ಪ್ರೀತಿ, ಕನಸು ಮತ್ತು ವಾತ್ಸಲ್ಯ. ಈ ಮೂರು ಟ್ರ್ಯಾಕ್‌ಗಳ ಮೂಲಕ ಸಾಗುವ ಸಿನಿಮಾದಲ್ಲಿ ನಿಮಗೆ ಹೆಚ್ಚು ಆಪ್ತವಾಗುವುದು ವಾತ್ಸಲ್ಯ.
ಮಗನೊಬ್ಬ ತನ್ನ ತಾಯಿಗೆ ಹೊರ ಜಗತ್ತನ್ನು ಹೇಗೆ ತೋರಿಸುತ್ತಾನೆ, ಆಕೆಯಲ್ಲಿ ಶಕ್ತಿ, ಹೊಸ ಚೈತನ್ಯ ತುಂಬಲು ಮಗ ಅನುಸರಿಸುವ ವಿಧಾನಗಳನ್ನು ಕಟ್ಟಿಕೊಡುತ್ತಾ ಸಾಗುವ ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕಥೆಯ ವಿಷಯಕ್ಕೆ ಬರುವುದಾದರೆ ಕೆಲಸ ಬೇಸರವಾಗಿ ಅಥವಾ ಇನ್ಯಾವುದೋ ವಿಚಾರದಲ್ಲಿ ಮನಸು ನೋಯಿಸಿಕೊಂಡ ಯೂತ್ಸ್ ಲಾಂಗ್ ಡ್ರೈವ್ ಹೋಗೋದು ಅಥವಾ ಟ್ರಿಪ್ ಹೋಗೋದು ಇವತ್ತಿನ ಟ್ರೆಂಡ್ ಆಗಿಬಿಟ್ಟಿದೆ. ಅದೇ ಕಾರಣದಿಂದ ಆ ಅಂಶಗಳನ್ನಿಟ್ಟುಕೊಂಡು ಒಂದಷ್ಟು ಸಿನಿಮಾಗಳು ಬಂದಿವೆ.
“ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರ ಅದೇ ಜಾನರ್‌ಗೆ ಸೇರುವ ಸಿನಿಮಾವಾದರೂ, ಇಲ್ಲಿ ನಿಮಗೆ ಭಿನ್ನವಾಗಿ ಕಾಣುವುದು ಚಿತ್ರ ಪಡೆದುಕೊಳ್ಳುವ ಕೆಲವು ಅನಿರೀಕ್ಷಿತ ತಿರುವುಗಳಿಂದ. ಅದು ಫ್ಯಾಮಿಲಿಯಾಗಿರಬಹುದು ಅಥವಾ ಫ್ರೆಂಡ್ಸ್ ಆಗಿರಬಹುದು … ಇಂತಹ ಅಂಶಗಳ ಮೂಲಕ ಸಿನಿಮಾ ಖುಷಿಕೊಡುತ್ತದೆ. ಸಿದ್ಧಸೂತ್ರಗಳಿಂದ ಹೊರತಾದ ಸಿನಿಮಾ ಇದಾದರೂ, ದಿನಕರ್, ಸಾಧುಕೋಕಿಲ ಕಾಮಿಡಿ, ಒಂದು ಫೈಟ್, ಕ್ಲಬ್ ಸಾಂಗ್ … ಹೀಗೆ ಮಾಸ್ ಪ್ರಿಯರಿಗೂ ಮೋಸ ಮಾಡಿಲ್ಲ. ಚಿತ್ರದ ಟ್ರಕ್ಕಿಂಗ್, ಸಾಧು ಕಾಮಿಡಿ ಸೇರಿದಂತೆ ಕೆಲವು ದೃಶ್ಯಗಳನ್ನು ಟ್ರಿಮ್ ಮಾಡುವ ಅವಕಾಶ ನಿರ್ದೇಶಕರಿಗಿತ್ತು.
ಜೀವನದಲ್ಲಿ ಸಮಸ್ಯೆಗಳಿಗೆ ಜೀವನವೇ ಪರಿಹಾರ ಕೊಡುತ್ತದೆ ತಾತ್ಪಾರ್ಯದೊಂದಿಗೆ ಸಾಗುತ್ತದೆ. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಪ್ರಜ್ವಲ್, ಪ್ರೇಮ್ ಹಾಗೂ ಹರಿಪ್ರಿಯಾ ಮೂವರು ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಅದರಲ್ಲೂ ಹರಿಪ್ರಿಯಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇಷ್ಟವಾಗುತ್ತಾರೆ. ಚಿತ್ರವನ್ನು ಮುನ್ನಡೆಸುವಲ್ಲಿ ಸುಧಾರಾಣಿ ಪಾತ್ರ ಪ್ರಮುಖವಾಗಿದೆ. ಒಂದು ಹಂತದ ನಂತರ ಸುಧಾರಾಣಿ ಇಡೀ ಸಿನಿಮಾವನ್ನು ಆವರಿಸಿಕೊಳ್ಳುತ್ತಾರೆ ಮತ್ತು ಕಥೆಯನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಧನಂಜಯ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ದೀಪಕ್ ಶೆಟ್ಟಿ, ಸಂಗೀತಾ, ಚಿತ್ರಾ ಶೆಣೈ ನಟಿಸಿದ್ದಾರೆ. ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ ಚಿತ್ರಕ್ಕೆ ಪೂರಕ.
ಚಿತ್ರ: ಲೈಫ್ ಜೊತೆ ಒಂದ್ ಸೆಲ್ಫಿ
ನಿರ್ಮಾಣ: ಸಮೃದ್ಧಿ ಮಂಜುನಾಥ್
ನಿರ್ದೇಶನ: ದಿನಕರ್ ತೂಗುದೀಪ
ತಾರಾಗಣ: ಪ್ರಜ್ವಲ್, ಪ್ರೇಮ್ ಹಾಗೂ ಹರಿಪ್ರಿಯಾ, ಸುಧಾರಾಣಿ, ದೀಪಕ್ ಶೆಟ್ಟಿ, ಸಂಗೀತಾ, ಚಿತ್ರಾ ಶೆಣೈ ಮುಂತಾದವರು
* ರವಿ ರೈ