ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಮಾಡುವ ಮಂದಿಯ ಪ್ರೀತಿ, ಪ್ರೇಮ, ಪ್ರಣಯ ಕುರಿತ ಸಿನಿಮಾಗಳ ಪಟ್ಟಿಗೆ ಈಗ ಇನ್ನೊಂದು ಚಿತ್ರ ಸೇರಿಕೊಂಡಿದೆ. ಅದೇ “ಪ್ರೇಮ ಯುದ್ಧ’. ಇದು ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರ ಎಂಬುದು ವಿಶೇಷ. ಬಷೀರ್ ಆಲೂರಿ ಈ ಚಿತ್ರದ ನಿರ್ದೇಶಕರು. ಈಗಾಗಲೇ ಚಿತ್ರೀಕರಣ ಶುರುಮಾಡಿರುವ ಬಷೀರ್, ಇತ್ತೀಚೆಗೆ ಚಿತ್ರತಂಡದೊಂದಿಗೆ ಪತ್ರಕರ್ತರ ಮುಂದೆ ಕುಳಿತಿದ್ದರು.
“ಇದು ನನ್ನ ಮೊದಲ ಕನ್ನಡ ಚಿತ್ರ. ಇದೊಂದು ಯೂಥ್ಸ್ಗೆ ಸಂಬಂಧಿಸಿದ ಚಿತ್ರ. ಸಾಫ್ಟ್ವೇರ್ ಕಂಪೆನಿಯಲ್ಲಿ ದುಡಿಯುವ ಹುಡುಗಿಯರ ಸುತ್ತ ಸಾಗುವ ಕಥೆ ಇದು. ಅಲ್ಲಿ ಹುಟ್ಟುವ ಪ್ರೀತಿ, ನಡೆಯುವ ಕಿರುಕುಳ ಇತ್ಯಾದಿ ವಿಷಯಗಳನ್ನು ಇಲ್ಲಿ ಹೇಳಹೊರಟಿದ್ದೇನೆ. ಜತೆಗೊಂದು ಮರ್ಡರ್ ಮಿಸ್ಟ್ರಿ ಕೂಡ ಇದೆ. ಥ್ರಿಲ್ಲರ್ ಅಂಶವೂ ಇಲ್ಲಿರುವುದರಿಂದ ಚಿತ್ರ ಅನೇಕ ತಿರುವುಗಳೊಂದಿಗೆ ಸಾಗಲಿದೆ. ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಎಂದು ವಿವರ ಕೊಟ್ಟರು ನಿರ್ದೇಶಕ ಬಷೀರ್ ಆಲೂರಿ.
ಚಿತ್ರದಲ್ಲಿ ವಿನೋದ್ ಆಳ್ವ ಕೂಡ ನಟಿಸುತ್ತಿದ್ದಾರೆ. ಅವರಿಲ್ಲಿ ಪೊಲೀಸ್ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. “ನಿರ್ದೇಶಕ ಬಷೀರ್ ನನ್ನ ಗೆಳೆಯ. ಒಂದೊಳ್ಳೆಯ ಕಥೆ ಇದೆ. ನಾನು, ಸುಮನ್, ಸತ್ಯಪ್ರಕಾಶ್ ಸೇರಿದಂತೆ ಹೊಸ ಪ್ರತಿಭೆಗಳು ಇಲ್ಲಿವೆ. ಇದು ಬಿಗ್‌ಬಜೆಟ್ ಅಲ್ಲ, ಆದರೆ ಬೆಸ್ಟ್ ಸಿನಿಮಾ ಆಗಲಿದೆ “ಪ್ರೇಮ ಯುದ್ಧ’ ಕನ್ನಡಕ್ಕೆ ಹೊಸ ಬಗೆಯ ಚಿತ್ರವಾಗಲಿದೆ ಎಂದರು ವಿನೋದ್ ಆಳ್ವ.
ಅಂದು ಖಳನಟ ಸತ್ಯಪ್ರಕಾಶ್ ತುಂಬಾ ಖುಷಿಯ ಮೂಡ್‌ನಲ್ಲಿದ್ದರು. ವಿನೋದ್ ಆಳ್ವ ಮಾತಾಡುವಾಗ, ಸಣ್ಣ ತರಲೆ ಮಾಡುತ್ತಲೇ, ವೇದಿಕೆ ಮೇಲೆ ತಮಾಷೆಗೆ ಆಳ್ವ ಅವರಿಂದ ಬೈಸಿಕೊಂಡರು. ನಂತರ ಮೈಕ್ ಹಿಡಿದ ಸತ್ಯಪ್ರಕಾಶ್, ಒಂದೇ ಉಸಿರಲ್ಲಿ ಗಣೇಶ, ಶಿವ, ಸಾಯಿಬಾಬಾ, ಹನುಮಾನ್ ಚಾಲೀಸ್ ಹೀಗೆ ಅನೇಕ ದೇವರ ಶ್ಲೋಕಗಳನ್ನು ನಾನ್‌ಸ್ಟಾಪ್‌ನಂತೆ ಹೇಳಿ ಎಲ್ಲರನ್ನೂ ಮೂಕವಿಸ್ಮಿತಗೊಳಿಸಿರು. ಶ್ಲೋಕ ಹೇಳಿದ್ದಕ್ಕೆ ಕಾರಣವನ್ನೂ ಕೊಟ್ಟರು. “ದೇವರ ಸ್ಮರಣೆ ಮಾಡಿದರೆ, ಪಾಸಿಟಿವ್ ಎನರ್ಜಿ ಇರುತ್ತೆ. 1996ರಲ್ಲಿ “ಪೊಲೀಸ್ ಸ್ಟೋರಿ’ ಚಿತ್ರ ಮಾಡಿದಾಗಿನಿಂದಲೂ ಕನ್ನಡಿಗರು ನನ್ನನ್ನು ಹರಸಿದ್ದಾರೆ. ನನ್ನ ಮಗನನ್ನೂ ಆಶೀರ್ವದಿಸಿದ್ದಾರೆ. ಕನ್ನಡಿಗರ ಪ್ರೀತಿ ಮರೆಯಲಾರೆ ಎನ್ನುತ್ತಲೇ, ಡಾರ್ಲಿಂಗ್ ವಿನೋದ್ ಆಳ್ವ ಜೊತೆ ಹಲವು ಚಿತ್ರಗಳಲಿ ನಟಿಸಿದ್ದೇನೆ. ಇಲ್ಲೂ ನಟಿಸುವ ಅವಕಾಶ ಸಿಕ್ಕಿದೆ. ನನ್ನದು ಇಲ್ಲೊಂದು “ವೇಸ್ಟ್’ ಪಾತ್ರ. ಅಂದರೆ, ಯಥಾಪ್ರಕಾರ ನಾನು ವಿಲನ್ ಅಷ್ಟೇ. ಒಡಿಸ್ಸಾ, ಬೆಂಗಾಲಿ, ಗುಜರಾತಿ, ಮರಾಠಿ, ಇಂಗ್ಲೀಷ್ ಹೀಗೆ ಯಾವುದೇ ಭಾಷೆಯಲ್ಲಿ ಹೋದರೂ, ನನ್ನನ್ನು ಸತ್ಯಪ್ರಕಾಶ್ ಅನ್ನಲ್ಲ. “ವಿಲನ್’ ಅಂತಾರೆ. ಅಷ್ಟರಮಟ್ಟಿಗೆ ವಿಲನ್ ಪಟ್ಟ ಸಿಕ್ಕಿದೆ. ಇಲ್ಲೂ ಮುಂದುವರೆದಿದೆ’ ಅಂತ ನಕ್ಕು, ಸುಮ್ಮನಾದರು ಸತ್ಯಪ್ರಕಾಶ್.
ನಾಯಕ ಸಾಗರ್‌ಗೆ ಇದು ಮೊದಲ ಚಿತ್ರ. ಅವರಿಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾಣಿಸಿಕೊಂಡಿದ್ದಾರಂತೆ. ನಾಯಕಿ ಪ್ರಗ್ಯಾ ನಯನ್ ಅವರದು ಬಬ್ಲಿ ಹುಡುಗಿಯ ಪಾತ್ರವಂತೆ. ಹಿರಿಯ ಕಲಾವಿದರ ಜತೆ ನಟಿಸುತ್ತಿರುವ ಖುಷಿ ಆ ಹುಡುಗಿಯದು. ಉಳಿದಂತೆ ಚಿತ್ರದಲ್ಲಿ ಸಹಜಾ, ಕಾಶ್ಮೀರ ಚೆಲುವೆ ಜಹೀರಾ ನಟಿಸುತ್ತಿದ್ದಾರೆ. ಶ್ರೀನಿವಾಸ್ ವೀರಂಶೆಟ್ಟಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗಬಾಬು ಛಾಯಾಗ್ರಹಣವಿದೆ.