“ಸಾಮಾನ್ಯವಾಗಿ ನಾನು ಮೊದಲಿಗೆ ಕಥೆ ರೆಡಿ ಮಾಡಿಕೊಂಡು, ನಂತರ ಅದಕ್ಕೆ ಸೂಕ್ತವಾಗುವ ನಟರನ್ನು ಹುಡುಕಿ ಸಿನಿಮಾ ಮಾಡುತ್ತೇನೆ. ಆದ್ರೆ, ಇದೇ ಮೊದಲ ಬಾರಿಗೆ “ಲವ್ 360′ ಸಿನಿಮಾದಲ್ಲಿ ಒಬ್ಬ ಹುಡುಗ (ನಟ)ನನ್ನು ನೋಡಿದ ಮೇಲೆ ಅವನಿಗೆ ಸೂಕ್ತವಾಗುವಂಥ ಕಥೆ ರೆಡಿ ಮಾಡಿಕೊಂಡು ಸಿನಿಮಾ ಮಾಡಿದ್ದೇನೆ. ಅದಕ್ಕೆ ಕಾರಣ ಆ ಹುಡುಗನ ಮುಗ್ಧತೆ. ಆ ಹುಡುಗನೇ ನಮ್ಮ ಸಿನಿಮಾದ ಹೀರೋ ಪ್ರವೀಣ್..!’ ಇದು ಇಂದು ತೆರೆ ಕಾಣುತ್ತಿರುವ “ಲವ್ 360′ ಸಿನಿಮಾದ ನಿರ್ದೇಶಕ ಶಶಾಂಕ್ ಮಾತು.
“ಪ್ರವೀಣ್ ನಟನೆಗೆ ಬೇಕಾದ ಒಂದಷ್ಟು ತಯಾರಿ ಮಾಡಿಕೊಂಡು ಸಿನಿಮಾಕ್ಕೆ ಬರುವ ಯೋಚನೆಯಲ್ಲಿದ್ದರು. ಮೊದಲ ಬಾರಿಗೆ ಪ್ರವೀಣ್‌ನನ್ನು ನೋಡಿದಾಗಲೇ, ಈ ಹುಡುಗನಲ್ಲಿ ಏನೋ ಪ್ರತಿಭೆಯಿದೆ, ಇವನನ್ನು ಹೀರೋ ಆಗಿ ಇಂಡಸ್ಟ್ರಿಗೆ ಲಾಂಚ್ ಮಾಡಬಹುದು ಅಂಥ ಅನಿಸಿತು. ಆದ್ರೆ, ಪ್ರವೀಣ್‌ನನ್ನು ಹೀರೋ ಆಗಿ ಲಾಂಚ್ ಮಾಡುವಂಥ ಕಥೆ ಆಗ ನನ್ನಲ್ಲಿ ಇರಲಿಲ್ಲ. ಕೊನೆಗೆ ಪ್ರವೀಣ್‌ಗೆ ಒಪ್ಪುವಂಥ ಕಥೆ ಮಾಡಿಕೊಂಡು, “ಲವ್ 360′ ಸಿನಿಮಾ ಶುರು ಮಾಡಿದೆವು’ ಎನ್ನುತ್ತಾರೆ ನಿರ್ದೇಶಕ ಶಶಾಂಕ್.
“ಪ್ರವೀಣ್ ಮೂಲತಃ ಡಾಕ್ಟರ್. ಅವರ ತಂದೆ, ತಾಯಿ, ತಮ್ಮ ಎಲ್ಲರೂ ವೃತ್ತಿಯಲ್ಲಿ ಡಾಕ್ಟರ್. ಅನೇಕ ವರ್ಷಗಳಿಂದ ಬಳ್ಳಾರಿಯಲ್ಲಿ ನಿಸ್ವಾರ್ಥವಾಗಿ ವೈದ್ಯಕೀಯ ಸೇವೆಯಲ್ಲಿ ಅವರ ಇಡೀ ಕುಟುಂಬ ತೊಡಗಿಕೊಂಡಿದೆ. ಡಾಕ್ಟರ್ ಆಗಿ ಒಳ್ಳೆಯ ಹೆಸರು, ಕೈತುಂಬ ಸಂಪಾದನೆ ಮಾಡಬಹುದಾದ ಎಲ್ಲ ಅವಕಾಶಗಳಿದ್ದರೂ, ಪ್ರವೀಣ್‌ಗೆ ಅಭಿನಯದ ಕಡೆಗಿದ್ದ ಪ್ಯಾಷನ್ ಅವರನ್ನು ಸಿನಿಮಾದತ್ತ ಕರೆದುಕೊಂಡು ಬಂದಿತ್ತು. ಈ ಎಲ್ಲ ಅಂಶಗಳು “ಲವ್ 360′ ಸಿನಿಮಾ ಮಾಡೋದಕ್ಕೆ ಕಾರಣವಾಯ್ತು. ಇಂಥ ಪ್ಯಾಷನ್, ಡೆಡಿಕೇಶನ್ ಇರುವಂಥ ಹುಡುಗನನ್ನು ಒಳ್ಳೆಯ ಸಿನಿಮಾ ಮೂಲಕ, ಒಳ್ಳೆ ರೀತಿಯಲ್ಲಿ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸುವ ಜವಾಬ್ದಾರಿ ನನಗೂ ಇತ್ತು. ಹಾಗಾಗಿ ಒಂದಷ್ಟು ಸಮಯ ತೆಗೆದುಕೊಂಡು, ಪ್ರವೀಣ್‌ಗೆ ಮತ್ತು ಇಂದಿನ ಆಡಿಯನ್ಸ್‌ಗೆ ಒಪ್ಪುವಂಥ ಸಬ್ಜೆಕ್ಟ್ ಮಾಡಿಕೊಂಡು “ಲವ್ 360′ ಸಿನಿಮಾ ಮಾಡಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ ಶಶಾಂಕ್.
“ಕಳೆದ ಎರಡು-ಮೂರು ತಿಂಗಳಿನಿಂದ “ಲವ್ 360′ ಸಿನಿಮಾದ ಪ್ರಮೋಶನ್ಸ್ ಜೋರಾಗಿ ನಡೆಯುತ್ತಿದೆ. ಸಿನಿಮಾದ ಟೀಸರ್, ಟ್ರೇಲರ್, ಸಾಂಗ್ಸ್ ಎಲ್ಲವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಅದರಲ್ಲೂ ಸಿದ್ಧ್ ಶ್ರೀರಾಮ್ ಹಾಡಿರುವ “ಜಗವೇ ನೀನು ಗೆಳತಿಯೇ…’ ಹಾಡಂತೂ “ಲವ್ ಆ್ಯಂಥಮ್’ನಂತೆ, ಎಲ್ಲರ ಬಾಯಲ್ಲೂ ಗುನುಗುಡುತ್ತಿದೆ. ಸಿನಿಮಾದ ಹೀರೋ ಪ್ರವೀಣ್, ನಾಯಕಿ ರಚನಾ ಇಂದರ್ ಕೆಮಿಸ್ಟ್ರಿ ತುಂಬ ಚೆನ್ನಾಗಿ ವರ್ಕೌಟ್ ಆಗಿದೆ. ನನ್ನ ಹಿಂದಿನ ಸಿನಿಮಾಗಳಲ್ಲಿ ಪರಿಚಯಿಸಿದ ಬಹುತೇಕ ಎಲ್ಲ ಹೊಸ ಕಲಾವಿದರನ್ನು ಆಡಿಯನ್ಸ್ ಇಷ್ಟಪಟ್ಟಿದ್ದಾರೆ. ಆ ಸಾಲಿಗೆ ಪ್ರವೀಣ್ ಕೂಡ ಸೇರಲಿದ್ದಾರೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ ನಿರ್ದೇಶಕ ಶಶಾಂಕ್.
ಚಿತ್ರ 150 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆ ಕಾಣುತ್ತಿದ್ದು, ಒಂದು ವಾರಗಳ ಬಳಿಕ “ಲವ್ 360′ ಸಿನಿಮಾವನ್ನು ಇತರ ಭಾಷೆಗಳಲ್ಲಿ ಮತ್ತು ಓವರ್‌ಸೀಸ್‌ನಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. “ಲವ್ 360′ ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತವಿದೆ. ಪ್ರವೀಣ್, ರಚನಾ ಇಂದರ್ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರೀ, ಸುಕನ್ಯಾ ಗಿರೀಶ್ ಹೀಗೆ ದೊಡ್ಡ ಕಲಾವಿದರ ತಾರಾಗಣ ಚಿತ್ರದಲ್ಲಿದೆ.
-ಜಿ.ಎಸ್. ಕಾರ್ತಿಕ ಸುಧನ್