Advertisement

ಗವಿಶ್ರೀ ನಗರದಲ್ಲಿ ಕವಿದ ಸಮಸ್ಯೆಗಳ ಕಾರ್ಮೋಡ

04:28 PM Oct 05, 2018 | |

ಕೊಪ್ಪಳ: ಇಲ್ಲಿನ ಗವಿಶ್ರೀ ನಗರವು ಅಭಿವೃದ್ಧಿ ಪತದತ್ತ ಮುನ್ನಡೆಯುತ್ತಿದೆ ಎನ್ನುವ ಮಾತಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಎಲ್ಲಿ ನೋಡಿದರಲ್ಲಿ ಜಾಲಿ ಗಿಡಗಳದ್ದೇ ದರ್ಬಾರಾಗಿದೆ. ಇವುಗಳ ತೆರವಿಗೆ ನಿವೇಶನಗಳ ಮಾಲಿಕರಿಗೆ ನಗರಸಭೆಯು ಕಟ್ಟು ನಿಟ್ಟಿನ ಸೂಚನೆ ನೀಡಿಲ್ಲ. ಇದರಿಂದ ಈ ವಾರ್ಡ್‌ನ ಜನ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಕೊಪ್ಪಳದಲ್ಲಿ ಬಿ.ಟಿ. ಪಾಟೀಲ ನಗರ ಬಿಟ್ಟರೆ ಗವಿಶ್ರೀ ನಗರವೇ ಅಭಿವೃದ್ಧಿಯ ಪಥದಲ್ಲಿ ಒಂದು ಹೆಜ್ಜೆ ಮುಂದಿದೆ. ಆದರೂ ಕೆಲವು ಸೌಕರ್ಯಗಳು ವಾರ್ಡ್‌ನಲ್ಲಿಲ್ಲ. ಇಲ್ಲಿ ಲೇಔಟ್‌ಗಳು ಹೆಚ್ಚಿವೆ. ಆದರೆ ಖಾಲಿ ನಿವೇಶನಗಳ ಸಂಖ್ಯೆಯೂ ಅಷ್ಟೆ ಇವೆ. ಕೆಲವರು ಮನೆ ನಿರ್ಮಿಸಿಕೊಂಡಿದ್ದರೆ, ಇನ್ನು ಕೆಲವರು ನಿವೇಶನ ಖಾಲಿ ಬಿಟ್ಟಿದ್ದಾರೆ. ಆ ಜಾಗದಲ್ಲಿ ಜಾಲಿಗಿಡ, ಮುಳ್ಳಿನ ಪೊದೆ ಬೆಳೆದು ಹಾವು-ಚೇಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ನಗರದ ಸೌಂದರ್ಯವೇ ಹಾಳಾಗಿದ್ದು, ಖಾಲಿ ನಿವೇಶನಗಳ ಮಾಲಿಕರಿಗೆ ನಗರಸಭೆಯು ಖಡಕ್‌ ಸೂಚನೆ ನೀಡಿ ಖಾಲಿ ನಿವೇಶನಗಳ ಸ್ವಚ್ಛತೆಗೆ ಮುಂದಾಗಿಲ್ಲ. ಇದು ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿನ ಜನ ಮೊದಲೇ ಸಭ್ಯಸ್ಥರಾಗಿದ್ದರಿಂದ ಯಾರಿಗೆ ಹೇಳ್ಳೋಣ ನಮ್ಮ ಸಮಸ್ಯೆ ಎನ್ನುತ್ತಿದ್ದಾರೆ.

ಇನ್ನೂ ನಗರದಲ್ಲಿನ 3ನೇ ಕ್ರಾಸ್‌ ನಿತ್ಯವೂ ಜನದಟ್ಟಣೆಯಿಂದ ಕೂಡಿರುತ್ತದೆ. ಈ ರಸ್ತೆ ಈಗಲೂ ಮಣ್ಣಿನ ರಸ್ತೆಯಾಗಿದೆ. ಕಾಂಕ್ರೀಟ್‌ ರಸ್ತೆಯನ್ನೇ ಕಂಡಿಲ್ಲ. ತಗ್ಗು ದಿನ್ನೆಗಳ ಮಧ್ಯೆ ನಿತ್ಯವೂ ಜನರು ಸಂಚಾರ ಮಾಡಬೇಕಾದ ಸ್ಥಿತಿ ಬಂದಿದೆ. ಇದು ಕಪ್ಪು ಭೂಮಿಯಾಗಿದ್ದರಿಂದ ಇಲ್ಲಿನ ಜನ ಮಳೆ ಬಂದರೆ ನೂರೆಂಟು ತಾಪತ್ರೆಯ ಅನುಭವಿಸುತ್ತಾರೆ. ಕೆಲವೆಡೆ ರಸ್ತೆ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳೇ ಸ್ವಂತ ಹಣ ಹಾಕಿ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ.

ಅಚ್ಚರಿಯಂದರೆ, ಮುಖ್ಯ ರಸ್ತೆಯನ್ನೇ ಬಿಟ್ಟು ಓಣಿಯಲ್ಲಿ ಕೆಲವೆಡೆ ರಸ್ತೆ ನಿರ್ಮಿಸಿದ್ದಾರೆ. ಆದರೂ ಕೆಲವು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿವೆ. ಇನ್ನೂ ಮಂಗಳಾ ಆಸ್ಪತ್ರೆ ಹಿಂಭಾಗದಲ್ಲಿನ ಓಣಿಗೆ ಇನ್ನೂ ಕುಡಿಯುವ ನೀರಿನ ಪೈಪ್‌ಲೈನ್‌ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಇಲ್ಲಿನ ಜನ ನಿತ್ಯವೂ ನೀರಿಗಾಗಿ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ಬಂದಿದೆ. ಅದನ್ನು ಬಿಟ್ಟರೆ ಉಳಿದಂತೆ ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯೆಯಿಲ್ಲ. ವಾರ್ಡ್‌ನ ಕೆಲವುಕಡೆ ಚರಂಡಿ ನಿರ್ಮಿಸಿಲ್ಲ.

ಕುಡುಕರ ತಾಣ
ಗವಿಶ್ರೀ ನಗರ ಸಭ್ಯತೆಗೆ ಹೆಸರಾಗಿದ್ದರೂ ಸಹಿತ ಸಂಜೆಯಾದರೆ ಸಾಕು ಖಾಲಿ ನಿವೇಶನಗಳಲ್ಲಿ, ಜಾಲಿಗಿಡದ ಪೊದೆಗಳಲ್ಲಿ ಯುವಕರು ಮದ್ಯದ ಅಮಲಿನಲ್ಲಿ ತೇಲುತ್ತಿರುತ್ತಾರೆ. ಮದ್ಯದ ಬಾಟಲಿಗಳು ರಸ್ತೆ ಮೇಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿಸಾಡಿಸುತ್ತಾರೆ. ಹೊರಗಡೆಯಿಂದ ತಂದ ಆಹಾರ ಪದಾರ್ಥಗಳನ್ನು ಅರೆಬರೆ ತಿಂದು ಎಲ್ಲೆಂದರಲ್ಲಿ ಎಸೆದು ಮದ್ಯದ ಅಮಲಲ್ಲಿ ಬೈಕ್‌ನ್ನು ಜೋರಾಗಿ ಓಡಿಸುತ್ತಾರೆ. ಇದರಿಂದ ವೃದ್ಧರ ಹಾಗೂ ಮಕ್ಕಳ ನೆಮ್ಮದಿ ಹಾಳಾಗಿದೆ. ಪೊಲೀಸರು ಓಣಿಯಲ್ಲಿ ಗಸ್ತು ತಿರುಗಿದರೂ ಪುಂಡರ ಉಪಟಳ ಇನ್ನೂ ತಪ್ಪಿಲ್ಲ.

Advertisement

ಪ್ರತಿನಿತ್ಯ ಬರಲ್ಲ ನಗರಸಭೆ ಕಸದ ಗಾಡಿ
ಕಸದ ವಾಹನ 13-14 ದಿನಕ್ಕೊಮ್ಮೆ ಓಣಿಯಲ್ಲಿ ಸುತ್ತಾಟ ನಡೆಸುತ್ತದೆಯಂತೆ. 2-3 ದಿನಕ್ಕೆ ಒಮ್ಮೆ ವಾಹನದ ಸುತ್ತಾಟವನ್ನೇ ನೋಡಿಲ್ಲ ಎನ್ನುತ್ತಿದೆ ಜನ. ಇನ್ನೂ ಚರಂಡಿಗಳ ಸ್ವಚ್ಛತೆಗೆ ಪೌರ ಕಾರ್ಮಿಕರು ಸ್ವಯಂ ಪ್ರೇರಿತವಾಗಿ ಬರಲ್ಲ. ನಾವೇ ನಗರಸಭೆಗೆ ದೂರು ಕೊಡಬೇಕು. ಅದೂ ದೂರು ಕೊಟ್ಟವರ ಮನೆ ಮುಂದೆ ಅಷ್ಟೆ ಸ್ವಚ್ಛ  ಮಾಡುತ್ತಾರೆ. ಪೂರ್ಣ ಕೆಲಸ ಮಾಡದೆ ನಮ್ಮ ಕೆಲಸ ಮುಗಿಯಿತು ಎಂದು ಅಲ್ಲಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಕಾರ್ಮಿಕರ ಕಾರ್ಯ ವೈಖರಿಗೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸಭ್ಯಸ್ಥರ ವಾರ್ಡ್‌ ಎಂದೆನಿಸಿರುವ ಗವಿಶ್ರೀ ನಗರ ನೋಡಲು ಮೇಲ್ನೋಟಕ್ಕೆ ಬೆಳ್ಳಗೆ  ಣಿಸಿಕೊಂಡರು ಒಳಗೆ ನೂರೆಂಟು ಸಮಸ್ಯೆಗಳಿವೆ. ಸಮಸ್ಯೆಗಳ ಬಗ್ಗೆ ನಗರಾಡಳಿತ ಜಿಲ್ಲಾಡಳಿತ, ವಾರ್ಡ್‌ನ ಸದಸ್ಯರು ಸ್ವಲ್ಪ ಕಣ್ತೆರೆದು ನೋಡಬೇಕಿದೆ.

ಗವಿಶ್ರೀ ನಗರ ಅಭಿವೃದ್ಧಿ ಹೊಂದುತ್ತಿದ್ದರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಲ್ಲಿ ಖಾಲಿ ನಿವೇಶನಗಳಲ್ಲಿ ಜಾಲಿಗಿಡಗಳು ಹೆಚ್ಚಾಗಿವೆ. ಇದರಿಂದ ಹಲವು ಸಮಸ್ಯೆ ಉಲ್ಬಣಿಸುತ್ತಿವೆ. ಕೆಲವು ಕಡೆ ಸಿಮೆಂಟ್‌ ರಸ್ತೆಗಳನ್ನೆ ನಿರ್ಮಿಸಿಲ್ಲ. ಚರಂಡಿ ಸ್ವಚ್ಛತೆಗೆ ನಾವು ದೂರು ಕೊಟ್ಟರೆ, ನಮ್ಮ ಮನೆಯ ಮುಂದೆ ಅಷ್ಟೆ ಸ್ವಚ್ಛ ಮಾಡುತ್ತಾರೆ. ಕಸದ ಗಾಡಿ 10-15 ದಿನಕ್ಕೊಮ್ಮೆ ಬರುತ್ತದೆ.
ಎಚ್ಚರೇಶ ಹೊಸಮನಿ,
ಗವಿಶ್ರೀ ನಗರದ ಅಭಿವೃದ್ಧಿ ಸಂಘದ ಅಧ್ಯಕ್ಷ 

ನಮ್ಮ ನಗರದಲ್ಲಿ ಹಲವು ಖಾಲಿ ನಿವೇಶನಗಳಿವೆ. ಅಲ್ಲಲ್ಲಿ ಜಾಲಿಗಿಡಗಳು ಬೆಳೆದಿದ್ದು, ಖಾಲಿ ನಿವೇಶನಗಳಲ್ಲಿ ಸಂಜೆ ಕುಡುಕರ ಹಾವಳಿ ಹೆಚ್ಚಾಗಿದೆ. ರಾತ್ರಿ ಮದ್ಯ ಸೇವಿಸಿ ರಸ್ತೆ ಮೇಲೆಲ್ಲ ಬಾಟಲಿ ಒಡೆದು ಹೋಗುತ್ತಿದ್ದಾರೆ. ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಬಂಧಿಸಿದವರು ಕ್ರಮಕೈಗೊಳ್ಳಬೇಕಿದೆ.
 ಸುರೇಶ ಕುಲಕರ್ಣಿ, ಸ್ಥಳೀಯ ನಿವಾಸಿ.

ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next