ಕೆ.ಆರ್.ನಗರ: ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ 36 ಸಾವಿರ ಮತಗಳ ಅಂತರದಿಂದ ಪರಾಭವಗೊಂಡು, ಬಸವಣ್ಣನ ತತ್ವ ಪಾಲಿಸದ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಟೀಕಿಸಿದರು.
ಪಟ್ಟಣದ ಪುರಸಭಾ ಬಯಲು ರಂಗ ಮಂದಿರದಲ್ಲಿ ನಡೆದ ಬಸವ ಜಯಂತಿಯಲ್ಲಿ ವೀರಶೈವ ಲಿಂಗಾಯತ ಹಿಂದೂ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಧರ್ಮ ಒಡೆಯುವವರು ಮತ್ತು ವಚನ ಪಾಲಿಸದವರು ಪತನದ ಹಾದಿ ಹಿಡಿಯುತ್ತಾರೆ ಎಂಬುದಕ್ಕೆ ಈ ಎರಡು ಘಟನೆಗಳು ಜ್ವಲಂತ ಸಾಕ್ಷಿ ಎಂದರು.
ಶಾಸಕರ ಮನಸ್ಸಿಗೆ ಘಾಸಿ: ಮಾತಿನುದ್ದಕ್ಕೂ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಮಾಜಿ ಸಚಿವರು, ಶಾಸಕರ ಮನಸ್ಸಿಗಾದ ಘಾಸಿಯಿಂದಲೇ ಸಮ್ಮಿಶ್ರ ಸರ್ಕಾರ ಪತನಗೊಂಡಿತು ಎಂದು ತಿಳಿಸಿದರು.
ದೇವರಿಗೆ ಬಿಟ್ಟಿದ್ದೇನೆ: ತಾನು ಸದಾ ಸತ್ಯವನ್ನೇ ಮಾತನಾಡುತ್ತೇನೆ. ಇದರಿಂದ ಕೆಲವರು ತನ್ನನ್ನು ವಿವಾದಾತ್ಮಕ ವ್ಯಕ್ತಿ ಎಂದು ಕರೆಯುತ್ತಾರೆ. ಆದರೆ, ಬಸವಣ್ಣನ ನೆಲದಲ್ಲಿ ಹುಟ್ಟಿರುವ ನಾವು ಅಂಜಿಕೆಗಳಿಗೆ ಹೆದರದೆ ಸತ್ಯ ಹೇಳಿ ಮುಂದಿನದನ್ನು ದೇವರಿಗೆ ಬಿಡಬೇಕೆಂದರು.
ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಹಾಗಾಗಿ ಸ್ವರ್ಗದ ಮಾತನಾಡದ ಎಚ್.ಡಿ.ಕುಮಾರಸ್ವಾಮಿ ನರಕ ಸೃಷ್ಟಿಯ ವರ್ತನೆ ತೋರಿಸಿ ತಮ್ಮ ಅಧಿಕಾರ ಕಳೆದುಕೊಂಡರು ಎಂದು ಛೇಡಿಸಿದ ಎಚ್.ವಿಶ್ವನಾಥ್, ಧರ್ಮದ ವಿಚಾರದಲ್ಲಿ ಮೂಗು ತೂರಿಸುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.