ಬೆಂಗಳೂರು: ಟೀ ಕುಡಿಯಲು ಹೋದ ವೇಳೆ ಕಾರಿನಲ್ಲಿಟ್ಟದ 10 ಲಕ್ಷ ನಗದನ್ನು ದುಷ್ಕರ್ಮಿಗಳು ಲಪಟಾಯಿಸಿ ಪರಾರಿಯಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿಯ ನಿವಾಸಿ ಶ್ರೀನಿವಾಸನ್ ಹಣ ಕಳೆದುಕೊಂಡ ವ್ಯಕ್ತಿ. ಡಿ. 9ರಂದು ಪ್ರಕರಣ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಶ್ರೀನಿವಾಸನ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುವ ಚಂದ್ರಾಲೇಔಟ್ ಪೊಲೀಸರು, ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ. ಹಣ ಕಳೆದುಕೊಂಡಿರುವ ಶ್ರೀನಿವಾಸ್ ಅವರು ಚಂದ್ರಲೇಔಟ್‌ನಲ್ಲಿ ಜಯಪ್ರಕಾಶ್ ಶೆಟ್ಟಿ ಎಂಬುವವರಿಗೆ ಸೇರಿದ ಅಪಾರ್ಟ್ ಮೆಂಟ್‌ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಯಪ್ರಕಾಶ್ ಶೆಟ್ಟಿ ಅವರು ತಮ್ಮ ಮೊಮ್ಮಗಳ ವಿವಾಹ ಸಮಾರಂಭಕ್ಕೆ ಹಣದ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬರುವಂತೆ ಡಿ.9ರಂದು ಸೂಚಿಸಿದ್ದರು. ಅವರ ಸೂಚನೆಯಂತೆ ಜಯಪ್ರಕಾಶ್ ಶೆಟ್ಟಿ ಅವರ ಸ್ಕೋಡಾ ಕಾರಿನಲ್ಲಿ ಚಾಲಕನೊಂದಿಗೆ ಶ್ರೀನಿವಾಸ್ ಅವರು ಚಂದ್ರಲೇಔಟ್‌ನಲ್ಲಿರುವ ಎರಡು ಬ್ಯಾಂಕ್‌ಗಳಿಗೆ ತೆರಳಿ ಒಟ್ಟು ಹತ್ತು ಲಕ್ಷ ರೂ. ಡ್ರಾ ಮಾಡಿಕೊಂಡು ಮನೆಗೆ ಹಿಂತಿರುಗುತ್ತಿದ್ದರು.
ಇದನ್ನೂ ಓದಿ: ಬೀದರನಲ್ಲಿ ರಾಜ್ಯ ಯುವಜನ ಮೇಳ ನಡೆಯಲಿ
ಈ ವೇಳೆ ಅತ್ತಿಗುಪ್ಪೆ ಬಳಿ ಕಾರಿನ ಟೈಯರ್ ಪಂಚರ್ ಆಗಿತ್ತು. ಹೀಗಾಗಿ ಟೈಯರ್ ಬದ ಲಾವಣೆ ಮಾಡಿ ಕೊಂಡು ಚಂದ್ರ ಲೇಔಟ್ 60 ಅಡಿರಸ್ತೆ, ಸ್ಪಿರಿಟ್ ಜಂಕ್ಷನ್ ಬಳಿ ಕಾರನ್ನು ರಸ್ತೆ ಬದಿ ನಿಲುಗಡೆ ಮಾಡಿ ಚಾಲಕನ ಜತೆಗೆ ಶ್ರೀನಿವಾಸ್ ಟೀ ಕುಡಿಯಲು ಹೋಗಿದ್ದರು.
ಇದನ್ನು ಗಮನಿಸಿದ ಖದೀಮರು, ಆ ವೇಳೆ ಕಾರಿನ ಮಂಭಾಗದ ಬಾಗಿಲಿನ ಗ್ಲಾಸ್ ಒಡೆದ ಕಳ್ಳರು 10 ಲಕ್ಷ ರೂ. ಹಣವಿದ್ದ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾರೆ. ಶ್ರೀನಿವಾಸ್ ಟೀ ಕುಡಿದು ವಾಪಾಸಾದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಸುಪಾಸಿನಲ್ಲಿರುವ ಸಿಸಿ ಕ್ಯಾಮರಾ ಪರಿಶೀಲಿಸಿದ್ದು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.