ಕಾಸರಗೋಡು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಇತ್ತೀಚೆಗೆ ನಡೆಸಿದ ಹರತಾಳದ ಸಂದರ್ಭ ಉಂಟಾದ ವ್ಯಾಪಕ ಹಾನಿಗೆ ಸಂಬಂಧಿಸಿ ಹರತಾಳಕ್ಕೆ ನೇತೃತ್ವ ನೀಡಿದ ಪಿಎಫ್‌ಐ ನೇತಾರರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಮುಟ್ಟುಗೋಲು ಕ್ರಮಕ್ಕೆ ಕಂದಾಯ ಅಧಿಕಾರಗಳ ನೆರವಿನೊಂದಿಗೆ ಪೊಲೀಸರು ಚಾಲನೆ ನೀಡಿದ್ದಾರೆ.
ಮುಟ್ಟುಗೋಲು ಹಾಕುವ ಪೂರ್ಣ ಮಾಹಿತಿಯನ್ನು ರಾಜ್ಯ ಭೂಕಂದಾಯ ಆಯುಕ್ತರಿಗೆ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಲಾಗಿದೆ.
ಇದರಂತೆ ಕಾಸರಗೋಡು ಜಿಲ್ಲೆಯ ಐವರು ಪಿಎಫ್‌ಐ ನೇತಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಅಗತ್ಯದ ಕ್ರಮಗಳಲ್ಲಿ ಪೊಲೀಸರು ತೊಡಗಿದ್ದಾರೆ.
ಕಾಸರಗೋಡು ತಾಲೂಕಿನಲ್ಲಿರುವ ಪಿಎಫ್‌ಐ ಜಿಲ್ಲಾ ಸಮಿತಿ ಕಚೇರಿ ಸಮಿತಿ ಕಾರ್ಯವೆಸಗುತ್ತಿದ್ದ ಪೆರುಂಬಳ ಬಳಿಯ ಚಂದ್ರಗಿರಿ ಚಾರಿಟೆಬಲ್ ಟ್ರಸ್ಟ್‌ಗೆ ಸೇರಿದ ಜಾಗ ಹಾಗೂ ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಕ್ರಮ ಆರಂಭಿಸಲಾಗಿದೆ. ಇದಲ್ಲದೆ ಪಿಎಫ್‌ಐ ನೇತಾರರಾದ ಮೀಂಜದ ಮೊಹಮ್ಮದಲಿ, ನಾಯಮ್ಮಾರಮೂಲೆಯ ಎನ್.ಯು. ಅಬ್ದುಲ್ ಸಲಾಂ, ಆಲಂಪಾಡಿಯ ಉಮ್ಮರ್ ಫಾರೂಕ್, ಹೊಸದುರ್ಗ ತಾಲೂಕಿನ ನಂಙರತ್ತ್ ಸಿರಾಜುದ್ದೀನ್, ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ತೆಕ್ಕೇ ತೃಕ್ಕರಿಪುರ ಗ್ರಾಮದ ಸಿ.ಟಿ. ಸುಲೈಮಾನ್ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ.
ಒಟ್ಟು ನಷ್ಟ 5.20 ಕೋಟಿ ರೂ.
ಪಿಎಫ್‌ಐ ಮುಖಂಡರನ್ನು ಎನ್‌ಐಎ ಬಂಧಿಸಿದ್ದನ್ನು ಪ್ರತಿಭಟಿಸಿ 2022 ಸೆ. 22ರಂದು ಪಿಎಫ್‌ಐ ಕೇರಳ ರಾಜ್ಯ ಘಟಕ ಮಿಂಚಿನ ಹರತಾಳಕ್ಕೆ ಕರೆ ನೀಡಿತ್ತು. ಇದರಿಂದ ರಾಜ್ಯದಲ್ಲಿ ಒಟ್ಟು 5.20 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಹೈಕೋರ್ಟ್‌ಗೆ ಪೊಲೀಸರು ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.