Advertisement
ಕಾಫಿನಾಡ ಸದ್ಯದ ವಾತಾವರಣ ಮಲೆನಾಡಿಗರ ಜೀವಾಳ ಕಾಫಿ ಈ ವರ್ಷವೂ ಮಣ್ಣು ಪಾಲಾಗುತ್ತಾ ಎಂಬ ಅನುಮಾನ ದಟ್ಟವಾಗಿದೆ. ಜಿಲ್ಲೆಯಲ್ಲಿ ಅಂದಾಜು ಒಂದು ಲಕ್ಷ ಹೆಕ್ಟೇರ್‍ನಲ್ಲಿ ಅರೇಬಿಕಾ ಹಾಗೂ ರೋಬೋಸ್ಟಾ ಕಾಫಿಯನ್ನ ಬೆಳೆದಿದ್ದಾರೆ. ಆದರೆ, ಕಾಫಿ ಈ ವರ್ಷವೂ ಬೆಳೆಗಾರರ ಕೈಸೇರವುದು ಅನುಮಾನವೆನಿಸಿ ಬೆಳೆಗಾರರು ಕಂಗಾಲಾಗಿದ್ದಾರೆ.
Related Articles
Advertisement
ಕಳೆದ ಮೂರ್ನಾಲ್ಕು ವರ್ಷದಿಂದಲೂ ಕಾಫಿ ಬೆಳೆಗಾರರ ಗೋಡಾನ್ ಸೇರಿದ್ದಕ್ಕಿಂತ ಮಣ್ಣು ಸೇರಿ ಅದೇ ತೋಟಕ್ಕೆ ಗೊಬ್ಬರವಾಗಿದ್ದೆ ಹೆಚ್ಚು. ಮಳೆಯಿಂದ ರೈತರು ಸಾಲಗಾರರಾಗಿದ್ದೇ ಜಾಸ್ತಿ. ಈ ವರ್ಷ ಮುಂಗಾರು ಆಶಾದಾಯಕವಾಗಿತ್ತು. ಕಾಫಿಗೆ ಸಕಾಲಕ್ಕೆ ಮಳೆಯಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಕಾಫಿನಾಡಲ್ಲಿ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಯಾವಾಗಂದರೆ ಆವಾಗ ಮಳೆ-ಮೋಡ-ಬಿಸಿಲಿನಿಂದ ಬೆಳೆಗಾರರು ಬಸವಳಿದಿದ್ದಾರೆ.
ಪ್ರಕೃತಿ ಮುಂದೆ ಸೋತು ಕೈಚೆಲ್ಲಿ ಕೂತಿದ್ದಾರೆ. ಮಳೆಯಲ್ಲೇ ಕಾಫಿಯನ್ನ ಕೊಯ್ಲು ಮಾಡೋಣವೆಂದರೆ ಕೂಲಿ ಕಾರ್ಮಿಕರ ಸಮಸ್ಯೆ. ಹೆಚ್ಚಿನ ಕೂಲಿ ನೀಡಿ ಕೊಯ್ಲು ಮಾಡೋದಕ್ಕೂ ಭಯ. ಮಳೆಯಲ್ಲಿ ತೊಯ್ದು-ತೊಪ್ಪೆಯಾದ ಕಾಫಿಯನ್ನ ಸಕಾಲದಲ್ಲಿ ಒಣಗಿಸಿಲ್ಲ ಅಂದರೆ ಅದೂ ಕೂಡ ಸಮಸ್ಯೆ. ಶೀಥಕ್ಕೆ ಇಟ್ಟ ಜಾಗದಲ್ಲೇ ಕೊಳೆಯುತ್ತದೆ. ಕೊಟ್ಟ ಕೂಲಿಯೂ ವ್ಯರ್ಥವಾಗುವಂತಹಾ ಸ್ಥಿತಿ ಕಾಫಿ ಬೆಳೆಗಾರರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ.
ಇದು ಒಬ್ಬಿಬ್ಬರ ರೈತರ ನೋವಲ್ಲ. ಕಾಫಿನಾಡ ಬಹುತೇಕ ರೈತರ ಅಳಲು. ಹಾಗಾಗಿ, ಸರ್ಕಾರ ಕೂಡಲೇ ಸಣ್ಣ ಹಾಗೂ ಮಧ್ಯಮ ವರ್ಗದ ಕಾಫಿ ಬೆಳೆಗಾರರ ನೆರವಿಗೆ ನಿಲ್ಲದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳೋದು ಗ್ಯಾರಂಟಿ ಎಂದು ಬೆಳೆಗಾರರ ಪರಿಸ್ಥಿತಿಯನ್ನ ಬೆಳೆಗಾರರೇ ವಿಶ್ಲೇಷಿಸಿದ್ದಾರೆ.