Advertisement
ಆ ಹುಡುಗನಿಗೆ ನಾಲ್ಕು ವರ್ಷ ತುಂಬಿದರೂ ಆತನ ಬಾಯಿಂದ ಸರಿಯಾಗಿ ಮಾತೇ ಹೊರಡುತ್ತಿರಲಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ಬಾಲ್ಯದ ಸಹಜ ಲವಲವಿಕೆ ಹಾಗೂ ಚುರುಕತನದಿಂದ ತೊಡಗಿಸಿಕೊಳ್ಳದ ಆ ಪುಟ್ಟ ಹುಡುಗ ತುಸು ಮಂದಮತಿಯಾಗಿ ದ್ದುದು ಆತನ ಪೋಷಕರ ಕಸಿವಿಸಿಗೆ ಕಾರಣ ವಾಗಿತ್ತು. ಶಾಲೆಯ ಓದು, ಬರಹ ಹಾಗೂ ಅಭ್ಯಾಸಗಳೂ ಆತನ ಪಾಲಿಗೆ ಎಂದಿಗೂ ಸುಲಭ ಸಾಧ್ಯವಾಗಿರಲಿಲ್ಲ. ತನ್ನ 16ನೇ ವಯಸ್ಸಿನಲ್ಲಿ ಪಾಲಿಟೆಕ್ನಿಕ್ ಕಾಲೇಜ್‌ನ ಪ್ರವೇಶಾತಿಗಾಗಿ ಎದುರಿಸಿದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ವಿಫಲನಾಗಿದ್ದ ಆತನ ಪಾಲಿಗೆ ಶೈಕ್ಷಣಿಕವಾಗಿ ಯಾವ ಭರವಸೆಯೂ ಉಳಿದಿರಲಿಲ್ಲ. ಅತ್ಯಂತ ಪ್ರಯಾಸದಿಂದ ಪದವಿ ಹಂತವನ್ನು ತಲುಪಿ, ಎಷ್ಟೇ ಪ್ರಯತ್ನಪಟ್ಟರೂ ಕೊನೆಗೆ ಪದವಿ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಕಾಲೇಜು ಶಿಕ್ಷಣಕ್ಕೆ ಎಳ್ಳುನೀರು ಬಿಟ್ಟಿದ್ದ. ಶೈಕ್ಷಣಿಕ ಚೌಕಟ್ಟಿನ ಮಾನದಂಡಗಳ ಪ್ರಕಾರ ಆತನೊಬ್ಬ ವಿಫಲ ವಿದ್ಯಾರ್ಥಿ. ಹಾಗೆಂದ ಮಾತ್ರಕ್ಕೆ ಆತ ತನ್ನ ಬದುಕನ್ನು ಸೋಲಿಗೆ ಶರಣಾಗಿಸಲಿಲ್ಲ. ಹಿನ್ನಡೆಗಳನ್ನೇ ಸವಾಲಾಗಿ ಸ್ವೀಕರಿಸಿ, ಅಗಾಧ ಛಲದೊಂದಿಗೆ ಹಲವು ಏರಿಳಿತಗಳನ್ನು ಸಮರ್ಥವಾಗಿ ಎದುರಿಸಿ ಕೊನೆಗೆ ತನ್ನ ಬದುಕಿನಲ್ಲಿ ಯಶಸ್ಸಿನ ಶಿಖರವನ್ನೇ ಏರಿದ್ದ. ಆತ ಅಂಥ ಸಾಧನೆಯನ್ನು ಮಾಡಲು ಶಕ್ತ ನಾಗಬಲ್ಲ ಎಂಬ ಸಣ್ಣ ಊಹೆಯೂ ಇರಲಿಲ್ಲ! ಇದು ಜಗತ್ತಿನ ಪರಮ ಬುದ್ಧಿವಂತ ವಿಜ್ಞಾನಿಯೆನಿಸಿಕೊಂಡ, ನೊಬೆಲ್ ಪುರಸ್ಕೃತ ಅಲ್ಬರ್ಟ್ ಐನ್‌ಸ್ಟಿàನ್‌ನ ಸಾಧನಾಪೂರ್ವದ ಶೈಕ್ಷಣಿಕ ಬದುಕಾ ಗಿತ್ತು! ಈ ನಿದರ್ಶ ನದ ಹಿನ್ನೆಲೆಯಲ್ಲಿ ಶಿಕ್ಷಣ, ಪರೀಕ್ಷೆ ಹಾಗೂ ಫಲಿ ತಾಂಶ ಸಂಬಂಧಿ ಸೋಲು-ಗೆಲುವು ಮತ್ತು ಬದುಕಿನ ಯಶಸ್ಸು ಹಾಗೂ ವಿಫಲ ತೆಗಳನ್ನು ತುಸು ವಿಮರ್ಶಿಸಿದರೆ, ಫಲಿತಾಂಶೋ ತ್ತರ ಆತಂಕ ಹಾಗೂ ತಲ್ಲಣಗಳಿಗೆ ಪರಿಹಾರ ಗೋಚರಿಸುತ್ತದೆ.
Related Articles
Advertisement
ಹೋಲಿಕೆ, ಹೀಯಾಳಿಕೆಯ ಉಪ್ಪು ಸವರಬೇಡಿಫಲಿತಾಂಶಕ್ಕೆ ಸಂಬಂಧಿಸಿದ ಅಹಿತಕರ ಬೆಳವಣಿಗೆಗಳಿಗೆ ದೊಡ್ಡ ಮಟ್ಟದಲ್ಲಿ ಕಾರಣವಾಗುತ್ತಿರುವುದು ಹೋಲಿಕೆ ಹಾಗೂ
ಹೀಯಾ ಳಿಕೆ. ಮಕ್ಕಳ ವೈಯಕ್ತಿಕ ಭಿನ್ನತೆಯನ್ನು ಪರಿಗಣಿಸದೇ ಅನ್ಯರ ಜೊತೆಗೆ ಹೋಲಿಕೆಗಿಳಿಯುವುದರಿಂದ ಅವರಲ್ಲಿ ಮನೆ ಮಾಡುವ ಕೀಳರಿಮೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇನ್ನು ಕೆಲವು ಪೋಷಕರಂತೂ ದೂಷಣೆಗೆ ನಿಂತುಬಿಡುತ್ತಾರೆ. ಈ ಹೀಯಾ ಳಿಕೆ ಅವರ ಮನಸ್ಸಿನ ಮೇಲೆ ಮಾಸದ ಗಾಯವನ್ನೇ ಉಂಟುಮಾಡುತ್ತದೆ. ಮಕ್ಕಳ ಮಾನಸಿಕತೆಯ ಸೂಕ್ಷ¾ತೆಯ ಅರಿವಿಲ್ಲದೇ ಬೇಕಾಬಿಟ್ಟಿಯಾಗಿ ಮಾತನಾಡುವುದರಿಂದ ಅವರ ಮಾನಸಿಕ ಸ್ಥೈರ್ಯ ಕುಗ್ಗುತ್ತದೆ. ಈ ಮಾನಸಿಕ ದೌರ್ಬಲ್ಯ ಅವರ ಜೀವನದ ಸಮತೋಲನವನ್ನೇ ತಪ್ಪಿಸುತ್ತದೆ. ಮಕ್ಕಳ ಪ್ರತಿಭೆ ಹಾಗೂ ಯಥಾನುಶಕ್ತಿ ಸಾಮರ್ಥ್ಯ ವನ್ನು ಮುಕ್ತವಾಗಿ ಸ್ವೀಕರಿಸಿ, ಹುರಿದುಂಬಿಸಿದರೆ ಅವರ ಮಾನಸಿಕ ಸ್ಥೈರ್ಯ ಬಲಗೊಂಡು, ಅದು ಅವರ ಯಶಸ್ವಿ ಬದುಕಿಗೆ ಪೂರಕವಾಗುತ್ತದೆ. ಮುಕ್ತ ಮಾತುಕತೆಯ ಬೆಂಬಲವೇ ಶ್ರೀರಕ್ಷೆ
ಮಕ್ಕಳು ಒಂದು ಹಂತದವರೆಗೆ ತಮ್ಮ ಏಳು ಬೀಳುಗಳಲ್ಲಿ ಪೋಷಕರ ಬೆಂಬಲ ಸಹಾಯ ಹಸ್ತವನ್ನು ಸದಾ ನಿರೀಕ್ಷಿಸುತ್ತಾರೆ. ಫಲಿತಾಂಶ ಏನೇ ಇದ್ದರೂ ಮಕ್ಕಳ ಜೊತೆಗೆ ಮುಕ್ತವಾಗಿ ಮಾತನಾಡುವ ಮನಸ್ಥಿತಿಯನ್ನು ಪೋಷಕರು ಬೆಳೆಸಿಕೊಳ್ಳಬೇಕು. ಅವರ ಅಂಕ, ಅದರ ಹಿಂದಿನ ಸಾಧ್ಯತೆಗಳು, ಈ ವೈಪರೀತ್ಯಕ್ಕೆ ಕಾರಣ, ಅದನ್ನು ಎದುರಿಸುವ ಮಾರ್ಗ ಆ ನಿಟ್ಟಿನಲ್ಲಿ ಮನೆಯವರ ಬೆಂಬಲ ಇತ್ಯಾದಿ ಅಂಶಗಳನ್ನು ಸಾವಧಾನದಿಂದ ಚರ್ಚಿಸುವು ದರಿಂದ ಅವರ ಆತ್ಮಬಲ ವೃದ್ಧಿಸುತ್ತದೆ. ಅಲ್ಲದೇ ತಮ್ಮ ಬೆಂಬಲಕ್ಕೆ ಮನೆಯವರೂ ಇ¨ªಾರೆ ಎಂಬ ಅಂಶ ಧನಾತ್ಮಕತೆಯನ್ನು ತುಂಬಿ ಭದ್ರತೆಯ ಭಾವವನ್ನು ಬೆಳೆಸುತ್ತದೆ. ಏಕಾಂಗಿ ಭಾವ ಮಕ್ಕಳನ್ನು ಆವರಿಸದು. ಏನೇ ಆದರೂ ನಿನ್ನ ರಿಸಲ್ಟ್ ನಮ್ಮದೂ ಕೂಡಾ. ಆ ಸಂಬಂಧ ನಮ್ಮ ಬೆಂಬಲ ಸದಾ ನಿನಗೆ ಎಂಬ ಒಂದು ಧೈರ್ಯದ ಮಾತು ಗಣನೀಯ ಬದಲಾವಣೆಯನ್ನು ತರಬಲ್ಲುದು. ಒತ್ತಡ ನಿವಾರಣೆಗಿರಲಿ ಆದ್ಯತೆ
ಫಲಿತಾಂಶಗಳ ಬಗ್ಗೆ ಅತಿರಂಜಿತ ಚರ್ಚೆಗಳು ಎಲ್ಲೆಲ್ಲೂ ತೆರೆದು ಕೊಳ್ಳುವ ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಪೋಷಕರ ಮೇಲೆ ಅತೀವ ಒತ್ತಡ ಜಮೆಯಾಗಿರುತ್ತದೆ. ಆ ಒತ್ತಡ ನಿವಾರಣೆ ಆದ್ಯ ತೆಯ ಅಂಶವಾಗಬೇಕು. ಫಲಿತಾಂಶದ ನಂತರ ಮಕ್ಕಳನ್ನು ಅವರಿ ಷ್ಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊ ಡುವುದು ಅತ್ಯಗತ್ಯ. ತಲ್ಲಣಗಳನ್ನು ದೂರಮಾಡಿ, ಮನಸ್ಸನ್ನು ಆಹ್ಲಾದಕರವಾಗಿಡುವ ವಸ್ತು, ವ್ಯಕ್ತಿ ಹಾಗೂ ಸ್ಥಳಗ ಳೊಂದಿಗೆ ಮಕ್ಕಳು ಇರುವಂತೆ ಕಾಯ್ದುಕೊಂಡರೆ ಉತ್ತಮ. ಅವ ರೊಂದಿಗೆ ಒಂದು ಸಣ್ಣ ಟ್ರಿಪ್ ಹೋಗುವುದು ಖುಷಿಯಿಂದ ಬೆರೆಯುವು ದನ್ನು ಮಾಡಿದರೆ ಮಕ್ಕಳು ಸಹಜವಾಗಿರುತ್ತಾರೆ. ಅದರ ಬಗ್ಗೆ ಪದೇ ಪದೆ ಚರ್ಚಿಸದೆ, ಮಕ್ಕಳ ಮನಸ್ಸು ತಿಳಿಯಾಗಿರುವಂತೆ ನೋಡಿ ಕೊಳ್ಳುವತ್ತ ಪೋಷಕರು ಆದ್ಯ ಗಮನ ನೀಡುವುದು ಒಳಿತು. ಬದಲಿ ಯೋಜನೆಯ ಯೋಚನೆ ಒಳ್ಳೆಯದು
ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸ ಹಾಗೂ ಔದ್ಯೋಗಿಕ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಯೋಜನೆ ಗಳಿರುತ್ತವೆ. ಅದರ ಈಡೇರಿಕೆಯ ನಿಟ್ಟಿನಲ್ಲಿ ಮಕ್ಕಳು ಸಮರ್ಪಕ ವಾಗಿ ತೊಡಗಿಸಿಕೊಳ್ಳಬೇಕೆಂಬ ನಿರೀಕ್ಷೆಯೂ ಸಹಜ. ಆದರೆ ಅವುಗಳು ಮಕ್ಕಳ ಮೂಲ ಸಾಮರ್ಥ್ಯದ ವಾಸ್ತವಾಂಶದಿಂದ ಅತೀತವಾಗಿರಬಾರದು. ಫಲಿತಾಂಶದ ನಂತರದಲ್ಲಿ ಮಕ್ಕಳ ಆಸಕ್ತಿ, ಅಭಿರುಚಿಯ ಕ್ಷೇತ್ರಗಳ ಬಗ್ಗೆ ಸೂಕ್ತ ತಿಳಿವಳಿಕೆ ಬೆಳೆಸಿ ಕೊಂಡು, ಅವರ ಸಾಮರ್ಥ್ಯಕ್ಕೆ ತಕ್ಕುದಾದ ಬದಲೀ ಯೋಜನೆ ಗಳನ್ನು ಮಕ್ಕಳ ಜೊತೆಗೆ ಚರ್ಚಿಸಿ, ಕಾರ್ಯರೂಪಕ್ಕೆ ತರುವ ಬಗ್ಗೆ ಯೋಚಿಸುವುದು ಒಳಿತು. ಪೋಷಕರು ತಮ್ಮ ನಿರೀಕ್ಷೆಗಳನ್ನು ಅವರ ಮೇಲೆ ಒತ್ತಾಯಪೂರ್ವಕವಾಗಿ ಹೇರಿ ಅದನ್ನು ಸಾಧಿಸಿಯೇ ಸಿದ್ಧ ಎಂಬ ಹಠಕ್ಕೆ ಬೀಳದೆ, ಮಕ್ಕಳನ್ನೂ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳು ವುದರಿಂದ ಮಕ್ಕಳು ಆ ಬಗ್ಗೆ ಹೆಚ್ಚು ಜತನ ಹಾಗೂ ಆಸಕ್ತಿಯನ್ನು ಹೊಂದುತ್ತಾರೆ. ಕನಸು ಹಾಗೂ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ನೆರವಾಗಬಲ್ಲ ಬದಲಿ ಅವಕಾಶದ ವಿಕಲ್ಪಗಳು ಅವರ ಮುಂದೆ ಗೋಚರಿಸದರೆ ಮತ್ತೆ ಬದುಕನ್ನು ಯಶಸ್ಸಿನತ್ತ ಮುನ್ನಡೆ ಸಿಕೊಂಡು ಹೋಗುವ ಛಲ ಹಾಗೂ ಬದ್ಧತೆ ವೃದ್ಧಿಯಾಗುತ್ತದೆ. ಬದುಕೆಂದರೆ ಸೋಲು ಗೆಲುವುಗಳ ಸಮಾಗಮವೇ
ಹೊರತು ಅದು ಸದಾ ಯಶಸ್ವಿ ಯಾನವಷ್ಟೇ ಅಲ್ಲ, ಒಂದು ಹಿನ್ನಡೆ ಬದುಕಿನ ಮುನ್ನಡೆಯ ನಡುವನ್ನೇ ಮುರಿಯುವಂತಾದರೆ ಬದುಕಿನ ಸ್ವಾರಸ್ಯವಾದರೂ ಏನು? ಸೋಲೇ ಗೆಲುವಿನ ಸೋಪಾನ ಎಂದ ಮೇಲೆ ಪರೀಕ್ಷೆಯಲ್ಲಿ ಅನುಭವಿಸುವ ಸಣ್ಣ ವಿಫಲತೆ ಬದುಕಿನ ಸಫಲತೆಗೆ ಸೋಪಾನವಾಗದೇ ಹೋಗ ಲಾರದು. ಭವ್ಯ ಭವಿಷ್ಯದ ಕನವರಿಕೆಯಲ್ಲಿ ಅರಳಿ ಸುಗಂಧ ಬೀರಬೇಕಾದ ಹೂವುಗಳು, ಮೊಗ್ಗಿನಲ್ಲೇ ಕಮರದಂತಾಗಲಿ. ಆ ಮುನ್ನೆಚ್ಚರಿಕೆ ಎಲ್ಲರ ಮನಸ್ಸಲ್ಲೂ ಕುಡಿಯೊಡೆಯಲಿ. ಸಂದೇಶ್. ಎಚ್. ನಾಯ್ಕ