Advertisement
ನಮಗೆ ಬಹುಕಾಲದಿಂದ ಪರಿಚಿತರಿರುವ ಕುಟುಂಬ ಅದು. ಮನೆಗೆ ಹೋದಾಗ ಟೀಪಾಯಿಯ ಮೇಲೆ ಹಲವಾರು ಪುಸ್ತಕಗಳು ಇದ್ದವು. ಒಂದೊಂದನ್ನೇ ತೆಗೆದು ನೋಡಿದೆ. ಅವೆಲ್ಲವೂ, ಜೀವನದಲ್ಲಿ ದುಡ್ಡು ಮಾಡುವುದು ಹೇಗೆ? ಯಾವುದೇ ಉತ್ಪನ್ನವನ್ನು ಮಾರ್ಕೆಟಿಂಗ್ ಮಾಡುವ ರೀತಿ ಹೇಗೆ… ಎಂಬಂಥ ವಿಷಯಗಳ ಕುರಿತಂತೆ ಇತ್ತು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಆ ಪುಸ್ತಕಗಳಿದ್ದವು.
Related Articles
Advertisement
ಅಷ್ಟು ಹೊತ್ತಿಗೆ ಅವರ ಹೆಂಡತಿ ಅಡುಗೆ ಮನೆಯಿಂದ ಕಾಫಿ ಹಿಡಿದು ಬಂದರು. ಇವರು ಏನನ್ನೋ ಮುಚ್ಚಿಡುವ ಹಾಗೆ ಕಾಣುತ್ತಿತ್ತು. “ನಮ್ಮ ಮನೆಯವರು ಅದೇನೋ ಹೊಸ ಬಿಸಿನೆಸ್ ಅಂತಾ ಹೇಳುತ್ತಿದ್ದಾರೆ. ನನಗಂತೂ ಇದೆಲ್ಲ ಅರ್ಥ ಆಗುವುದಿಲ್ಲ. ಆದರೆ ಕೇವಲ ಮೂರು ಲಕ್ಷ ರೂಪಾಯಿ ಹಾಕಿ ಮೂರು ಕೋಟಿ ರೂಪಾಯಿ ಸಂಪಾದಿಸುವುದೇ ನಿಜ ಆದರೆ,
ಆ ಕೆಲಸವನ್ನು ಎಲ್ಲರೂ ಮಾಡುತ್ತಿರಲಿಲ್ಲವಾ? ಉಳಿದವರು ದಡ್ಡರು ಇವರೊಂದೇ ಬುದ್ಧಿವಂತರಾ? ಯಾರಾದರೂ ಗೊತ್ತಿರುವವರನ್ನು ಸರಿಯಾಗಿ ಕೇಳಿ ಎಂದು ಹೇಳುತ್ತಿದ್ದೇನೆ. ಆದರೆ ಇವರು ನನ್ನ ಮಾತನ್ನು ಕಿವಿಯಮೇಲೆ ಹಾಕಿಕೊಳ್ಳುವುದೇ ಇಲ್ಲ. ಯಾರೋ ಇವರ ತಲೆಯನ್ನು ಚೆನ್ನಾಗಿ ಆಡಿಸಿಬಿಟ್ಟಿದ್ದಾರೆ…’ ಆಕೆ ವಿಷಾದದಿಂದಲೇ ಹೇಳಿದರು.
ಇದು ಕೇವಲ ಅವರೊಬ್ಬರ ಮನೆಯ ಕಥೆ ಅಲ್ಲ. ಎಷ್ಟೋ ಬಾರಿ, ಸಾಮಾನ್ಯ ಸಂಗತಿ ನಮಗೆ ಅರ್ಥ ಆಗುವುದಿಲ್ಲ. ಒಂದು ವೇಳೆ ಅರ್ಥ ಆದರೂ ಏನೋ ಮಿರಾಕಲ್ ಆಗಿಬಿಡತ್ತೆ, ದುಡ್ಡು ಬಂದು ಬಿಡತ್ತೆ ಎನ್ನುವ ಬಹುದೊಡ್ಡ ಭ್ರಮೆಯಲ್ಲಿ ಇರುತ್ತೇವೆ. ಭಾಗ್ಯಲಕ್ಷಿಯೇ ಮನೆಗೆ ಬಂದಳು ಎನ್ನುತ್ತೇವೆ. ನಮ್ಮ ಬದುಕೇ ಬದಲಾಯಿತು ಎನ್ನುತ್ತೇವೆ. ಸತ್ಯವೇನೆಂದರೆ, ನಾವು ಕೇವಲ ಭರವಸೆಯ ಕನಸುಗಳನ್ನು ಕಾಣುತ್ತೇವೆ. ವಿವೇಕಯುತವಾಗಿ ಯೊಚಿಸುತ್ತಿರುವುದಿಲ್ಲ.
ಯಾರಾದರೂ ಈ ಬಿಜಿನೆಸ್‌ಗೆ ಕೈ ಹಾಕಬೇಡಿ, ಇದರಿಂದ ಲಾಸ್ ಆಗಬಹುದು ಎಂದೇನಾದರೂ ಹೇಳಿದರೆ, ಅವರು ಯಾವಾಗಲೂ ಹೀಗೆ ಎನ್ನುತ್ತೇವೆ. ಹಾಗಾಗಿಯೇ ಇತರರಿಗೆ ಹೇಳುವುದಿಲ್ಲ. ಈ ಬಿಸಿನೆಸ್ ಪರಿಚಯಿಸಿದವರು ನಮ್ಮ ಪಾಲಿನ ಆಪದ್ಭಾಂಧವರಾಗಿ ನಿಲ್ಲುತ್ತಾರೆ.
ಎರಡೋ ಮೂರೋ ವರ್ಷದ ನಂತರ ನಮಗೂ ಮರೆತಿರುತ್ತದೆ. ಅವರಿಗೂ ಮರೆತುಹೋಗುತ್ತದೆ. ಯಾರಿಗೆ ಯಾರೋ ಪುರಂದರ ವಿಠಲ. ನಾವು ಹಾಕಿದ ಹಣಕ್ಕೆ ವಸ್ತು ಬಂತಲ್ಲ ಎನ್ನುತ್ತೇವೆ. ಬೇಕೋ ಬೇಡವೋ ಒಂದಿಷ್ಟು ವಸ್ತುಗಳ ಮಾರಾಟ ಆಯಿತು. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವವರು ನಾವು!
* ಸುಧಾಶರ್ಮ ಚವತ್ತಿ