ವಾರಾಣಸಿ: ಶ್ರೀ ವಿಶ್ವನಾಥನ ಪುಣ್ಯ ಕ್ಷೇತ್ರ ವಾರಾಣಸಿಯಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂಬ ವಿಚಾರ ತಿಳಿದಿರುವ ಸಂಗತಿ. ಆದರೆ ಸ್ಥಳ ಪುರಾಣಕ್ಕೆ ಪೂರಕವಾಗಿ ಸ್ಟೇಡಿಯಂ ರಚನೆಯಲ್ಲೂ ಶಿವ ಅಂಶಗಳ ಸ್ಪರ್ಷವಿರಲಿದೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 23 ರಂದು ವಾರಾಣಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಸ್ಟೇಡಿಯಂ ಢಮರು, ತ್ರಿಶೂಲ ಮುಂತಾದ ವಿನ್ಯಾಸಗಳನ್ನು ಹೊಂದಿರಲಿದೆ.
ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಿಸಲಿರುವ ಮಾಧ್ಯಮ ಕೇಂದ್ರದ ವಿನ್ಯಾಸವು ಶಿವನ ಢಮರುವಿನಂತೆ ಇರಲಿದೆ. ಮೈದಾನವನ್ನು ಬೆಳಗಿಸುವ ಫ್ಲಡ್‌ಲೈಟ್‌ಗಳು ತ್ರಿಶೂಲದ ಆಕಾರದಲ್ಲಿರುತ್ತವೆ.
ಮುಂಬರುವ ಪ್ರಧಾನಿ ಮೋದಿ ಭೇಟಿಯ ವೇಳೆ ವಾರಾಣಸಿ ಜನತೆಗೆ 1000 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳ ಉಡುಗೊರೆ ಸಿಗಲಿದೆ. ಅದರಲ್ಲಿ 325 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂಬುದು ವಿಶೇಷ.
ಹೊರಬಿದ್ದಿರುವ ಕ್ರೀಡಾಂಗಣದ ವಿನ್ಯಾಸದ ಚಿತ್ರಗಳಲ್ಲಿ, ಅದರ ಪ್ರವೇಶದ್ವಾರವು ಬಿಲ್ವ ಪತ್ರೆಯ ಆಕಾರದಲ್ಲಿದೆ, ಆದರೆ ಕ್ರೀಡಾಂಗಣದ ಮೇಲ್ಛಾವಣಿಯು ಚಂದ್ರನ ಆಕಾರದಲ್ಲಿ ಮಾಡಲ್ಪಟ್ಟಿದೆ.
ಕ್ರೀಡಾಂಗಣವು 30 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಕ್ರೀಡಾಂಗಣ ನಿರ್ಮಾಣ ಪೂರ್ಣಗೊಳಿಸಲು ಎರಡು ವರ್ಷಗಳ ಗುರಿ ನಿಗದಿಪಡಿಸಲಾಗಿದೆ. ಕಾಶಿಯ ಸಾಂಸ್ಕೃತಿಕ ಪ್ರತಿಬಿಂಬ ಈ ಕ್ರೀಡಾಂಗಣದಲ್ಲಿ ಗೋಚರಿಸುತ್ತದೆ.
ಕಪಿಲ್ ದೇವ್, ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ಮತ್ತು ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.