ವಿಜಯಪುರ: ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ದಿನ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನ ಪೂಜೆ ಮಾಡಿ ಪ್ರಸಾದ ವಿತರಿಸಿದ ಕೈದಿಗಳ ಮೇಲೆ ಹಲ್ಲೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಮಹಾರಾಷ್ಟ್ರ ಮೂಲದ ಪರಮೇಶ್ವರ ಎಂಬಾತ ಅನ್ಯಧರ್ಮೀಯ ಕೈದಿಗಳು ಹಲ್ಲೆ ನಡೆಸಿದ್ದಾಗಿ ಜೈಲಿನಿಂದಲೇ 3 ನಿಮಿಷ 5 ಸೆಕೆಂಡ್‌ಗಳ ವೀಡಿಯೋ ಮಾಡಿ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಮೊರೆ ಇಟ್ಟಿದ್ದಾನೆ.
ನಮ್ಮ ಮೇಲೆ ಹಲ್ಲೆ ನಡೆಸಿದ ಸಹಕೈದಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ. ಕೂಡಲೇ ನಮಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನ್ಯಾಯ ಕಲ್ಪಿಸಬೇಕು ಎಂದು ಕೋರಿದ್ದು, ಈ ವೀಡಿಯೋ ವೈರಲ್ ಆಗಿದೆ.
ಜ.22ರಂದು ರಾಮನ ಪೂಜೆಗೆ ಅವಕಾಶ ನೀಡುವಂತೆ ಜೈಲ ಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸಲಿಲ್ಲ. ಆದರೂ ಆ ದಿನ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನಿಗೆ ಪೂಜೆ ಸಲ್ಲಿಸಿ, ಪ್ರಸಾದ ಹಂಚಿದ್ದೆವು. ಅಂದು ಕರ್ತವ್ಯದಲ್ಲಿದ್ದ ಸಹಾಯಕ ಜೈಲು ಅ ಧೀಕ್ಷಕ ಕೆ.ಎಂ.ಚೌಧರಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಅವರು ಜ.23ರಂದು ನನ್ನನ್ನು ಹಾಗೂ ನನ್ನೊಂದಿಗೆ ಪೂಜೆ ಸಲ್ಲಿಸಿದ ಇತರ ಇಬ್ಬರು ಕೈದಿಗಳನ್ನು ಕರೆಸಿ ವಿಚಾರಣೆ ನಡೆಸಿದರು. ಆಗ ಅನ್ಯಕೋಮಿನ ಶೇಖ್ ಮೋದಿ ಹಾಗೂ ಇತರರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವೀಡಿಯೋದಲ್ಲಿ ದೂರಿದ್ದಾನೆ. ನಮ್ಮ ಮೇಲೆ ಹಲ್ಲೆ ನಡೆಯುತ್ತಿದ್ದರೂ ಜೈಲ ಧಿಕಾರಿಗಳು ಹಾಗೂ ಇತರ ಸಿಬಂದಿ ನಮ್ಮ ರಕ್ಷಣೆಗೆ ಧಾವಿಸಲಿಲ್ಲ. ನಮ್ಮನ್ನು ಜೈಲು ಆವರಣಕ್ಕೂ ಬಿಡದೆ ಸೆಲ್‌ನಲ್ಲಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿಯು ರಾಮ, ಮಂದಿರ ಎಂದೆಲ್ಲ ಇಲ್ಲಸಲ್ಲದ ವಿಷಯಗಳನ್ನು ಮುಂದಿಟ್ಟುಕೊಂಡು ಸುಳ್ಳು ಹೇಳುತ್ತಿದ್ದಾನೆ. ಮಹಾರಾಷ್ಟ್ರ ಮೂಲದವನಾಗಿರುವ ಆತ ಅಲ್ಲಿನ ಜೈಲುಗಳಲ್ಲೂ ಇದೇ ರೀತಿ ವರ್ತಿಸಿದ ಕಾರಣಕ್ಕೆ ಆತನನ್ನು ನಮ್ಮ ಜೈಲಿಗೆ ವರ್ಗಾಯಿಸಲಾಗಿದೆ. ಜ.23ರಂದು ಇವರು ಇತರರೊಂದಿಗೆ ಜಗಳವಾಡಿದ್ದರು. ಗಲಾಟೆ ನಿಯಂತ್ರಿಸಲು ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಿದ್ದೇವೆ. ಜೈಲಿನಲ್ಲಿ ಮೊಬೈಲ್ ನಿಷೇಧವಿದ್ದರೂ ಮೊಬೈಲ್‌ನಲ್ಲಿ ವೀಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಆತನಿಗೆ ಮೊಬೈಲ್ ಪೋನ್ ಸಿಕ್ಕಿದ್ದು ಹೇಗೆ ಎಂಬುದರ ಕುರಿತು ತನಿಖೆ ಮಾಡಲಾಗುತ್ತಿದೆ.
– ಐ.ಜಿ.ಮ್ಯಾಗೇರಿ, ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಅ ಧೀಕ್ಷಕ