ಉಡುಪಿ: ಶ್ರೀ ಕೃಷ್ಣನ ಆರಾಧನೆಯಿಂದ ಕಲಿಯುಗದ ಸಾಧಕರಿಗೆ ಎಲ್ಲ ರೀತಿಯ ಅನುಗ್ರಹವಾಗಲಿ ಮತ್ತು ನಂಬಿದ ಭಕ್ತರನ್ನು ಕಾಪಾಡಲಿ ಎಂದು ಶ್ರೀ ಮಧ್ವಾಚಾರ್ಯರು ಶ್ರೀ ಕೃಷ್ಣ ದೇವರನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಮಧ್ವಾಚಾರ್ಯರ ವಿಷ್ಣುತತ್ತ್ವ ನಿರ್ಣಯಕ್ಕೆ ಬಹುಶ್ರುತ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯರು ಬರೆದ ವ್ಯಾಖ್ಯಾನ ಕೃತಿಯನ್ನು ವೈಶಿಷ್ಟ ಪೂರ್ಣವಾಗಿ ರಾಜಾಂಗಣದಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಶ್ರೀಪಾದರು ಆಶೀರ್ವಚನ ನೀಡಿದರು.
ಮಧ್ವಾಚಾರ್ಯರು ತತ್ತ್ವ ಅನುಸಂಧಾನ ತೊಂದರೆ ನಿವಾರಣೆಗಾಗಿ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆಗೈದು ಸಾಧಕರ ಸಾಧನೆಗೆ ಬೇಕಾದ ವ್ಯವಸ್ಥೆ ಮಾಡಿ ಸಜ್ಜನರನ್ನು ಅನುಗ್ರಹಿಸಿದ್ದಾರೆ. ಕಲಿಯುಗದಲ್ಲಿ ಶ್ರೀಕೃಷ್ಣನ ಉಪಾಸನೆಯಿಂದ ಸರ್ವಾಭಿಷ್ಟ ಸಿದ್ಧಿಯಾಗುತ್ತದೆ. ಕೃಷ್ಣನ ಅನುಗ್ರಹ ಆಗಬೇಕಾದರೆ ಪ್ರತಿಷ್ಠಾಪಕರಾದ ಮಧ್ವಾಚಾರ್ಯರ ಸ್ಮರಣೆ ಮಾಡುವುದು ಅಗತ್ಯ. ಆಚಾರ್ಯರ ತಣ್ತೀದ ವ್ಯಾಪಕ ಪ್ರಚಾರವಾಗಬೇಕು. ಇದಕ್ಕೆ ವಿಶ್ವವ್ಯಾಪಿ ಮನ್ನಣೆ ಸಿಗುವಂತಾಗಬೇಕು ಎಂದು ಅನುಗ್ರಹಿಸಿದರು.
ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೆಶತೀರ್ಥ ಶ್ರೀಪಾದರು ಅನುಗ್ರಹಿಸಿ, ಭಗವದ್ಗೀತೆಯನ್ನು ನಾವು ನಿತ್ಯವೂ ಪಠನೆ ಮಾಡಬೇಕು ಎಂದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಹಿರಿಯ ವಿದ್ವಾಂಸ ಡಾ| ವ್ಯಾಸನಕೆರೆ ಪ್ರಭಂಜನಾ ಚಾರ್ಯ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶತಾವಧಾನಿ ಡಾ| ರಾಮನಾಥ ಆಚಾರ್ಯ, ವಿಜಯಸಿಂಹ ತೋಟಂತಿ ಲ್ಲಾಯ, ಮಾಜಿ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತರಿದ್ದರು. ಡಾ| ಗೋಪಾಲಾಚಾರ್ಯ ನಿರ್ವಹಿಸಿದರು.
ಭಂಡಾರಕೇರಿ ಮಠಾಧೀಶರಿಂದ ವಿರಚಿತ ‘ಶ್ರೀಗುರುವಿಜಯಗೀತೆ’ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ವಿದ್ವಾನ್ ಸಂದೀಪ್ ನಾರಾಯಣ್ ಮತ್ತು ಬಳಗದಿಂದ ಕರ್ಣಾಟಕ ಶಾಸ್ತ್ರೀಯ ಸಂಗೀತ ಸಂಪನ್ನಗೊಂಡಿತು.