ಪಿರಿಯಾಪಟ್ಟಣ: ಸಾಮಾಜಿಕ ವಾಸ್ತವ ಸಮಸ್ಯೆಗಳ ಪರಿಹಾರ ಮತ್ತು ಕರ್ತವ್ಯ ಪ್ರಜ್ಞೆಗೆ ಶ್ರೀಕೃಷ್ಣ ಆದರ್ಶನೀಯವಾಗಿವೆ ಎಂದು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಂಜುಂಡಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಆಧುನಿಕತೆಯ ಬರದಲ್ಲಿ ಧಾರ್ಮಿಕ ಭಾವನೆಗಳನ್ನು ಸಮಾಜದ ಮಂದಿ ಮರೆಯುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದಿಗೂ ಸಮಾಜಕ್ಕೆ ಶ್ರೀಕೃಷ್ಣನ ರಾಜಿ ಸಂಧಾನ ಮಹತ್ವವಾದ ಕೊಡುಗೆಯಾಗಿದೆ. ಶ್ರೀಕೃಷ್ಣನನ್ನು ವಿಶಾಲ ಮನೋಭಾವದಿಂದ ನೋಡಬೇಕು ಅವನನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಕೃಷ್ಣ ಎಲ್ಲಾ ಧರ್ಮದವರಿಗೂ ಆದರ್ಶ ಪ್ರಾಯನಾಗಿದ್ದಾನೆ ಎಂದರು.
ತಹಶೀಲ್ದಾರ್ ಜೆ.ಮಹೇಶ್ ಮಾತನಾಡಿ, ಶ್ರೀಕೃಷ್ಣನ ತತ್ವಸಾರವನ್ನು ಭಗವದ್ಗೀತೆ, ಮಹಭಾರತದಂತಹ ಪುರಾಣ ಶಾಸ್ತ್ರಗಳಲ್ಲಿ ಕಂಡುಕೊಳ್ಳಬಹುದು. ಶ್ರೀಮಂತಿಕೆ ವೈಭವದ ಆಚರಣೆಗಳನ್ನು ಬದಿಗೊತ್ತಿ ಬಡತನದಲ್ಲಿರುವ ಸುಧಾಮನೆಂಬ ಸ್ನೇಹಿತನ ಆಥಿತ್ಯ ಮತ್ತು ಗೆಳತನವನ್ನು ಯಾವುದೇ ತಾರತಮ್ಯ ವಿಲ್ಲದೆ ಒಪ್ಪಿಕೊಂಡಂತಹ ದೊಡ್ಡ ಸ್ನೇಹ ಪೂರ್ವಕ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.
ಆಡಳಿತ ಶಿರಸ್ತೇದಾರ್ ಪ್ರಕಾಶ್, ಪಾಂಶುಪಾಲ ಕೆ.ಜಿ.ರಂಗಸ್ವಾಮಿ, ಟಿ.ಎಚ್.ಒ ಡಾ.ನಾಗೇಶ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಾಮರಾಜ್, ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಎಇಇ ಪ್ರಭು, ಕೃಷಿ ಇಲಾಖೆ ಅಧಿಕಾರಿ ಮಹೇಶ್, ಎಪಿಎಂಸಿ ಅಧಿಕಾರಿ ಚಲುವರಾಯ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಪ್ರಕಾಶ್, ಭೂ ದಾಖಲೆ ಇಲಾಖೆಯ ಶೇಖರ್, ಮುಖಂಡರಾದ ವೆಂಕಟೇಶ್, ರವಿ ಇತರರು ಇದ್ದರು.