Advertisement

2021: ನಿರಾಸೆಯ ನಡುವೆ ಭರವಸೆಯ ನಿರೀಕ್ಷೆ; ಕನ್ನಡ ಚಿತ್ರರಂಗ ನಿಶ್ಚಿತವಾಗಿ ಬದಲಾಗಲಿದೆ

12:38 PM Jan 01, 2021 | Team Udayavani |

2020 ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ಸಾಹಭರಿತವಾಗಿಯೇ ಆರಂಭವಾಗಿತ್ತು. ಮೊದಲ ಮೂರು ತಿಂಗಳಲ್ಲೇ 58 ಚಿತ್ರಗಳು ತೆರೆ ಕಂಡಿದ್ದವು. ಇವುಗಳಲ್ಲಿ ಲವ್ ಮಾಕ್ ಟೈಲ್, ದಿಯಾ,ಕಾಣದಂತೆ ಮಾಯವಾದನೋ, ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾಜಿ ಸುರತ್ಕಲ್, ಮಯಾ ಬಜಾರ್ ಗೆಲುವಿನ ಹಾದಿಯಲ್ಲಿ ಇದ್ದವು. ಆದರೆ ಕರೋನಾದ ಕಾರಣದಿಂದ ಚಿತ್ರರಂಗದ ಚಟುವಟಿಕೆಗಳು ಸ್ತಬ್ದವಾಗಿದ್ದರಿಂದ ಕತ್ತಲು ಕವಿಯಿತು.  ಚಿತ್ರ ಬಿಡುಗಡೆ ಇರಲಿ ನಿರ್ಮಾಣ ಕೂಡ ನಿಂತು ಹೋಯಿತು. ಒ.ಟಿ.ಟಿಯಲ್ಲಿ ಬೇರೆ ಭಾಷೆಯ ಚಿತ್ರಗಳು ಬಿಡುಗಡೆಯಾದಷ್ಟು ಉತ್ಸಾಹದಿಂದ ಕನ್ನಡ ಚಿತ್ರಗಳು ಬಿಡುಗಡೆಯಾಗಲಿಲ್ಲ. ಲಾ, ಫ್ರೆಂಚ್ ಬಿರಿಯಾನಿ, ಭೀಮಸೇನ ನಳ ಮಹಾರಾಜ, ಮನೆ ನಂ 13, ಭ್ರಮೆ, ಪೆಂಟರ್, ತನಿಖೆ, ಭೂಮಿಕಾ ಚಿತ್ರಗಳು ಒ.ಟಿ.ಟಿ ಮತ್ತು ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಕಂಡರೂ ಇದರ ಎಕನಾಮಿಕ್ಸ್ ಕನ್ನಡ ಚಿತ್ರರಂಗದ ಹಿಡಿತಕ್ಕೆ ಸಿಕ್ಕಲಿಲ್ಲ. ಅದು ಪರ್ಯಾಯ ಮಾರ್ಗ ಅನ್ನಿಸಿ ಕೊಳ್ಳಲಿಲ್ಲ. ಮುಖ್ಯವಾಗಿ ಚಿತ್ರರಂಗದ ಚಟುವಟಿಕೆಗಳಿಗೆ ಚಾಲನೆ ನೀಡಲಿಲ್ಲ.

Advertisement

ಅಕ್ಟೋಬರ್ 15ರಿಂದ ಚಿತ್ರ ಬಿಡುಗಡೆಗೆ ಸರ್ಕಾರ ಅವಕಾಶ ಕೊಟ್ಟರೂ ಸರಿಯಾದ ಕ್ರಮದಲ್ಲಿ ಚಿತ್ರಗಳ ಬಿಡುಗಡೆ ಸಾಧ್ಯವಾಗಿದ್ದು ನವಂಬರ್ 20ರ ನಂತರವೇ. ಅನಂತರ ತೆರೆ ಕಂಡ ಚಿತ್ರಗಳಲ್ಲಿ ಮನ್ಸೂರೆ ಅವರ ಆಕ್ಟ್ 1978 ಭರವಸೆ ಮೂಡಿಸಿತು. ಅಂತೂ ಇಂತೂ ಕಳೆದ ಕೆಲವು ವರ್ಷಗಳಲ್ಲಿ ಇನ್ನೂರಕ್ಕೆ ಕಮ್ಮಿ ಇಲ್ಲದಂತೆ ಚಿತ್ರಗಳು ತೆರೆ ಕಾಣುತ್ತಿದ್ದ ಕನ್ನಡ ಚಿತ್ರರಂಗದಲ್ಲಿ ಈ ಲೆಕ್ಕಾಚಾರ ಕುಂಟುತ್ತಾ ಕುಂಟುತ್ತಾ 80ಅನ್ನು ದಾಟಿತು. ನೂರರ ಸಮೀಪಕ್ಕೂ ಸುಳಿಯಲಿಲ್ಲ. 2019ರಲ್ಲಿ 492 ಚಿತ್ರಗಳು ಸೆನ್ಸರ್ ಆಗಿದ್ದರೆ ಅದು 2020ರಲ್ಲಿ 270ಕ್ಕೆ ಇಳಿಯಿತು. ಸೆನ್ಸಾರ್ ಮಂಡಳಿ ಕೂಡ ಸುಮಾರು ಐದು ತಿಂಗಳಗಳ ಕಾಲ ಕಾರ್ಯ ನಿರ್ವಹಿಸಲಿಲ್ಲ. ನವಂಬರ್ ನಿಂದ ಮತ್ತೆ ಸೆನ್ಸಾರ್ ಮಂಡಳಿಗೆ ಸಿನಿಮಾದ ಪ್ರವಾಹ ಶುರುವಾದರೂ ಅದರಲ್ಲಿ ಹೆಚ್ಚಿನ ಚಿತ್ರಗಳು ಸಬ್ಸಿಡಿ, ಪ್ರಶಸ್ತಿಗಳನ್ನು ಗಮನದಲ್ಲಿ ಇರಿಸಿದ್ದವು.

ಈ ಹಿನ್ನೆಲೆಯಲ್ಲಿ 2021 ಹೇಗಿರ ಬಹುದು ಎಂದು ಊಹಿಸಿದರೆ ಆಶಾದಾಯಕ ಉತ್ತರ ಸಿಕ್ಕುವುದಿಲ್ಲ. ಸ್ಟಾರ್‍ಗಳ ಚಿತ್ರಗಳು ಇನ್ನೂ ಪೂರ್ಣಪ್ರಮಾಣದ ಚಿತ್ರೀಕರಣಕ್ಕೆ ಧೈರ್ಯ ಮಾಡುತ್ತಿಲ್ಲ. ಸಿಂಗಲ್ ಸ್ಕೀನ್ ಥಿಯೇಟರ್‍ಗಳು ಎಂದಿನ ಚಾಲನೆ ಪಡೆದು ಕೊಂಡಿಲ್ಲ. ನಿರ್ಮಾಪಕರಿಗೆ ನಿಜವಾದ ಅರ್ಥದಲ್ಲಿ ಲಾಭ ಸಿಕ್ಕುವುದು ಇಲ್ಲಿಯೇ! ಸಾಮಾಜಿಕ ಅಂತರದ ನಿಯಮದಡಿ ಥಿಯೇಟರ್ ಅರ್ಧ ಮಾತ್ರ ತುಂಬುವುದು ಸಾಧ್ಯವಿರುವಾಗ ಈ ಲೆಕ್ಕಾಚಾರ ಕ್ಲಿಷ್ಟವಾಗಿದೆ. ಮಾಲ್‍ಗಳಲ್ಲಿ ಚಿತ್ರ ತೆರೆ ಕಂಡರೂ ಅದರ ವಾಣಿಜ್ಯ ಲೆಕ್ಕಾಚಾರವನ್ನು ಇನ್ನು ಕನ್ನಡ ಚಿತ್ರರಂಗ ಸರಿಯಾಗಿ ಅಳವಡಿಸಿ ಕೊಂಡಿಲ್ಲ. ಸ್ಯಾಟಲೈಟ್ ರೈಟ್ಸ್ ದರವಂತೂ ಪಾತಾಳಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಮೊದಲಿನ ವೇಗವನ್ನು ಕನ್ನಡ ಚಿತ್ರರಂಗ ಪಡೆಯುವುದು ಬಹಳ ಕಷ್ಟವಾಗಿದೆ. ಇಲ್ಲಿ ಇನ್ನೊಂದು ಕುತೂಹಲಕರ ಅಂಶವಿದೆ.

ಭಾರತೀಯ ಚಿತ್ರರಂಗದಲ್ಲಿಯೇ ಡಿಜಿಟಲ್ ಮೇಕಿಂಗ್ ಅಳವಡಿಕೆಯಾದಷ್ಟು ಸರಳವಾಗಿ ಡಿಜಿಟಲ್ ಪ್ರೊಜೆಕ್ಷನ್ ಅಳವಡಿಕೆ ಆಗಿಲ್ಲ. ಕರೋನಾದ ಕಾಲದಲ್ಲಿ ಅನ್ ಲೈನ್ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಗಮನಾರ್ಹ ಬದಲಾವಣೆಯನ್ನು ಉಂಟು ಮಾಡಿದೆ. ನೇರವಾಗಿ ನಿಮ್ಮ ಲ್ಯಾಪ್ ಟಾಪ್‍ಗೇ ಚಿತ್ರವನ್ನು ಬಿಡುಗಡೆ ಮಾಡುವ ತಂತ್ರಜ್ಞಾನ ಯೂರೋಪಿನ ದೇಶಗಳಲ್ಲಿ ಯಶಸ್ವಿಯಾಗಿದೆ.

ಅದು ಭಾರತದಲ್ಲಿಯೂ ಅನಿವಾರ್ಯವಾಗುವ ಹಂತದಲ್ಲಿ ನಾವಿದ್ದೇವೆ. ಕರೋನಾದ ನಂತರದ ಅವಧಿ ಯಾವ ಕ್ಷೇತ್ರದಲ್ಲಿಯೂ ಮೊದಲಿನ ಸಹಜತೆಯನ್ನು ತರುವುದು ಸಾಧ್ಯವಿಲ್ಲ. ಯಾವುದೇ ಯಂತ್ರ ನಿಂತಷ್ಟು ಸುಲಭವಾಗಿ ಮರುಚಾಲನೆಯನ್ನು ಪಡೆಯಲಾರದು. ಈ ಹಿನ್ನೆಲೆಯಲ್ಲಿ ಸ್ಟಾರ್ ಮೇಕಿಂಗ್ ಎಂಬ ಗೀಳು 2021ರಲ್ಲಿ ತಗ್ಗುವ ಎಲ್ಲಾ ಸಾಧ್ಯತೆಗಳೂ ಇವೆ. ತಂತ್ರಜ್ಞಾನದ ನೆರವಿನಿಂದ ಮೇಕಿಂಗ್ ಸರಳವಾಗುವ ಆ ಮೂಲಕ ಬಜೆಟ್ ತಗ್ಗುವ ಎಲ್ಲಾ ಅವಕಾಶಗಳು ಇವೆ. ಬಹಳ ಮುಖ್ಯವಾಗಿ ಚಿತ್ರ ಬಿಡುಗಡೆಗೆ ಇರುವ ಸಾಂಪ್ರದಾಯಿಕ ಕ್ರಮಗಳು ಕ್ರಮೇಣ ನಶಿಸಿ ಹೊಸ ಸಾಧ್ಯತೆಗಳು ಹುಟ್ಟಿ ಕೊಳ್ಳಲಿವೆ. ಆಕ್ಟ್ 1978ರ ಗೆಲುವು ಮತ್ತು ಅರಿಷಡ್ವರ್ಗ ಹುಟ್ಟಿಸಿದ ನಿರೀಕ್ಷೆ. ಕನ್ನಡ ಪ್ರೇಕ್ಷಕರ ನಿರೀಕ್ಷೆಯಲ್ಲಿ ಆಗಿರುವ ಬದಲಾವಣೆಗೆ ಸಾಕ್ಷಿಯಾಗಿದೆ.

Advertisement

ಈವರೆಗೂ ಡಬ್ ಆದ ಚಿತ್ರಗಳು ಕನ್ನಡದಲ್ಲಿ ಯಶಸ್ಸು ಕಾಣದಿದ್ದರೂ ಈಗಿನ ಅನಿವಾರ್ಯತೆಯಲ್ಲಿ ಅವುಗಳ ಸಂಖ್ಯೆ ಹೆಚ್ಚಲಿದೆ. ಅದರಲ್ಲಿ ಒಂದು ಚಿತ್ರ ಗೆದ್ದರೂ ಡಬ್ ಆದ ಚಿತ್ರಗಳ ಪ್ರವಾಹವೇ ನಿಶ್ಚಿತವಾಗಿ ಹರಿಯಲಿದೆ.  2021ರಲ್ಲಿ ಕನ್ನಡ ಚಿತ್ರರಂಗ ನಿಶ್ಚಿತವಾಗಿ ಬದಲಾಗಲಿದೆ. ಅದು ಹೇಗೆ? ಎನ್ನುವ ಪ್ರಶ್ನೆಗೆ ಈಗಲೇ ಉತ್ತರವನ್ನು ಹೇಳುವುದು ಕಷ್ಟ. ಆದರೆ ನಿರಾಸೆಯ ದಿನಗಳು ಮುಗಿದು ಭರವಸೆ ಬೆಳಕು ಮೂಡಲಿದೆ ಎಂದು ಖಂಡಿತ ಹೇಳಬಹುದು. ಹೊಸದನ್ನು ಹುಡುಕುವುದೇ ಆಧುನಿಕತೆಯ ಮೂಲ ಲಕ್ಷಣವಲ್ಲವೆ?

*ಎನ್.ಎಸ್.ಶ್ರೀಧರ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next