ನಿತ್ಯವೂ ಮನೆಯಲ್ಲಿ ಸಿಲೋನ್ ರೇಡಿಯೊ ಹಾಡುತ್ತಿತ್ತು. ಎಪ್ಪತ್ತರ ದಶಕದ ಆ ಕಾಲಕ್ಕೆ ಅದೇ ನಮ್ಮ ಕಣ್ಣಮುಂದಿನ ಗಾಯಕ. ಕೇಳಲು ಇಂಪಾದ ಚಿತ್ರಗೀತೆಗಳನ್ನು ಹೊತ್ತು ತರುತ್ತಿದ್ದ, ಮಾಂತ್ರಿಕ. ಚಿತ್ರಗೀತೆ ಪ್ರಸಾರವಾಗುವ ಮೊದಲು, ನೋಟ್‌ಬುಕ್ ಮತ್ತು ಪೆನ್ನನ್ನು ಜತೆಗಿಟ್ಟುಕೊಂಡೇ ಕೂತಿರುತ್ತಿದ್ದೆ. ಹಾಡು ಶುರುವಾದ ತಕ್ಷಣ, ಅವಸರದಲ್ಲಿಯೇ ಅದರ ಸಾಹಿತ್ಯವನ್ನು ಬರೆದುಕೊಳ್ಳುತ್ತಿದ್ದೆ. ಎಷ್ಟೋ ಸಲ ನಾನು ಮೂರು ಸಾಲು ಬರೆದುಕೊಳ್ಳುವಷ್ಟರಲ್ಲಿ, ಹಾಡೇ ಮುಗಿದಿರುತ್ತಿತ್ತು.
ಮುಂದಿನ ವಾರದವರೆಗೂ ಕಾದು, ಮತ್ತೆ ಅದೇ ಹಾಡು ಬಂದರೆ, ಉಳಿದ ಭಾಗವನ್ನು ಬರೆದುಕೊಂಡು, ಅಭ್ಯಾಸ ಮಾಡುತ್ತಿದ್ದೆ. ಶೃಂಗೇರಿ- ಹೊರನಾಡಿಗೆ ಮಧ್ಯದಲ್ಲಿರುವ ಬಿಳಲುಕೊಪ್ಪವೆಂಬ ಪುಟ್ಟ ಹಳ್ಳಿ, ನನ್ನ ಹುಟ್ಟೂರು. ಅತ್ತ ತುಂಗೆ, ಇತ್ತ ಭದ್ರೆ, ಎರಡೂ ನದಿಗಳ ನೀರು ಕುಡಿದು, ಅವುಗಳ ಜುಳುಜುಳು ನಾದದ ಸಂಗೀತ ಕೇಳುತ್ತಾ, ಬಾಲ್ಯ ಅರಳಿತು. ನಾನು ಹುಟ್ಟಿದಾಗ, ನನ್ನೂರಲ್ಲಿ ರಸ್ತೆ ಇರಲಿಲ್ಲ. ಕರೆಂಟು ಬಂದಿರಲಿಲ್ಲ. ಶಾಲೆಯೂ ಇದ್ದಿರಲಿಲ್ಲ.
ಬೆಟ್ಟದ ಮೇಲೆ ಮನೆಗಳು. ಒಂದು ಮನೆಯಿಂದ ಮತ್ತೂಂದು ಮನೆಗೆ ಅರ್ಧ, ಒಂದು ಕಿ.ಮೀ.ನ ಅಂತರ. ಹಾಗಾಗಿ, ನನಗೆ ಸ್ನೇಹಿತರೇ ಇದ್ದಿರಲಿಲ್ಲ. ನನಗೆ ನನ್ನ ಮನೆಯವರೇ ಸ್ನೇಹಿತರು. ಕೆಲಸದ ಆಳುಗಳ ಮಕ್ಕಳೇ ಒಡನಾಡಿಗಳು. ನನ್ನ ತಂದೆ ಪಟೇಲ್ ಕೃಷ್ಣಯ್ಯ ಅಂತ. ನನ್ನ ಅತ್ತೆ ಕಾವೇರಮ್ಮ ಬಾಲ್ಯದಲ್ಲಿಯೇ ಗಂಡನನ್ನು ಕಳಕೊಂಡಿದ್ದರಿಂದ, ಹೆಣ್ಣುಮಕ್ಕಳ ಸಂಕಷ್ಟ ನನ್ನ ತಂದೆಗೆ ಅರಿವಿತ್ತು. ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಅಂತಲೇ ನಮ್ಮನ್ನು ಬೆಳೆಸಿದರು. ದೂರದ ಶಿವಮೊಗ್ಗದಲ್ಲಿ ಒಂದು ಮನೆಯನ್ನು ಮಾಡಿ, ಆಳು ಇಟ್ಟು, ನಮ್ಮನ್ನು ಓದಿಸಿದರು.
ಮಲೆನಾಡಿನಲ್ಲಿ ನವೆಂಬರ್ ಬಂತು ಎಂದರೆ, ನಮಗೇನೋ ಒಂದು ಖುಷಿ. ಅಡಕೆ ಸುಲಿತದ ಪರ್ವ ಆರಂಭವಾಗುತ್ತಿತ್ತು. ರಾತ್ರಿ ಒಂಬತ್ತರಿಂದ, ಎರಡು ಗಂಟೆ- ಮೂರು ಗಂಟೆ ತನಕ ಆಳುಗಳು ಅಡಕೆ ಸುಲಿಯುತ್ತಿದ್ದರು. ಆಗ ಬೇರೆ ಯಾವ ಮಾಧ್ಯಮಗಳೂ ಇರಲಿಲ್ಲ. ಅಲ್ಲಿ ಸೇರುತ್ತಿದ್ದ ಹೆಂಗಸರು, ಜಾನಪದ ಗೀತೆ ಹಾಡೋರು, ನಾಟಕದ ಗೀತೆಗಳನ್ನು ಹಾಡೋರು, ಚೆಂದ ಚೆಂದದ ಕತೆಗಳನ್ನು ಹೇಳ್ಳೋರು. ಆ ಎಲ್ಲ ಚಿತ್ರಗಳೂ ನನ್ನ ಮನದೊಳಗೆ ಅಚ್ಚೊತ್ತಿದ್ದವು. ಹೂವಿ ಅಂತ ಒಬ್ಬಳಿದ್ದಳು: ಬಹಳ ಸೊಗಸಾಗಿ ಜಾನಪದ ಗೀತೆ ಹಾಡೋಳು. ಅವಳನ್ನು ನೋಡಿ, ನನಗೂ ಹಾಡು ಕಲಿಯಬೇಕೆಂಬ ಆಸೆ ಹುಟ್ಟಿತು. ನಂತರವಷ್ಟೇ ನಾನು, ಪಂಢರಿಬಾಯಿ ಅವರ ಸೋದರ ಪ್ರಭಾಕರ ಅವರಲ್ಲಿ ಸಂಗೀತ ಕಲಿಯತೊಡಗಿದೆ…
(ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ನಡೆದ “ಸಾಧಕರ ಸಂವಾದ’ದಲ್ಲಿ, ಹಿರಿಯ ಗಾಯಕಿ ಬಿ.ಕೆ. ಸುಮಿತ್ರಾ ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರ ಗಾನಯಾನದ ಮಾತುಗಳ ಆಯ್ದ ತುಣುಕನ್ನು ಇಲ್ಲಿ ನೀಡಲಾಗಿದೆ…)