ಪ್ರಕೃತಿ ವಿಸ್ಮಯದ ಗೂಡು. ಪ್ರತೀ ಸಲ ಈ ವಿಸ್ಮಯವು ನಮ್ಮನ್ನು ಆಶ್ಚರ್ಯಗೊಳಿಸುತ್ತಿರುತ್ತವೆ. ಪ್ರಪಂಚದ ಹಲವು ಪ್ರದೇಶದಲ್ಲಿ ಪ್ರಕೃತಿಯ ಕೌತುಕಗಳನ್ನು ಕಾಣಬಹುದು. ಈ ನೈಸರ್ಗಿಕ ವಿಸ್ಮಯಗಳು ಕೆಲವೊಮ್ಮೆ ಮಾನವನ ಕ್ರಿಯಾಶೀಲತೆಗೆ ಸವಾಲೊಡ್ಡಿದ ರೀತಿಯಲ್ಲಿರುತ್ತವೆ ಎಂಬೂದು ಸತ್ಯ. ಒಂದೊಂದು ವಾತಾವರಣದಲ್ಲೂ ಅದರದೇ ಆದ ಪ್ರಕೃತಿಯ ಕೌತುಕಗಳನ್ನು ನೋಡಬಹುದು. ಅಂತಹದ್ದೇ ಪ್ರಕೃತಿಯ ರಮ್ಯತಾಣ ಲಂಡನ್ನಿನ ಡರ್ಡಲ್ ಡೋರ್.
ಡರ್ಡ್‌ಲ್ ಡೋರ್ ಹೆಸರೇ ವಿಚಿತ್ರ ಎನ್ನಿಸುತ್ತದೆ. ಇದರ ಹೆಸರಂತೆ ಇದು ಬಾಗಿಲಿನ ಕಮಾನಿನ ಆಕಾರದಲ್ಲಿದೆ. ಈ ಡರ್ಡಲ್ ಡೋರ್ ಸುಣ್ಣದ ಕಲ್ಲಿನ ನೈಸರ್ಗಿಕ ಕಲಾಕೃತಿ. ಕಾರ್ನ್ಕಾರ್‌ಡೆಂಟ್ ಕೋಸ್ಟ್‌ಲೈನ್‌ನಲ್ಲಿ ಬೃಹತ್ ಆಕಾರದ ಕಲ್ಲುಗಳಿಂದ ಇದು ಕೂಡಲ್ಪಟ್ಟಿವೆ. ಈ ಸೌಂದರ್ಯವನ್ನು ನೋಡಿದ ನಮಗೆ ಮಾತೇ ಹೊರಡದಾಗಿತ್ತು.
ಇಲ್ಫೋರ್ಡ್ನಿಂದ ಬೆಳಗ್ಗೆ ಏಂಜಲ್ ಟೂರ್‌ನ ವಾಹನದಲ್ಲಿ ಪ್ರಯಾಣ ಆರಂಭಿಸಿದ್ದೇವು. ವೆಂಬ್ಲಿ ಎಂಬಲ್ಲಿ ಇನ್ನಷ್ಟು ಪ್ರಯಾಣಿಕರು ನಮ್ಮನ್ನು ಸೇರಿಕೊಂಡರು. ವಾಹನದ ಪ್ರಯಾಣದುದ್ದಕ್ಕೂ ¤ ವಿಶಾಲವಾದ ರಸ್ತೆಯಲ್ಲಿ ಪ್ರಕೃತಿಯ ರಮ್ಯ ಸೌಂದರ್ಯವನ್ನು ಸವಿಯುತ್ತಾ ಸಾಗಿದೆವು. ಸುರಿಯುತ್ತಿದ್ದ ಜಿಟಿಜಿಟಿ ಮಳೆಗೆ ವೈರಿ ಪಡೆಗಳನ್ನು ಮಣಿಸಲು ಸಿದ್ಧರಾದ ಸೈನಿಕರಂತೆ ನಾವೂ ಸಹ ಸ್ವೆಟರ್, ಟೋಪಿಯ ಬೆಚ್ಚನೆಯ ಉಡುಪನ್ನು ಧರಿಸಿ ಕೊಡೆಯೊಂದಿಗರ ಸಿದ್ಧರಾಗಿ ಬಂದಿದ್ದೇವು. ನಾವು ಭೇಟಿ ನೀಡುವ ಪ್ರದೇಶ ಹೇಗಿರುತ್ತದೆ ಎಂಬ ಕಲ್ಪನಾಲೋಕದಲ್ಲಿ ತೇಲುತ್ತಿರುವ ಹೊತ್ತಿಗೆ ಸುಮಾರು ಎರಡೂವರೆ ಗಂಟೆ ಪ್ರಯಾಣದ ಬಳಿಕ ಡಾರ್ಸೆಟ್ ಪ್ರದೇಶವನ್ನು ತಲುಪಿದ್ದೇವು.
ಅಲ್ಲಿಗೆ ನಾವು ತಲುಪಿತ್ತದ್ದ ಹಾಗೇ ಸುರಿಯುತ್ತಿದ್ದ ಮಳೆ ಒಮ್ಮೆಲೆ ಮಾಯವಾಗಿ ಸೂರ್ಯನ ಕಿರಣಗಳು ನಮ್ಮನ್ನು ಸ್ವಾಗತಿಸುತ್ತಿದ್ದವು. ಇಂಗ್ಲೆಂಡಿನ ಡಾರ್ಸೆಟ್‌ನಲ್ಲಿರುವ ಲುಲ್ವರ್ತ್ ಬಳಿಯ ಜುರಾಸಿಕ್ ಪಶ್ಚಿಮ ಕರಾವಳಿಯಲ್ಲಿ ಈ ನೈಸರ್ಗಿಕ ಸುಣ್ಣದಕಲ್ಲಿನ ಕಮಾನು ಆಕೃತಿಯಿದೆ. ವೆಲ್ಡ್ ಹೆಸರಿನ ಕುಟುಂಬ ಈ ಲುಲ್ವರ್ತ್ ಎಸ್ಟೇಟ್‌ನ್ನು ಹೊಂದಿದೆ. ಆದರೆ ಇದು ಸಾರ್ವಜನಿಕ ಭೇಟಿಗೂ ಮುಕ್ತವಾಗಿದೆ.
ಪ್ರಕೃತಿಯ ರಮ್ಯ ಸೌಂದರ್ಯ ಹಚ್ಚ ಹಸುರಿನ ವಾತಾವರಣ ನಮ್ಮನ್ನು ತನ್ನೆಡೆಗೆ ಬರಸೆಳೆಯುತ್ತಿತ್ತು. ಇಲ್ಲಿ ಬಹಳ ಚಳಿ ಇರುವುದರಿಂದ ನಾವು ಗಾಳಿಯಲ್ಲಿ ತೇಲಾಡಿದ ಅನುಭವ ಆಗುತ್ತಿತ್ತು. ಅಲ್ಲಿಂದ ಸುಮಾರು ಮೂವತ್ತು ನಿಮಿಷಗಳ ಕಾಲ ಹಸುರು ಬೆಟ್ಟದಲ್ಲಿ ಸಂಚರಿಸಿದ ಅನಂತರ ದೂರದಲ್ಲಿ ನೀಲಾಗಸಕ್ಕೆ ಭೂಮಿ ಆತುಕೊಂಡಂತೆ ಕಂಡಿದ್ದು ಭೋರ್ಗರೆಯುತ್ತಿರುವ ಸಾಗರ. ಅದು ಅಟ್ಲಾಂಟಿಕ್ ಮಹಾ ಸಾಗರದ ಪ್ರದೇಶ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ದನ್ನು ಇಲ್ಲಿ ಬ್ರಿಟಿಷ್ ಕಾಲುವೆ ಎಂಬುದಾಗಿಯೂ ಕರೆಯುತ್ತಾರೆ. ಇಲ್ಲಿ ಪ್ರತೀ ವರ್ಷ ಅಂದಾಜು ಐದು ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರಂತೆ.
ಈ ಪ್ರದೇಶಕ್ಕೆ ಶೇ.30ರಷ್ಟು ಜನ ಜುಲೈ ಆಗಸ್ಟ್ ತಿಂಗಳಲ್ಲಿ ಭೇಟಿ ನೀಡುತ್ತಾರೆ. ಹೆಬ್ಟಾಗಿಲಿನಂತೆ ಕಾಣುವ ಸುಣ್ಣದ ಕಲ್ಲಿನ ನೈಸರ್ಗಿಕ ಆಕೃತಿ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ. ಸಾಗರದ ತೀರದಲ್ಲಿರುವ ಈ ಕಮಾನಿನ ಸುತ್ತಮುತ್ತ ಶುಚಿತ್ವವನ್ನು ಕಾಪಾಡಲು ಪರಿಸರ ಪ್ರೇಮಿಗಳು, ಸ್ವಯಂ ಸೇವಕರು ಆಗಾಗ ಇಲ್ಲಿ ಸ್ವತ್ಛತೆಯನ್ನು ನಡೆಸುತ್ತಾರೆ. ಲಿಟ³ರ್ ಫ್ರೀ ಡಾರ್ಸೆಟ್‌ನ ಸಂಯೋಜಕಿ ಎಮ್ಮ ಟೀಸ್ಡೋರ್ ಹೇಳುವಂತೆ 2022ರಲ್ಲಿ ದಿ ಗ್ರೇಟ್ ಡಾರ್ಸೆಟ್ ಬೀಚ್ ಕ್ಲೀನ್ – 17ರಲ್ಲಿ 200ಕ್ಕೂ ಹೆಚ್ಚಿನ ಜನ ಭಾಗವಹಿಸಿ ಸುಮಾರು 100 ಚೀಲಗಳಷ್ಟು ಬಾಟಲಿಗಳು, ಟೈರ್‌ಗಳಂತಹ ತ್ಯಾಜ್ಯಗಳನ್ನು ಜತೆಗೆ ಒಂದು ಬೃಹತ್ ಆಕಾರದ ಬಿನ್ ತರಹದ ವಸ್ತುವನ್ನು ಸಹ ತೆರವುಗೊಳಿಸಿದ್ದಾರಂತೆ. ಇಲ್ಲಿನ ಒಂದು ಸಾಗರದ ಒಡಲೊಳಗೆ ಇಷ್ಟೆಲ್ಲ ತ್ಯಾಜ್ಯವಿರುವಾಗ ಇನ್ನುಳಿದ ಜಲಮೂಲಗಳಲ್ಲಿ ಎಷ್ಟು ತ್ಯಾಜ್ಯಗಳು ಸಿಗಬಹುದು ಎಂದು ಅಂದಾಜಿಸಿದರೆ ಪ್ರಕೃತಿಯ ಸೌಂದರ್ಯಕ್ಕೆ ನಾವು ಎಷ್ಟು ಕುತ್ತು ತರುತ್ತಿದ್ದೇವೆ ಎಂದೆನಿಸುತ್ತದೆ. ಪರಿಸರದ ನೈಜತೆಯನ್ನು, ವಿಸ್ಮಯಗಳನ್ನು ನೋಡಿ ಆನಂದಿಸುವ ನಾವು ಅದರ ಸುರಕ್ಷತೆ, ರಕ್ಷಣೆಯ ಕಡೆಗೂ ಗಮನಹರಿಸಬೇಕಾಗಿದೆ.
ಇಲ್ಲಿ ಓಡಾಡುವಾಗ ಇಳಿಜಾರುಗಳಲ್ಲಿ ಜಾರುವುದರಿಂದ ಹೈಕಿಂಗ್ ಬೂಟುಗಳು ಧರಿಸಿದ್ದರೆ ಒಳ್ಳೆಯದು. ಬೇಸಗೆಯಲ್ಲಿ ತಂಪಾದ ವಾತಾವರಣ ಸವಿಯಲು ಹೇಳಿ ಮಾಡಿಸಿದ ತಾಣ. ಜೂನ್ ತಿಂಗಳಲ್ಲಿ ಅತೀ ಹೆಚ್ಚು ಜನ ಸಂದಣಿ ಇರುತ್ತದೆ. ಪ್ರತೀ ವರ್ಷ ಇಲ್ಲಿ ಹಲವಾರು ಹಾಲಿವುಡ್, ಬಾಲಿವುಡ್ ಚಿತ್ರಗಳನ್ನು ಚಿತ್ರಿಕರೀಸಲಾಗಿತ್ತದೆ. ಇದರಿಂದ ಈ ಜಾಗವು ಇನ್ನಷ್ಟು ಪ್ರಸಿದ್ಧಿಯಾಗಿವೆ.
ಈ ಸ್ಥಳದಿಂದ ಲಲ್ವರ್ತ್ ಕೋವ್ ಕಡೆಗೆ ಸಾಗಿದರೆ ಕಾಣುವುದು ಪ್ರಕೃತಿಯ ಸರೋವರದಂತ ನಿರ್ಮಾಣ. ಇಲ್ಲಿ ಕಡಲ ಅಬ್ಬರವಿಲ್ಲದ ಪ್ರಶಾಂತವಾದ ಸರೋವರ ಇದ್ದಂತೆ ಕಾಣುತ್ತಿತ್ತು. ಇದು ಅಪಾರವಾದ ಬೆಣಚು ಕಲ್ಲುಗಳಿಂದ ಕೂಡಿದೆ. ನುಣುಪಾದ ಆಕೃತಿಗಳಿಗೆ ಮನ ಸೋಲದವರಿಲ್ಲ. ಈ ಕಡಲ ರಮ್ಯತೆಗೆ ಬೆರಗಾದವರಿಲ್ಲ. ಇಲ್ಲಿ ದೋಣಿ ವಿಹಾರಕ್ಕೂ ಅವಕಾಶವಿದೆ. ಪ್ರಕೃತಿಯ ಸೊಬಗನ್ನು ಮನದುಂಬಿಕೊಂಡು ನಾವು ಮುಂದೆ ಸಾಗಿದೆವು. ವಿಶೇಷವೆಂದರೆ ಈ ಪರಿಸರದ ಸೊಬಗಿನ ಮಧ್ಯೆ ಪುಸ್ತಕ ಮಳಿಗೆಗಳು ಇವೆ. ಇಲ್ಲಿ ವಿವಿಧ ವಸ್ತುಗಳ ಮಳಿಗೆಗಳು ಇದ್ದು ಅದನ್ನು ಕಾಣಬಹುದು.
*ಮ.ಸುರೇಶ್ ಬಾಬು, ಇಲ್ಫೋರ್ಡ್