ಹುಬ್ಬಳ್ಳಿ: ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ ಎಲ್ಲಿದೆ ಎಂದು ಕೇಳಿದರೆ ಯಾವುದೋ ಬೇರೆ ದೇಶದಲ್ಲಿ? ರಾಜ್ಯದಲ್ಲಿ ಇರಬಹುದಾ ಎಂದು ಆಲೋಚಿಸುವ ಪ್ರಮೇಯವೇ ಇಲ್ಲ!
ಕಾರಣ ಅದಿನ್ನು ಬೇರೆಲ್ಲೋ ಅಲ್ಲ, ನಮ್ಮ ಹುಬ್ಬಳ್ಳಿಯಲ್ಲೇ ಇರಲಿದೆ. ಸದ್ಯ ಇದರ ಕುರಿತ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ.
1400 ಮೀ. ಉದ್ದ ಮತ್ತು 10 ಮೀ. ಅಗಲದ ಈ ಪ್ಲ್ಯಾಟ್‌ಫಾರಂ ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಪ್ಲ್ಯಾಟ್‌ಫಾರಂ ನಂ.1 ಆಗಿದೆ. ಈಗಿನ ಪ್ಲ್ಯಾಟ್‌ಫಾರಂ 550 ಮೀ. ಉದ್ದವಿದ್ದು ಇದನ್ನು 1400 ಮೀ.ಗೆ ವಿಸ್ತರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೇ (SWR) ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಪ್ಲ್ಯಾಟ್‌ಫಾರಂ ವಿಸ್ತರಣೆ ಸೇರಿದಂತೆ, ಮೂರನೇ ಪ್ರವೇಶ ದ್ವಾರ, ಎಲೆಕ್ಟ್ರಿಕಲ್ ಕಾಮಗಾರಿ, ಸಿಗ್ನಲಿಂಗ್ ಕಟ್ಟಡ ಇತ್ಯಾದಿ ಕಾಮಗಾರಿಗಳಿಗೆ 90 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. ಹುಬ್ಬಳ್ಳಿ – ಬೆಂಗಳೂರು ಹಳಿ ದ್ವಿಪಥ ಕಾಮಗಾರಿಗೆ ಪೂರಕವಾಗಿ ಪ್ಲ್ಯಾಟ್‌ಫಾರಂ ವಿಸ್ತರಣೆ ನಡೆಯುತ್ತಿದೆ.
ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ ಹೊಂದಿದ ದೇಶದಲ್ಲಿ ಭಾರತವೇ ಮುಂದಿದೆ. ಈವರೆಗೆ ಗೋರಖ್‌ಪುರ ನಿಲ್ದಾಣದಲ್ಲಿ ಪ್ಲ್ಯಾಟ್‌ಫಾರಂ ಅತಿ ಉದ್ದದ ಪ್ಲ್ಯಾಟ್‌ಫಾರಂ ಆಗಿತ್ತು. ಇದು 1366 ಮೀ. ಉದ್ದವಿದೆ. ಎರಡನೆಯ ಸ್ಥಾನದಲ್ಲಿ ಕೊಲ್ಲಂ ಜಂಕ್ಷನ್ ನಿಲ್ದಾಣದ ಪ್ಲ್ಯಾಟ್‌ಫಾರಂ ಇದ್ದು, ಇದು 1180 ಮೀ. ಉದ್ದವಿದೆ.