Advertisement

ಕಬ್ಬು ಇಳುವರಿ ಹೆಚ್ಚಿಸಲು ದೂರಗಾಮಿ ಮುನ್ನೋಟ ಅಗತ್ಯ

01:13 PM Oct 19, 2018 | |

ಬೆಂಗಳೂರು: ದೇಶೀಯ ಬೇಡಿಕೆಗೆ ತಕ್ಕಂತೆ ಹಾಗೂ ರಫ್ತು ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಕಬ್ಬಿನ ಇಳುವರಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಚೇತರಿಕೆ ತರಲು ದೂರಗಾಮಿ “ಮುನ್ನೋಟ’ ಸಿದ್ಧಪಡಿಸುವ ಅಗತ್ಯವಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಹಾಯಕ ಮಹಾನಿರ್ದೇಶಕ ಡಾ. ಆರ್‌.ಕೆ. ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಬೆಂಗಳೂರು ಕೃಷಿ ವಿವಿ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಸಹಯೋಗದಲ್ಲಿ ಜಿಕೆವಿಕೆಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ “ಕಬ್ಬು ಸಂಶೋಧನಾ ಯೋಜನೆಯ ಅಖೀಲ ಭಾರತ ಸಮನ್ವಯಕಾರರ 32ನೇ ದ್ವೆ„ವಾರ್ಷಿಕ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ದೇಶದಲ್ಲಿ ಕಬ್ಬು ಬೆಳೆಯುವ ಪ್ರದೇಶ ಹಾಗೂ ಸಕ್ಕರೆ ಉತ್ಪಾದಿಸುವ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಸುಮಾರು 6 ಮಿಲಿಯನ್‌ ರೈತರು ಕಬ್ಬು ಬೇಸಾಯ ಮಾಡುತ್ತಿದ್ದಾರೆ. ಇದು 50 ಮಿಲಿಯನ್‌ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿದೆ. ಪ್ರಪಂಚದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ದೇಶದ ಪಾಲು ಶೇ.16ರಷ್ಟಿದೆ.

ಸದ್ಯ ಸಕ್ಕರೆಯ ದೇಶೀಯ ಬೇಡಿಕೆ ವಾರ್ಷಿಕ ಸರಾಸರಿ 24ರಿಂದ 25 ಮಿಲಿಯನ್‌ ಟನ್‌ ಇದೆ. ಮುಂದಿನ ಒಂದೆರಡು ದಶಕಗಳಲ್ಲಿ ಇದರ ಪ್ರಮಾಣ ದುಪ್ಪಟ್ಟಾಗಲಿದೆ. ಕಳೆದ ವರ್ಷ 33 ಮಿಲಿಯನ್‌ ಟನ್‌ ದಾಖಲೆ ಸಕ್ಕರೆ ಉತ್ಪಾದನೆಯಾಗಿತ್ತು. ಇದೇ ವೇಳೆ ಸಕ್ಕರೆ ರಫ್ತು ಬೇಡಿಕೆ ಸಹ ಏರುಗತಿಯಲ್ಲಿದೆ.

ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ದೇಶೀಯ ಬೇಡಿಕೆಗೆ ತಕ್ಕಂತೆ ಹಾಗೂ ರಫ್ತು ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಕಬ್ಬಿನ ಇಳುವರಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಚೇತರಿಕೆ ತರುವ ನಿಟ್ಟಿನಲ್ಲಿ ದೂರಗಾಮಿ “ಮುನ್ನೋಟ’ ಸಿದ್ಧಪಡಿಸಬೇಕಿದೆ ಎಂದು ಸಿಂಗ್‌ ಪ್ರತಿಪಾದಿಸಿದರು.

Advertisement

ತರಗು ಸುಡಬೇಡಿ: ಕಬ್ಬಿನ ತರಗನ್ನು ಸುಡದೆ ಕಬ್ಬಿನ ಗದ್ದೆಗಳಲ್ಲಿಯೇ ಕರಗಿಸುವುದರಿಂದ ಶೇ.10ರಿಂದ ಶೇ.15ರಷ್ಟು ಹೆಚ್ಚುವರಿ ಇಳುವರಿ ಪಡೆಯಬಹುದು. ಜತೆಗೆ ಮಣ್ಣಿನ ಫ‌ಲವತ್ತತೆಯನ್ನೂ ಕಾಪಾಡಬಹುದು. ಕಬ್ಬಿನಿಂದ ತಯಾರಿಸಿದ ಎಥಾನಾಲ್‌ ಅನ್ನು ಡೀಸಲ್‌ನೊಂದಿಗೆ ಶೇ.10ರಷ್ಟು ಬೆರಸಿ ಉಪಯೋಗಿಸಿದರೆ ದೇಶಿ ವಿನಿಮಯ ಉಳಿಸುವ ಜತೆಗೆ ರೈತರ ಹಿತ ಕಾಪಾಡಬಹುದು ಎಂದು ಸಲಹೆ ನೀಡಿದರು.

ಬೆಲೆ ಬಗ್ಗೆ ಆಲೋಚಿಸಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರಪ್ರಸಾದ್‌, ಉತ್ಪಾದನೆ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ, ಬೆಲೆ ಸಮಸ್ಯೆ ಬಗ್ಗೆಯೂ ನೀತಿ ನಿರೂಪಕರು ಗಂಭೀರವಾಗಿ ಆಲೋಚಿಸಬೇಕು. ಉತ್ಪಾದಕರು ಮತ್ತು ಗ್ರಾಹಕರ ಹಿತ ಕಾಯುವಂತಹ ನೀತಿಗಳು ರೂಪುಗೊಳ್ಳಬೇಕು.

ಅದಕ್ಕಾಗಿ ಸಂಶೋಧನಾ ಸಂಸ್ಥೆಗಳು ಸರ್ಕಾರಗಳಿಗೆ ಅಗತ್ಯ ಸಲಹೆ ನೀಡಬೇಕು. ಸಕ್ಕರೆ ಸೇರಿದಂತೆ ಅದರ ಉಪ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸಬೇಕು. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪದ್ಧತಿಗಳಲ್ಲಿ ಬದಲಾವಣೆ ತರಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎ.ಡಿ ಪಾಠಕ್‌, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಉಪ ಮಹಾನಿರ್ದೇಶಕ ಡಾ.ಎ.ಕೆ.ಸಿಂಗ್‌, ಕೊಯಿಮತ್ತೂರು ಕಬ್ಬು ತಳಿ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಡಾ.ಬಕ್ಷಿರಾಮ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next