ಸುತ್ತಲೂ ಮರಳ್ಳೋ ಮರಳು. ಕಣ್ಣು ಹಾಯಿಸಿದತ್ತಲೆಲ್ಲಾ ಮರಳು. ಆಕಾಶ ಕೊನೆಯಾಗುವಲ್ಲಿಯವರೆಗೆ ಮರಳು. ಅದು ಆಫ್ರಿಕಾದ ಸಹರಾ ಮರುಭೂಮಿ. ಮರುಭೂಮಿಯ ನಟ್ಟ ನಡುವೆ ಒಂದು ಮರ. ಅದನ್ನು ಸುತ್ತಮುತ್ತಲಿನವರು “ನೈಜರ್‌ನ ಏಕಾಂಗಿ ಮರ’ ಎಂದೇ ಕರೆಯುತ್ತಿದ್ದರು. ಸುತ್ತಮುತ್ತಲಿನವರು ಮಾತ್ರವಲ್ಲ ವಿಶ್ವಾದ್ಯಂತ ಜನರು ಅದನ್ನು “ಜಗತ್ತಿನ ಅನಾಥ ಮರ’ ಎಂದೇ ಕರೆಯುತ್ತಿದ್ದಿದ್ದು. ಏಕೆಂದರೆ ಮರ ಇದ್ದ ಜಾಗದಿಂದ ಸುಮಾರು 400 ಕಿ.ಮೀ ಸುತ್ತಳತೆಯಲ್ಲಿ ಒಂದೇ ಒಂದು ಮರ ಇರಲಿಲ್ಲ. ಅದಕ್ಕಿಂತ ಸ್ವಾರಸ್ಯಕರ ಸಂಗತಿ ಎಂದರೆ ಆ ಏಕಾಂಗಿ ಮರ ಸುಮಾರು 300 ವರ್ಷಗಳಿಂದ ಅದೇ ಸ್ಥಳದಲ್ಲಿ ನೆಲೆ ನಿಂತಿತ್ತು. ಮರುಭೂಮಿಯಲ್ಲಿ ಪ್ರದೇಶಗಳು ಹಿಂದಿನ ದಿನ ಇದ್ದಂತೆ ಈ ದಿನ ಇರುವುದಿಲ್ಲ. ಬಿರುಗಾಳಿಯ ಕಾರಣದಿಂದಾಗಿ ರಾತ್ರೋ ರಾತ್ರಿ ಮರಳ ದಿಣ್ಣೆಗಳು ಸೃಷ್ಟಿಯಾಗಿಬಿಡುತ್ತದೆ, ರಾತ್ರೋರಾತ್ರಿ ಹಳ್ಳಿಗಳು ಮುಚ್ಚಿ ಹೋಗುತ್ತವೆ. ಆದರೆ ಮೂರು ಶತಮಾನಗಳ ಕಾಲ ಆ ಒಂದು ಮರ ಮಾತ್ರ ಇದ್ದಲ್ಲೇ ಇತ್ತು. ದಾರಿಹೋಕರಿಗೆ ದಿಕ್ಕು ತೋರುತ್ತಲಿತ್ತು. 1973ರ ಒಂದು ದಿನ ಲಾರಿಯೊಂದು ವೇಗವಾಗಿ ಮುನ್ನುಗ್ಗಿ ಬರುತ್ತಿತ್ತು. ಮರವನ್ನು ಸಮೀಪಿಸುತ್ತಲೇ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡುಬಿಟ್ಟ. ಬಂದಷ್ಟೇ ವೇಗದಲ್ಲಿ ಲಾರಿ ಏಕಾಂಗಿ ಮರಕ್ಕೆ ಅಪ್ಪಳಿಸಿತು. 300 ವರ್ಷಗಳ ಕಾಲ ಗಾಳಿ, ಮಳೆ ಮುಂತಾದ ಪ್ರಕೃತಿ ವಿಕೋಪಗಳನ್ನು ತಡೆದುಕೊಂಡ ಮರ ಒಂದು ಕ್ಷಣದಲ್ಲಿ ಮನುಷ್ಯನೊಬ್ಬನ ಅಚಾತುರ್ಯಕ್ಕೆ ಕೆಡವಿಬಿತ್ತು.
ಹವನ