Advertisement

ಸಿಲಿಕಾನ್‌ ಸಿಟಿ ಮಾಲಿನ್ಯ ಪರಿಹರಿಸಲಿದೆ ಲಂಡನ್‌ ಸಂಸ್ಥೆ

12:39 PM Dec 04, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿಗೆ ಸಾಥ್‌ ನೀಡಲು ಲಂಡನ್‌ ಮೂಲದ ಸಂಸ್ಥೆ ಮುಂದಾಗಿದೆ. ವಿಶ್ವದಾದ್ಯಂತ ನಗರೀಕರಣದಿಂದ ಏರುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸುವ ಸಲುವಾಗಿ “ಸಿ40 ಸಿಟೀಸ್‌ ಲೀಡರ್‌ಶಿಪ್‌ ಗ್ರೂಪ್‌’ ಕಾರ್ಯ ನಿರ್ವಹಿಸುತ್ತಿದೆ.

Advertisement

ಹವಾಮಾನ ಬದಲಾವಣೆಯ ಉಪಕ್ರಮವಾಗಿ ವಾಯು ಮಾಲಿನ್ಯ ನಿಯಂತ್ರಿಸುವ ಸಲುವಾಗಿ “ಸಿ40 ಏರ್‌ ಕ್ವಾಲಿಟಿ ನೆಟ್‌ವರ್ಕ್‌’ ರಚಿಸಿದ್ದು, ಅದರ ಮೇತೃತ್ವವನ್ನು ಲಂಡನ್‌ ಹಾಗೂ ಬೆಂಗಳೂರು ನಗರಗಳು ವಹಿಸಿಕೊಂಡಿವೆ.

ಅದರಂತೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ಮಾಪನ ಹಾಗೂ ಸಮಸ್ಯೆಗಳಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಒಂದು ವರ್ಷ ಲಂಡನ್‌ ಮತ್ತು ಪಾಲಿಕೆಯ ತಜ್ಞರ ತಂಡಗಳು ಕಾರ್ಯನಿರ್ವಹಿಸಲಿವೆ. ಜತೆಗೆ ಮಾಲಿನ್ಯ ಸಮಸ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಸಹ ಸೂಚಿಸಲಿದ್ದಾರೆ. 

ಸಿ40 ಏರ್‌ ಕ್ವಾಲಿಟಿ ನೆಟ್‌ವರ್ಕ್‌ ಮೂಲಕ ವಿಶ್ವದ ವಿವಿಧ ನಗರಗಳು ವಾಯು ಮಾಲಿನ್ಯ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಅಧ್ಯಯನ ನಡೆಸಿ, ಅವುಗಳಲ್ಲಿ ಅತ್ಯುತ್ತಮವಾದ ಮಾದರಿ ಕ್ರಮಗಳನ್ನು ಉಳಿದ ನಗರಗಳು ಪಾಲಿಸುವಂತೆ ಸೂಚಿಸಲಾಗುತ್ತದೆ. ಮಾಲಿನ್ಯ ಸೇರಿದಂತೆ ನಗರದ ಇತರೆ ಸಮಸ್ಯೆಗಳ ಕುರಿತೂ ಚರ್ಚಿಸಿ ಇತರ ನಗರಗಳಲ್ಲಿನ ಮಾದರಿಗಳನ್ನು ಅನುಸರಿಸಲಾಗುತ್ತದೆ.

ಆರು ಕೋಟಿ ರೂ. ಅನುದಾನ: ಸಿ40 ಏರ್‌ ಕ್ವಾಲಿಟಿ ನೆಟ್‌ವರ್ಕ್‌ ಮುಂದಾಳತ್ವ ವಹಿಸಿಕೊಂಡಿರುವ ಲಂಡನ್‌ ಸಂಸ್ಥೆ, ಬಿಬಿಎಂಪಿಗೆ 6 ಕೋಟಿ ರೂ. ಅನುದಾನ ನೀಡಲಿದೆ. ಹೆಚ್ಚು ಮಾಲಿನ್ಯವಿರುವ ನಗರದ 1000 ಪ್ರದೇಶಗಳಲ್ಲಿ ಮಾಲಿನ್ಯ ಮಾಪಕಗಳು, ಯಂತ್ರಗಳು, ತಂತ್ರಜ್ಞಾನ ಸೇರಿ ವಿವಿಧ ಉಪಕರಣಗಳ ಖರೀದಿಗೆ ಈ ಅನುದಾನ ಬಳಕೆಯಾಗಲಿದೆ.

Advertisement

ಒಂದು ವರ್ಷ ಅಧ್ಯಯನ: ಪಾಲಿಕೆಯ ವ್ಯಾಪ್ತಿಯಲ್ಲಿ ಸಾವಿರ ಕಡೆಗಳಲ್ಲಿ ಅಳವಡಿಸಲಾಗುವ ಮಾಪಕಗಳ ಅಧ್ಯಯನಕ್ಕಾಗಿ ಲಂಡನ್‌ನಿಂದ ತಜ್ಞರ ತಂಡ ಆಗಮಿಸಲಿದ್ದು, ಮಾಲಿನ್ಯಕ್ಕೆ ಕಾರಣಗಳು, ಮಾಲಿನ್ಯದ ತೀವ್ರತೆ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಒಂದು ವರ್ಷ ಪರಿಶೀಲನೆ ನಡೆಸಲಿದ್ದಾರೆ. ತಜ್ಞರ ತಂಡಕ್ಕೆ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಹ ಅಗತ್ಯ ಸಹಕಾರ ನೀಡಲಿದ್ದಾರೆ. 

ಸಿ40 ಏರ್‌ ಕ್ವಾಲಿಟಿ ನೆಟ್‌ವರ್ಕ್‌ ಉದ್ದೇಶವೇನು?: ಜಾಗತಿಕ ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನೆಟ್‌ವರ್ಕ್‌ನ ಪ್ರಮುಖ ಉದ್ದೇಶವಾಗಿದೆ. ಸಿ40ಯ ಸದಸ್ಯ ನಗರಗಳಲ್ಲಿನ ಮಾಲಿನ್ಯ ಸಮಸ್ಯೆಗಳ ಮೇಲೆ ಗಮನ ಚೆಲ್ಲುವುದು, ಮಾಲಿನ್ಯ ಪ್ರಮಾಣ ಸುಧಾರಣೆ ಅನುಸರಿಸಬೇಕಾದ ಕ್ರಮಗಳನ್ನು ಸೂಚಿಸುವುದು, ಸದಸ್ಯ ನಗರಗಳು ಪಾಲಿಸುತ್ತಿರುವ ಮಾದರಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಇತರರು ಪಾಲಿಸುವಂತೆ ಪ್ರೋತ್ಸಾಹಿಸುವ ಮೂಲಕ ನಗರಗಳ ಸುಸ್ಥಿರ ಅಭಿವೃದ್ಧಿಗೆ ಸಹಾಯ ಮಾಡುವುದು ನೆಟ್‌ವರ್ಕ್‌ನ ಗುರಿಯಾಗಿದೆ. 

ನವದೆಹಲಿಯಲ್ಲಿ ನಾಳೆ ಒಡಂಬಡಿಕೆ: ಇದೇ ಡಿ.5ರ ಮಂಗಳವಾರ ನವದೆಹಲಿಯಲ್ಲಿ ನಡೆಯುವ “ಸಿ40 ಸಿಟೀಸ್‌ ಲೀಡರ್‌ಶಿಪ್‌ ಗ್ರೂಪ್‌’ ಸಭೆಯಲ್ಲಿ ಲಂಡನ್‌ ಸಂಸ್ಥೆ ಜತೆಗಿನ ಒಂದು ವರ್ಷದ ಒಪ್ಪಂದಕ್ಕೆ ಬಿಬಿಎಂಪಿ ಮೇಯರ್‌ ಆರ್‌.ಸಂಪತ್‌ರಾಜ್‌ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸಹಿ ಹಾಕಲಿದ್ದಾರೆ. ಅದರಂತೆ ಲಂಡನ್‌ ಸಂಸ್ಥೆ, ಬೆಂಗಳೂರಿಗೆ 6 ಕೋಟಿ ರೂ. ಅನುದಾನ ನೀಡಲಿದೆ. ಮೇಯರ್‌ ಆರ್‌.ಸಂಪತ್‌ರಾಜ್‌ ಅವರು ಭಾನುವಾರ ಮಧ್ಯಾಹ್ನವೇ ನವದೆಹಲಿಗೆ ತೆರಳಿದ್ದು, ಆಯುಕ್ತ ಮಂಜುನಾಥ ಪ್ರಸಾದ್‌ ಸೋಮವಾರ ಮಧ್ಯಾಹ್ನ ತೆರಳಲಿದ್ದಾರೆ.

ಹವಾಮಾನ ಬದಲಾವಣೆ ಉಪಕ್ರಮವಾದ ಸಿ40 ಏರ್‌ ಕ್ವಾಲಿಟಿ ನೆಟ್‌ವರ್ಕ್‌ನ ಮುಂದಾಳತ್ವವನ್ನು ಈ ಬಾರಿ ಲಂಡನ್‌ ಹಾಗೂ ಬೆಂಗಳೂರು ನಗರಗಳು ವಹಿಸಿಕೊಂಡಿವೆ. ಮುಂದಿನ ಒಂದು ವರ್ಷ ನಗರದಲ್ಲಿ ಮಾಲಿನ್ಯ ಪ್ರಮಾಣದ ಕುರಿತು ಹಾಗೂ ಕೈಗೊಳ್ಳಬೇಕಾದ ಪರಿಹಾರಗಳ ಕುರಿತು ಲಂಡನ್‌ ತಜ್ಞರು ಅಧ್ಯಯನ ನಡೆಸಲಿದ್ದಾರೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next