ಕಲಬುರಗಿ: ನಾನು ಬಸವಣ್ಣನವರ ಪರಮಭಕ್ತ, ಇಡೀ ಬೀದರ್ ಜಿಲ್ಲೆ ಬಸವಣ್ಣನವರ ಕರ್ಮ ಭೂಮಿ. ಬಸವಣ್ಣನವರ ನಂಬಿಕೆ ಇದ್ದವರು ಎಲ್ಲಾ ಪ್ರಗತಿಪರ ಸಂಘಟನೆಗಳು, ಎಲ್ಲಾ ಜಾತಿ ಧರ್ಮದವರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾಗಿ ನಾನು ಬೀದರ ಜಿಲ್ಲೆಯಿಂದ ಲೋಕಸಭೆಗೆ ಸ್ಪರ್ಧೆ ಮಾಡಬೇಕೆಂದು ಮಾಡಿದ್ದೇನೆ ಎಂದು ಸಿಎಂ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ ಒಲವು ತೋರಿದ್ದಾರೆ.
ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ ಬಯಸಿದಲ್ಲಿ ಕಣಕ್ಕೆ ಇಳಿಯಲು ಸಿದ್ಧ. ನನಗೆ ಯಾರ ಭಯವಿದೆ. ಅದೂ ಅಲ್ಲದೆ ಕಣಕ್ಕೆ ಇಳಿಯಲು ಮತದಾರರ ಆಶೀರ್ವಾದಬೇಕು ಎಂದರು.
ಶಂಕರಾಚಾರ್ಯರು ಹೋಗುತ್ತಿಲ್ಲ: ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಕಾಂಗ್ರೆಸ್ ನಾಯಕರು ಹೋಗುತ್ತಿಲ್ಲ ಎಂಬ ವಿಚಾರ ಪ್ರತಿಕ್ರಿಯೆ ನೀಡಿದ ಬಿ .ಆರ್ ಪಾಟೀಲ, ಅದು ಒಂದು ಧಾರ್ಮಿಕ ಸಭೆ, ಶಂಕರಾಚಾರ್ಯರು ಸಹ ಹೋಗುತ್ತಿಲ್ಲ, ದೇಶದಲ್ಲಿ ಅದು ಒಂದು ದೊಡ್ಡ ರಾಜಕೀಯ ಆಗಿ ಬಿಟ್ಟಿದೆ. ನಾಲ್ಕು ಜನ ಶಂಕರಾಚಾರ್ಯರು ಹೋಗುತ್ತಿಲ್ಲ. ಇದು ಪ್ರಧಾನಿ ಮೋದಿಯವರಿಗೆ ದೊಡ್ಡ ಹಿನ್ನಡೆಯಲ್ಲವೇ? ಅದನ್ನು ಬಿಜೆಪಿಯವರು ಹೇಳಲಿ. ಅದನ್ನು ಬಿಟ್ಟು ಕಾಂಗ್ರಸ್ ನವರು ಬರುತ್ತಿಲ್ಲ. ಬಣ್ಣ ಬಯಲು ಎನ್ನುವುದೆಲ್ಲವೂ ಬೂಟಾಟಿಕೆ. ನಿಮಗೆ ನಿಜವಾಗಿಯೂ ರಾಮನ ಕಾಳಜಿಯಿದ್ದರೆ ಮಂದಿರ ಪೂರ್ಣ ಮಾಡಿ ಉದ್ಘಾಟನೆ ಮಾಡಿ. ತರಾತುರಿಯಲ್ಲಿ ಯಾಕೆ ಎಂದು ಪ್ರಶ್ನಿಸಿದರು.
ಬಿಜೆಪಿ ನಶೆಯಲ್ಲಿದೆ: ಸ್ಲೀಪಿಂಗ್ ಸರಕಾರ ಎನ್ನುವ ಬಿಜೆಪಿಗರ ಆರೋಪಕ್ಕೆ ಉತ್ತರಿಸಿದ ಅವರು, ನೋಡಿ ಬಿಜೆಪಿಯವರು ನಶೆಯಲ್ಲಿದ್ದಾರೆ. ಶಿವಮೊಗ್ಗದಲ್ಲಿ ಒಂದು ಲಕ್ಷ ಜನ ಸೇರಿಸಿ ಯುವನಿಧಿ ಕೊಡುತ್ತಾ ಇರುವುದು ಸ್ಲೀಪಿಂಗ್ ಸರ್ಕಾರನಾ? ಪ್ರತಿ ಮನೆ ಎರಡು ಸಾವಿರ ರೂ ಹಾಕುತ್ತಿರುವುದು ಸ್ಲೀಪಿಂಗ್ ಸರ್ಕಾರನಾ? ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ, ಹೇಗೆ ಸ್ಲೀಪಿಂಗ್ ಸರ್ಕಾರ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಸೋಲಿನಿಂದ ಹತಾಶೆ ಆಗಿದ್ದಾರೆ. ಬಿಜೆಪಿಯವರಿಗೆ ದಕ್ಷಿಣ ಭಾರತದಲ್ಲಿ ಅವಕಾಶ ಇಲ್ಲ. ಲೋಕಸಭೆಯಲ್ಲೂ ರಾಜ್ಯದಲ್ಲೂ ಅಷ್ಟಕಷ್ಟೆ ಇದರಿಂದ ನಶೆ ಜಾಸ್ತಿಯಾಗಿ ಅವರು ಸ್ಲೀಪಿಂಗ್ ಗೆ ಹೋಗುತ್ತಿದ್ದಾರೆ. ಹೀಗಾಗಿ ಹಾಗೆ ಮಾತಾಡಿದ್ದಾರೆ ಬಿಡಿ ಎಂದರು.