Advertisement
19ನೆಯ ಶತಮಾನದಲ್ಲಿ ಒಂದೆಡೆ ಬ್ರಿಟಿಷರ ವಿರುದ್ಧ ಹೋರಾಟ, ಮಗದೊಂದೆಡೆ ಭಾರತೀಯರಲ್ಲಿದ್ದ ಜಾತಿಮತಗಳ ಸಮಸ್ಯೆ, ಮತ್ತೂಂದೆಡೆ ನಾಯಕರ ಒಡಕುಗಳು, ಬ್ರಿಟಿಷರ ಜನಸತ್ತಾ ವಿರೋಧಿ ಆಡಳಿತ, ಕಿತ್ತು ತಿನ್ನುವ ಬಡತನ ಇತ್ಯಾದಿಗಳಿಂದ ಒಟ್ಟಾರೆ ಬದುಕು ಘನಘೋರವಾಗಿತ್ತು. ಮಹಾರಾಷ್ಟ್ರದ ರತ್ನಾಗಿರಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಬುದ್ಧಿಶಾಲಿ ಬಾಲ ಗಂಗಾಧರ ತಿಲಕರು (23-7-1856- 1-8-1920) ಪತ್ರಕರ್ತರಾಗಿ ಬ್ರಿಟಿಷರ ವಿರುದ್ಧ ಹರಿತ ಲೇಖನ- ಪ್ರತ್ಯಕ್ಷ ಹೋರಾಟ, ಗಣಿತ- ಸಂಸ್ಕೃತದ ಶಿಕ್ಷಕರಾಗಿ ಬೋಧನೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ(ಪುಣೆಯ ಡೆಕ್ಕನ್ ಎಜುಕೇಶನ್ ಸೊಸೈಟಿ, ಫರ್ಗ್ಯುಸನ್ ಕಾಲೇಜು), ಸಾಮಾಜಿಕ ಅಂಕುಡೊಂಕುಗಳ ವಿರುದ್ಧ ಜನಜಾಗೃತಿಯ ಜತೆಗೆ ಮನೆಯೊಳಗೆ ನಡೆಯುತ್ತಿದ್ದ ಗಣೇಶನ ಪೂಜೆಯನ್ನು ಸಾರ್ವಜನಿಕವಾಗಿ ಆಚರಿಸಲು ಇಟ್ಟ ಹೆಜ್ಜೆ “ವಿಶ್ವರೂಪ’ ತಳೆಯಲು ಕಾರಣವಾಯಿತು.
Related Articles
Advertisement
ತಿಲಕರು ಕಾಂಗ್ರೆಸ್‌ಗೆ ಸೇರಿದ್ದು 1890ರಲ್ಲಿ. ಗಣೇಶೋತ್ಸವವನ್ನು ಆರಂಭಿಸಿದ್ದು 1893ರಲ್ಲಿ. ಈ ಕಾಲಘಟ್ಟ ಕಂಡಾಗ ಒಂದಕ್ಕೊಂದು ಬೆಸೆಯುವಿಕೆ ಭಾಸವಾಗದೆ ಇರದು.
ತಿಲಕರು 1893ರಿಂದ ಮೂರು ವರ್ಷ ಮಾತ್ರವೇ ಗಣೇಶೋತ್ಸವದಲ್ಲಿ ಸಕ್ರಿಯವಾಗಿರಲು ಸಾಧ್ಯವಾಯಿತು. 1896ರಲ್ಲಿ ಪ್ಲೇಗ್ ಮಹಾಮಾರಿ ಅಪ್ಪಳಿಸಿತು. ಕೇಸರಿ ಪತ್ರಿಕೆ ಮೂಲಕ ಜನಜಾಗೃತಿ ಮೂಡಿಸುತ್ತಿದ್ದ ತಿಲಕರು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಪುಣೆಯ ಯರವಾಡಾ ಜೈಲಿನಲ್ಲಿ 18 ತಿಂಗಳು ಜೈಲುವಾಸ ಅನುಭವಿಸಬೇಕಾಯಿತು. ಆಗ ಹೊರಬಂದದ್ದು “ಓರಿಯನ್’ ಮತ್ತು “ವೇದ ಕಾಲ ನಿರ್ಣಯ’ ಕೃತಿಗಳು. ಜೈಲಿನ ಆಹಾರಕ್ರಮದಿಂದ ದೇಹವೂ ಕೃಶವಾಗಿ ಆರೋಗ್ಯ ಹದಗೆಟ್ಟಿತು. 1905ರಲ್ಲಿ ಗವರ್ನರ್ ಜನರಲ್ ಲಾರ್ಡ್ ಕರ್ಜನ್ ಬಂಗಾಲದ ವಿಭಜನೆಗೆ ನಿರ್ಣಯ ತಳೆದಾಗ 1906ರಲ್ಲಿ ತಿಲಕರು ಘೋಷಿಸಿದ “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ವಾಕ್ಯ ಶಾಲಾ ಮಕ್ಕಳ ಬಾಯಲ್ಲೂ ಹೊರಹೊಮ್ಮಿತು. ಅವರ “ಅಸಹಕಾರ’ ಚಳವಳಿ, ಸ್ವದೇಶಿ- ಸ್ವರಾಜ್ಯ ಕಲ್ಪನೆಯನ್ನು ಗಾಂಧೀಜಿಯವರು “ಕರ ನಿರಾಕರಣೆ’, “ವಿದೇಶಿ ಬಟ್ಟೆಗಳ ಸುಡುವಿಕೆ’ಯಂತಹ ಮಾದರಿಯಲ್ಲಿ ಮುಂದುವರಿಸಿದರು. ಈ ಹೊತ್ತಿನಲ್ಲಿ ದೇಶದ್ರೋಹದ ಆರೋಪದಲ್ಲಿ ಮ್ಯಾನ್ಮಾರ್‌ನ ಮಂಡಾಲೆ ಜೈಲಿನಲ್ಲಿ (ಗಡೀಪಾರು ಶಿಕ್ಷೆ) 1908ರಿಂದ 14ರ ವರೆಗೆ ಸೆರೆಮನೆ ವಾಸ ವಿಧಿಸಲಾಯಿತು. 1912ರಲ್ಲಿ ಅವರ ಪತ್ನಿ ಸತ್ಯಭಾಮಾದೇವಿ ನಿಧನ ಹೊಂದಿದ ತಂತಿ ಸಂದೇಶ ಬಂದಾಗ ತಿಲಕ್ ಸೊರಗಿದರು. ಅವಧಿ ಮುಗಿದ ಬಳಿಕ ಸರಕಾರ ಗುಪ್ತವಾಗಿ ಪುಣೆಗೆ ತಂದು ಬಿಟ್ಟರೂ “ಲೋಕಮಾನ್ಯ’ ಆದರು. ಜೈಲಿನಲ್ಲಿ 10 ಕೃತಿಗಳನ್ನು ಹೊರತರಬೇಕೆಂದು ನಿರ್ಧರಿಸಿದ್ದರೂ ಬಂದದ್ದು “ಗೀತಾರಹಸ್ಯ’ ಮಾತ್ರ. ಆದರೆ ಅದು ಅತ್ಯಮೂಲ್ಯವಾಯಿತು. ಮಧುಮೇಹದಿಂದ ಬಳಲುತ್ತಿದ್ದ ತಿಲಕರು 1920ರ ಆಗಸ್ಟ್ 1ರಂದು ನಿಧನ ಹೊಂದಿದರು. ಮುಂಬಯಿ ಚೌಪಾಟಿ ಬೀಚ್‌ನಲ್ಲಿ ಸುಮಾರು 2 ಲಕ್ಷ ಅಭಿಮಾನಿಗಳ ಸಮ್ಮುಖ ಅಂತಿಮ ಸಂಸ್ಕಾರ ನಡೆಯಿತು.
19ನೆಯ ಶತಮಾನದ ಕೊನೆ ಮತ್ತು 20ನೆಯ ಶತಮಾನದ ಮೊದಲ ಭಾಗವನ್ನು (ಗಾಂಧೀಜಿಯವರು ನಾಯಕರಾಗಿ ಹೊರಹೊಮ್ಮುವ ಮುನ್ನ) ಸ್ವಾತಂತ್ರ್ಯ ಹೋರಾಟ ಇತಿಹಾಸದಲ್ಲಿ “ತಿಲಕ್ ಯುಗ’ ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ತಿಲಕ್ ಯುಗದಲ್ಲಿ “ಗಣೇಶೋತ್ಸವ’ ಯುಗವೂ ಮೇಳೈಸಿದೆ. ಗಣೇಶೋತ್ಸವಗಳ ಪದಾಧಿಕಾರಿಗಳು ಸಹಿತ ನಾವೆಲ್ಲರೂ ತಿಲಕರ ವಾರಸುದಾರರು, ಹಾಗೆ ನಡೆದುಕೊಳ್ಳಬೇಕಾಗಿದೆ.
-ಮಟಪಾಡಿ ಕುಮಾರಸ್ವಾಮಿ