ಹೊಸದಿಲ್ಲಿ: ಮುಂದಿನ ಎಪ್ರಿಲ್-ಮೇ ತಿಂಗಳಿನಲ್ಲಿ “ಅತ್ಯಂತ ಹೈವೋಲ್ಟೆಜ್’ ಲೋಕಸಭಾ ಚುನಾವಣೆ 9ರಿಂದ 10 ಹಂತಗಳಲ್ಲಿ ನಡೆಯುವ ಸಾಧ್ಯತೆಯಿದೆ. ಇದರ ಜತೆಗೆ ಜಮ್ಮು ಮತ್ತು ಕಾಶ್ಮೀರ ಸಹಿತ ಆರು ಅಥವಾ ಏಳು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣ ಆಯೋಗದ ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಎ.8ರಿಂದ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ ವಿಧಾನಸಭೆಗಳ ಅವಧಿ ಮೇ-ಜೂನ್‌ನಲ್ಲಿ ಮುಕ್ತಾಯವಾಗಲಿದೆ. ಅವುಗಳ ಜತೆಗೆ ಜಮ್ಮು- ಕಾಶ್ಮೀರ, ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನ ಸಭೆ ಗಳಿಗೂ ಸಾಧ್ಯವಾದರೆ ಚುನಾವಣೆ ನಡೆಸುವ ಇರಾದೆ ಯನ್ನು ಚುನಾವಣ ಆಯೋಗ (ಇಸಿಐ) ಹೊಂದಿದೆ.
2014ರಲ್ಲಿ ಕೂಡ 9 ಹಂತಗಳಲ್ಲಿ ಚುನಾವಣೆ ನಡೆ ದಿತ್ತು. ಹೀಗಾಗಿ ಅದೇ ಮಾದರಿಯನ್ನು ಆಧಾರವಾಗಿಟ್ಟು ಕೊಂಡು ಕೊಂಚ ಬದಲಾವಣೆ ಮಾಡುವ ಸಾಧ್ಯತೆ ಗಳು ಇವೆ. ಮೇ ಕೊನೆಯ ಮತ್ತು ಜೂನ್ ಮಧ್ಯ ಭಾಗ ದಲ್ಲಿ ಕ್ರಮವಾಗಿ ಸಿಕ್ಕಿಂ, ಅರುಣಾಚಲ, ಆಂಧ್ರ, ಒಡಿಶಾ ವಿಧಾನಸಭೆಯ ಹಾಲಿ ಅವಧಿ ಮುಕ್ತಾಯ ಗೊಳ್ಳಲಿದ್ದರೆ, ಹರ್ಯಾಣ, ಮಹಾರಾಷ್ಟ್ರಗಳ ವಿಧಾನಸಭೆ ಅವಧಿ ಕ್ರಮವಾಗಿ ನ.2 ಮತ್ತು ನ.9ರಂದು ಮುಕ್ತಾಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯ ರಾಷ್ಟ್ರಪತಿ ಆಳ್ವಿಕೆ ಇದೆ.
ಮಾರ್ಚ್ ಕೊನೆಗೆ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಏಳು ರಾಜ್ಯಗಳಿಗೆ ಮೇ ತಿಂಗಳಿನಲ್ಲಿ ಚುನಾವಣೆ ನಡೆದರೆ 2019ರಲ್ಲಿ ಬೇರೆ ಯಾವುದೇ ರಾಜ್ಯಗಳಲ್ಲಿ ಮತ ಸಮರ ಇರುವುದಿಲ್ಲ. ಮೋದಿ ನೇತೃತ್ವದ ಸರಕಾರ ಪ್ರತಿಪಾದಿಸುತ್ತಿರುವ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವ ಪ್ರಸ್ತಾವಕ್ಕೂ ಈ ಕ್ರಮ ಪೂರ್ವ ಪರೀಕ್ಷೆಯಾಗಿಯೂ ಮಾರ್ಪಾಡಾಗಲಿದೆ.