ಪಿರಿಯಾಪಟ್ಟಣ: ಅವಧಿ ಮನ್ನವೇ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವರ್ಗಾವಣೆ ಖಂಡಿಸಿ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆಯಿತು.
ತಾಲೂಕಿನ ಬೈಲಕುಪ್ಪೆ ಮತ್ತು ಕೊಪ್ಪ ಎರಡು ಗ್ರಾಮದಲ್ಲೂ ಏಕಕಾಲದಲ್ಲಿ ಪ್ರತಿಭಟನೆ ನಡೆಸಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿ.ಲೋಕೇಶ್ ವರ್ಗಾವಣೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದವು. ಬೈಲಕುಪ್ಪೆ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಪಿ.ಲೋಕೇಶ್ ಅಧಿಕಾರ ಸ್ವೀಕಾರ ಮಾಡಿ ಕೇವಲ 7 ತಿಂಗಳು ಮಾತ್ರ ಕಳೆದಿದೆ. ಅವಧಿ ಮುನ್ನವೇ ಬೇರೆಡೆಗೆ ವರ್ಗಾವಣೆ ಮಾಡುತ್ತಿರುವುದು ರಾಜಕೀಯ ಪಿತೂರಿ ಎಂದು ಗಜಾನನ ಸೇವಾ ಸಮಿತಿ ಅಧ್ಯಕ್ಷ ಎಸಿ ರಾಮಕೃಷ್ಣ ದೂರಿದರು.
ಲೋಕೇಶ್ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಠಾಣೆಗೆ ಬರುವ ಜನ ಸಾಮಾನ್ಯರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತಿದ್ದಾರೆ. ಅಲ್ಲದೆ ಬೈಲಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅನಧಿಕೃತವಾಗಿ ಜೂಜಾಟ, ಗಾಂಜಾ, ಸಾಮಾಜಿಕ ವಿರೋಧಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ. ಜೊತೆಗೆ ಠಾಣೆಯ ವ್ಯಾಪ್ತಿಯಲ್ಲಿ ಸ್ವತ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಸಿಬ್ಬಂದಿಗಳೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದಾರೆ ಎಂದರು.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಾಮರ್ಥ ಹೊಂದಿರುವ ಲೊಕೇಶ ಅವರನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ವರ್ಗಾಹಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಕರವೇ ಹಾರನಹಳ್ಳಿ ಹೋಬಳಿಯ ಅಧ್ಯಕ್ಷ ನಟರಾಜ್ ಮಾತನಾಡಿ, ಬೈಲಕುಪ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯಾವುದೇ ಅಧಿಕಾರಿಯನ್ನು ವರ್ಗಾಹಿಸಿದ್ದಾಗ ಉಳಿಸಿಕೊಡಿ ಎಂದು ಕೇಳಿಕೊಂಡ ಇತಿಹಾಸವೇ ಇಲ್ಲ.
ಆದರೆ ಸಬ್‌ಇನ್ಸ್‌ಪೆಕ್ಟರ್ ಪಿ.ಲೊಕೇಶ ಅವರನ್ನು ಉಳಿಸಿಕೊಡಿ ಎಂದು ಕೇಳಿ ಕೊಳ್ಳುತ್ತಿರುವುದು ಈ ವ್ಯಾಪ್ತಿಯ ಜನರಿಗೆ ಯಾವುದೇ ಸಮಸ್ಯೆ ಬಾರದಂತೆ ಶಾಂತಿ ಮತ್ತು ಸುವ್ಯವಸ್ಥೆಯಲ್ಲಿ ನಿಗವಹಿಸುತ್ತಿದ್ದಾರೆ ಎಂಬುದೇ ಅರ್ಥ. ವರ್ಗಾವಣೆ ಹಿಂಪಡೆಯದಿದ್ದರೆ ಮಂಗಳವಾರ ಸಂಪೂರ್ಣ ಬಂದ್ ನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಅಲ್ಲದೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬಂದು ವರ್ಗಾವಣೆ ಸಮಸ್ಯೆಯನ್ನು ಬಗೆಹರಿಸುವ ವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಕೊಪ್ಪ ಹಾಗೂ ಬೈಲಕುಪ್ಪೆ ಸೇರಿದಂತೆ, ಬೈಲಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ವಿವಿಧ ಗ್ರಾಮಗಳ ಮುಖಂಡರು, ನೂರಾರು ಮಂದಿ ಪಾಲ್ಗೊಂಡಿದ್ದರು.