ಮಂಡ್ಯ: ಪ್ರಭಾರ ವರ್ಗಾವಣೆ ಮಾಡಲು 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ತಹಶೀಲ್ದಾರೊಬ್ಬರು ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಪಾಂಡವಪುರ ತಾಲೂಕು ಕಚೇರಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಕೆ.ಸಿ.ಸೌಮ್ಯ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್. ಗ್ರಾಮ ಲೆಕ್ಕಿಗ ಮರಿಸ್ವಾಮಿ ಎಂಬುವರಿಂದ 40 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಗ್ರಾಮ ಲೆಕ್ಕಿಗೆ ಮರಿಸ್ವಾಮಿ ಪ್ರಭಾರ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ತಹಶೀಲ್ದಾರ್ ಕೆ.ಸಿ.ಸೌಮ್ಯ ವರ್ಗಾವಣೆ ಮಾಡಬೇಕಾದರೆ 40 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಅದರಂತೆ ಗುರುವಾರ ಸಂಜೆ ತಮ್ಮ ಕಚೇರಿಯಲ್ಲಿಯೇ ಮರಿಸ್ವಾಮಿಯಿಂದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಹಣ ವಶಪಡಿಸಿಕೊಂಡ ಲೋಕಾಯುಕ್ತ ಪೊಲೀಸರು ತಹಶೀಲ್ದಾರ್ ಕೆ.ಸಿ.ಸೌಮ್ಯ ಅವರನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ಇನ್ಸ್ ಪೆಕ್ಟರ್ ಬ್ಯಾಟರಾಯಿಗೌಡ, ಮೋಹನ್, ಪ್ರಕಾಶ್ ಸೇರಿದಂತೆ ಮತ್ತಿತರ ಸಿಬ್ಬಂದಿಗಳಿದ್ದರು.