Advertisement

ಜು. 2ರೊಳಗೆ ವರದಿ ಕೇಳಿದ ಲೋಕಾಯುಕ್ತ

02:01 PM Jun 19, 2018 | Team Udayavani |

ಸುಳ್ಯ: ಕರ್ನಾಟಕ-ಕೇರಳ ಸಂಪರ್ಕ ಕಲ್ಪಿಸುವ ಕಾಂತಮಂಗಲ ಸೇತುವೆ ದುರಸ್ತಿಗೆ ಸಂಬಂಧಿಸಿ ಪಂಚಾಯತ್‌ರಾಜ್‌ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಜು. 2ರೊಳಗೆ ವರದಿ ನೀಡುವಂತೆ ಲೋಕಾಯುಕ್ತ ಸಂಸ್ಥೆ ಲಿಖಿತ ಸೂಚನೆ ನೀಡಿದೆ.

Advertisement

ಈ ಕುರಿತು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್‌ಟಿಐ ಅಡಿ ಈ ಮಾಹಿತಿ ನೀಡಿದ್ದಾರೆ. ಸುಳ್ಯ-ಅಜ್ಜಾವರ-ಮಂಡೆಕೋಲು ರಸ್ತೆಯ ಈ ಸೇತುವೆ ದುಸ್ಥಿತಿ ಬಗ್ಗೆ ಲೋಕಾಯುಕ್ತರಿಗೆ 2017 ನ. 11ರಂದು ಡಿ.ಎಂ. ಶಾರೀಕ್‌ ದೂರು ಸಲ್ಲಿಸಿದ್ದರು. ಈ ಬಗ್ಗೆ ಲೋಕಾಯುಕ್ತರು ತುರ್ತು ದುರಸ್ತಿಗೆ ಸೂಚನೆ ನೀಡಿದ್ದರು. ಅದರಂತೆ ಪಂಚಾಯತ್‌ರಾಜ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರು ಕೆವಿಜಿ ಎಂಜಿನಿಯರಿಂಗ್‌ ಕಾಲೇಜಿನ ತಂಡದ ಸಹಕಾರದೊಂದಿಗೆ ಗುಣಮಟ್ಟ ಪರಿಶೀಲನೆ ನಡೆಸಿದ್ದರು. ಸೇತುವೆ ಮೇಲ್ಪದರ, ಕಬ್ಬಿಣದ ಪ್ಲೇಟು ಮರು ಅಳವಡಿಸಿದರೆ, ದುರಸ್ತಿ ಸಾಧ್ಯವಿದ್ದು, 5 ಲಕ್ಷ ರೂ. ಅಂದಾಜು ವೆಚ್ಚ ತಗಲಬಹುದು ಎಂದು ಉತ್ತರ ಸಲ್ಲಿಸಲಾಗಿತ್ತು.

ಬಾರದ ಅನುದಾನ
ಪಂಚಾಯತ್‌ರಾಜ್‌ ಎಂಜಿನಿಯರ್‌ ಇಲಾಖೆ 5 ಲಕ್ಷ ರೂ.ವೆಚ್ಚ ಅಂದಾಜು ಪಟ್ಟಿ ತಯಾರಿಸಿ, ಜಿಲ್ಲಾಧಿಕಾರಿ ಅವರಿಗೆ ಅನುದಾನ ಬಿಡುಗಡೆ ಕೋರಿ ಪತ್ರ ಬರೆದಿತ್ತು. ಅನುದಾನ ಕೋರಿ ಬರೆದ ಪತ್ರಕ್ಕೆ ಸ್ಪಂದನೆ ಸಿಕ್ಕಿಲ್ಲ. ಇದಕ್ಕೆ ಇಲಾಖಾ ಎಂಜಿನಿಯರ್‌ ತಿಳಿಸಿದ್ದಾರೆ. ಹೀಗಾಗಿ ಮತ್ತೆ ಲೋಕಾಯುಕ್ತ ಸಂಸ್ಥೆಗೆ ಕಾರ್ಯ ವಿಳಂಬದ ಬಗ್ಗೆ ಸಾರ್ವಜನಿಕರ ವತಿಯಿಂದ ಗಮನ ಸೆಳೆಯಲಾಗಿತ್ತು. ಹೀಗಾಗಿ ಪಂಚಾಯತ್‌ ರಾಜ್‌ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಲೋಕಾಯುಕ್ತ ವರದಿ ಕೇಳಿದೆ.

ಇಲಾಖೆ ಕೆಲಸ ಮಾಡಬೇಕು: ಶಾಸಕರಿಂದ ತರಾಟೆ
ತಾ.ಪಂ.ನಲ್ಲಿ ಸೋಮವಾರ ನಡೆದ ಪಾಕೃತಿಕ ವಿಕೋಪ ಕುರಿತಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ನವೀನ್‌ ರೈ ಮೇನಾಲ ವಿಷಯ ಪ್ರಸ್ತಾವಿಸಿದರು. ಕಾಂತಮಂಗಲ ಸೇತುವೆ ಶಿಥಿಲವಾಗಿದ್ದು, ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸುಬೋಧ್‌ ಶೆಟ್ಟಿ ಮೇನಾಲ ಅವರು ಧ್ವನಿಗೂಡಿಸಿದರು.

ಪಂಚಾಯತ್‌ರಾಜ್‌ ಇಲಾಧಿಕಾರಿ ಚೆನ್ನಪ್ಪ ಮೊಲಿ, ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆ ಈ ಬಗ್ಗೆ ನಮ್ಮಲ್ಲಿ ವರದಿ ಕೇಳಿತ್ತು. ಲೋಕಯುಕ್ತರ ಸೂಚನೆ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ, 5 ಲಕ್ಷ ರೂ. ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದೇವೆ. ಅನುದಾನ ಬಂದಿಲ್ಲ ಎಂದರು.ಶಾಸಕ ಎಸ್‌. ಅಂಗಾರ ಪ್ರತಿಕ್ರಿಯಿಸಿ, ಲೋಕಾಯುಕ್ತ ವರದಿ ಕೇಳಬಹುದಷ್ಟೆ. ಕೆಲಸ ಮಾಡಲು ಸಾಧ್ಯವಿಲ್ಲ. ಅದನ್ನು ನೀವು ಮಾಡಬೇಕು. ಅನುದಾನ ಇಲ್ಲದಿದ್ದರೆ, ಬೇರೆ ಮೂಲದಿಂದ ಭರಿಸಬೇಕು. ಪತ್ರಿಕೆಗಳಲ್ಲಿ ಬಂದ ಮೇಲೆ ಎಚ್ಚೆತ್ತುಕೊಳ್ಳುವುದಲ್ಲ. ನಿಮ್ಮ ನಿರ್ಲಕ್ಷ್ಯದಿಂದ ನಮಗೆ ಕೆಟ್ಟ ಹೆಸರು ಬರುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

Advertisement

ತಾ.ಪಂ. ಇಒ ಮಧು ಕುಮಾರ್‌ ಮಾತನಾಡಿ, ಈ ಬಾರಿ ಜಿಲ್ಲಾಡಳಿತಕ್ಕೆ ಪಾಕೃತಿಕ ವಿಕೋಪ ನಿರ್ವಹಣೆಗೆ ಬೇಕಾದಷ್ಟು ಅನುದಾನ ಬಂದಿದೆ. ಮಳೆಗಾಲದಲ್ಲಿ ಅಪಾಯ ಉಂಟಾಗುವ ರಸ್ತೆ, ಸೇತುವೆಗಳ ಪಟ್ಟಿ ತಯಾರಿಸಿ, ಕಳುಹಿಸಿದರೆ ಅನುದಾನ ದೊರಯಬಹುದು ಎಂದು ಸಲಹೆ ನೀಡಿದರು. ಅನುದಾನಕ್ಕೆ ಎಸ್ಟಿಮೇಟ್‌ ತಯಾರಿಸಿ, ಡಿಸಿ ಅವರಿಗೆ ಕಳುಹಿಸುವುದಾಗಿ ಅಧಿಕಾರಿ ಭರವಸೆ ನೀಡಿದರು. ತತ್‌ ಕ್ಷಣವೇ ಸೇತುವೆ ದುರಸ್ತಿಗೆ ಶಾಸಕ ಅಂಗಾರ ಅವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next