Advertisement

ಲೋಕಾಯುಕ್ತ: 3 ತಿಂಗಳಲ್ಲೇ 60 ಎಫ್ಐಆರ್‌! ಹರಿದು ಬರುತ್ತಿವೆ ದೂರುಗಳು

01:12 AM Nov 17, 2022 | Team Udayavani |

ಬೆಂಗಳೂರು: ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಅಧಿಕಾರ ಸಿಕ್ಕಿದ ಮೂರು ತಿಂಗಳಲ್ಲೇ ಬರೋಬ್ಬರಿ 60 ಎಫ್ಐಆರ್‌ ದಾಖಲಾಗಿದೆ. ವಿಶೇಷ ವೆಂದರೆ, ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಅಧಿಕಾರ ಮರಳಿಸಲು ಹೈಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಸರಕಾರದ ಆದೇಶ ಹೊರಬಿದ್ದ ಬಳಿಕ ಲೋಕಾಯುಕ್ತಕ್ಕೆ ಹೆಚ್ಚಿನ ದೂರುಗಳು ಬರುತ್ತಿದೆ.

Advertisement

ರಾಜ್ಯಾದ್ಯಂತ 31 ಜಿಲ್ಲೆಗಳಲ್ಲೂ ಲೋಕಾಯುಕ್ತ ಪೊಲೀಸ್‌ ವಿಭಾಗವಿದ್ದು, ಬೆಂಗಳೂರಿನಲ್ಲಿ 12 ಪ್ರಕರಣ ದಾಖಲಾದರೆ, ತುಮಕೂರು, ರಾಮನಗರ, ಬೆಳಗಾವಿ, ಮಡಿಕೇರಿ, ಚಿತ್ರದುರ್ಗದಲ್ಲಿ ಮೂರು ಎಫ್ಐಆರ್‌ ದಾಖಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಒಂದೆರಡು ಎಫ್ಐಆರ್‌ ದಾಖಲಾಗಿವೆ. ನಾಲ್ಕು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಇದೇ ಮೊದಲ ಬಾರಿಗೆ ಉಪ ನೋಂದಣಾಧಿಕಾರಿ ಕಚೇರಿ, ರಾಜ್ಯದ 9 ಪ್ರಮುಖ ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಅವ್ಯವಹಾರ ಬಯಲಿ ಗೆಳೆದಿದೆ. ಎಸಿಬಿಗೆ ಹೋಲಿಸಿದರೆ ಲೋಕಾಯುಕ್ತಕ್ಕೆ ಅಧಿಕಾರ ಮರಳಿದ ಬಳಿಕ ಮೂರೇ ತಿಂಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

ಮಡಿಕೇರಿಯ ಇಬ್ಬರು ಹಾಗೂ ಮೈಸೂರಿನ ಒಬ್ಬ ಭ್ರಷ್ಟ ಅಧಿಕಾರಿಯ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಲಾಗಿದೆ. 2016ರಲ್ಲಿ ಎಸಿಬಿ ಪ್ರಾರಂಭವಾದ ಒಂದು ವರ್ಷದಲ್ಲೂ ಇಷ್ಟೊಂದು ಪ್ರಕರಣಗಳು ದಾಖಲಾಗಿರಲಿಲ್ಲ.

ಎಸಿಬಿಯಲ್ಲಿರುವ ಎಲ್ಲ ಪ್ರಕರಣಗಳೂ ಲೋಕಾ ಯುಕ್ತಕ್ಕೆ ವರ್ಗಾವಣೆಯಾಗಿದ್ದು, ಒಂದೊಂದೇ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ.

ಪ್ರಕರಣದ ತನಿಖೆ ಚುರುಕುಗೊಳಿಸಿದರೂ ಉನ್ನತ ಹುದ್ದೆಯಲ್ಲಿದ್ದು, ಆದಾಯಕ್ಕಿಂತ ಅಧಿಕ ಆಸ್ತಿ (ಡಿಎ ಕೇಸ್‌) ಹೊಂದಿರುವ ಸರಕಾರಿ ಅಧಿಕಾರಿಗಳ ವಿರುದ್ಧ ಒಂದು ಪ್ರಕರಣವೂ ದಾಖಲಾಗಿಲ್ಲ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿರುವ ಪ್ರಕರಣಗಳಲ್ಲಿ ಸಾಕ್ಷ್ಯ ಕಲೆ ಹಾಕಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಸರಕಾರದ ವಿವಿಧ ಇಲಾಖೆಯಲ್ಲಿರುವ ಭ್ರಷ್ಟರ ಆಸ್ತಿ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಇಂತಹ ಪ್ರಕ್ರಿಯೆ ಬಹಳ ಗೌಪ್ಯವಾಗಿ ನಡೆಸಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಲೋಕಾಯುಕ್ಯ ನ್ಯಾ| ಬಿ.ಎಸ್‌.ಪಾಟೀಲ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ರಾಜ್ಯದ 9 ಚೆಕ್‌ಪೋಸ್ಟ್‌ ಗಳ ಮೇಲೆ ಲೋಕಾ ಯುಕ್ತ ಪೊಲೀಸರು ದಾಳಿ ನಡೆಸಿದಾಗ ಕಲೆ ಹಾಕಿರುವ ಸಾಕ್ಷ್ಯ, ದಾಖಲೆಗಳನ್ನು ಪರಿಶೀಲಿಸಿದಾಗ ಹಲವು ಸಮಯಗಳಿಂದ ಅಧಿಕಾರಿಗಳು ಲಂಚ ಪಡೆಯುತ್ತಿರುವುದು ಪತ್ತೆಯಾಗಿದೆ. ಈಗಾಲೇ ಆರ್‌ಟಿಒ ಸೇರಿ ಸಾರಿಗೆ ಇಲಾಖೆಯ ಸಂಬಂಧಿತ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಚೆಕ್‌ಪೋಸ್ಟ್‌ನ ಕೋಟ್ಯಂತರ ರೂ. ಅಕ್ರಮದ ಬಗ್ಗೆ ಎಳೆ-ಎಳೆಯಾಗಿ ಉಲ್ಲೇಖೀಸಲು ಪೊಲೀಸರು ಸಿದ್ದತೆ ನಡೆಸಲಾಗಿದೆ.

ಬೆಂಗಳೂರಿನ ದಾಳಿಗೊಳಗಾದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಸಹಕಾರದಿಂದ ಪ್ರತಿ ಕೆಲಸಕ್ಕೂ ಸಾರ್ವಜನಿಕರಿಂದ ಸಾವಿರಾರು ರೂ, ವಸೂಲು ಮಾಡಿರುವುದು ದೃಢಪಟ್ಟಿದೆ. ಸಿಕ್ಕಿ ಬಿದ್ದ ಅಧಿಕಾರಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಭ್ರಷ್ಟರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹಲವು ಕಡೆಗಳಲ್ಲಿ ಲಂಚ ಪಡೆಯುತ್ತಿದ್ದ ಸರಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ. ಮುಂದೆಯೂ ಪರಿಣಾಮಕಾರಿಯಾಗಿ ಲೋಕಾಯುಕ್ತ ಕೆಲಸ ಮಾಡಲಿದೆ.
-ನ್ಯಾ| ಬಿ.ಎಸ್‌. ಪಾಟೀಲ್‌, ಲೋಕಾಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next