ಲೋಕಾಪುರ: ಲಾಕ್‌ಡೌನ್‌ನಿಂದ ಗ್ರಾಮದ ಟೇಲರ್ (ದರ್ಜಿ) ಕುಟುಂಬಗಳು ಅತಂತ್ರ ಪರಿಸ್ಥಿಯನ್ನು ಎದುರಿಸುವಂತಾಗಿದೆ. ಪಾರಂಪರಿಕವಾಗಿ ಟೇಲರ್ ವೃತ್ತಿಯನ್ನು ಅವಲಂಬಿಸಿರುವ ಸಿಂಪಿಗ, ಕ್ಷತ್ರಿಯ, ಮುಸ್ಲಿಂ ಸಮಾಜದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲೋಕಾಪುರ ಗ್ರಾಮ ಹಾಗೂ ಸುತ್ತಲಿನ ಸುಮಾರು 200ಕ್ಕೂ ಹೆಚ್ಚು ಕುಟುಂಬ ಬಟ್ಟೆ ಹೊಲಿಯುವುದನ್ನೇ ಕಾಯಕ ಮಾಡಿಕೊಂಡಿದ್ದು, ಅವರಲ್ಲಿ ಬಹುತೇಕರು ತುತ್ತು ಅನ್ನಕ್ಕೂ ಪರದಾಡುವಂತಾಗಿದೆ.
ಗ್ರಾಮದಲ್ಲಿ ಕೆಲವರು ಬಾಡಿಗೆ ಕಟ್ಟಡದಲ್ಲಿ ಬಟ್ಟೆ ಅಂಗಡಿಗಳ ಮುಂದೆ ಹೊಲಿಗೆ ಕಾಯಕದಲ್ಲಿ ನಿರತರಾಗಿದ್ದರು. ಮಹಿಳೆಯರು ಮನೆಯಲ್ಲಿಯೆ ಹೊಲಿಗೆ ಮೂಲಕ ಮನೆಯ ಖರ್ಚು ನಿಭಾಯಿಸುತ್ತಿದ್ದರು. ಈಗ ಮನೆಯಿಂದ ಹೊರಗೆ ಬರದ ಸ್ಥಿತಿಯಿಂದಾಗಿ ಅಂಗಡಿ, ಮನೆ ಬಾಡಿಗೆ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಇನ್ನು ಹಳೆಯ ಬಟ್ಟೆಗಳನ್ನು ದುರಸ್ತಿ ಮಾಡಿಕೊಡುವ ಟೇಲರ್ ಗಳು ಜೀವನ ಸಾಗಿಸುವುದು ಕಷ್ಟವಾಗಿದೆ.
ಯುಗಾದಿ, ಬಸವ ಜಯಂತಿ, ರಂಜಾನ್ ಹಬ್ಬಗಳ ಆಚರಣೆ, ಮದುವೆ, ಶಾಲಾ ಮಕ್ಕಳ ಸಮವಸ್ತ್ರ, ಮತ್ತಿತರ ಶುಭ ಸಮಾರಂಭಗಳು ನಡೆಯುತ್ತಿದ್ದವು. ಈ ಅವಧಿಯಲ್ಲಿ ಬಟ್ಟೆ ಹೊಲಿಗೆಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಈಗ ಯಾರು ಬರುತ್ತಿಲ್ಲ. ಹೀಗಾಗಿ ದುಡಿಮೆಯೇ ಇಲ್ಲದಂತಾಗಿದೆ. ಟೇಲರಿಂಗ್‌ಗೆ ಬೇಕಾಗುವ ದಾರ, ಕ್ಯಾನ್ವಾಸ್, ಬಟನ್, ಜಿಪ್, ಮತ್ತಿತರ ಸಾಮಗ್ರಿಗಳ ಅಂಗಡಿ ಮುಚ್ಚಿವೆ. ಇದು ವಹಿವಾಟಿಗೆ ತೊಂದರೆಯಾಗಿದೆ. ಸಂಘಟಿತ ವಲಯದ ಕಾರ್ಮಿಕರಿಗೆ ನೀಡುವ ಸೌಲಭ್ಯವನ್ನು ಸರ್ಕಾರ ನಮಗೂ ನೀಡಲಿ ಎಂಬುದು ಟೇಲರ್‌ಗಳ ಆಗ್ರಹವಾಗಿದೆ.
ಸುಮಾರು 18 ವರ್ಷಗಳಿಂದ ಟೇಲರ್ ವೃತ್ತಿ ಮಾಡುತ್ತಿದ್ದೇನೆ. ಈ ವೃತ್ತಿಯನ್ನೆ ಅವಲಂಬಿಸಿ ಅಂಗಡಿ, ಮನೆಗಳ ಬಾಡಿಗೆ ಕಟ್ಟುವುದು ಮತ್ತು ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಸಂಘಟಿತ ವಲಯದ ಕಾರ್ಮಿಕರಿಗೆ ನೀಡುವ ಸೌಲಭ್ಯವನ್ನು ಸರ್ಕಾರ ನಮಗೂ ನೀಡಬೇಕು.
ವಿಜಯಕುಮಾರ ಹಿರೇಮಠ,
ಟೇಲರ್
ಬಹಳ ಜನರು ಟೇಲರಿಂಗ್ ಉದ್ಯೋಗ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಲಾಕ್‌ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಯಾರೂ ಬಟ್ಟೆ ಹೊಲಿಸಲು ಬಂದಿಲ್ಲ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಸರ್ಕಾರ ಟೇಲರಿಂಗ್ ಉದ್ಯೋಗದವರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಿ ನೆರವಿಗೆ ಧಾವಿಸಬೇಕು.
ರಾಮಚಂದ್ರ ಘಾಟಗೆ,
ಅರುಣ ಟೇಲರ್ ಮಾಲೀಕ