Advertisement

ರಾಜಪಥ ಭ್ರಷ್ಟಾಚಾರ ಕುರಿತು ಲೋಕಾ ತನಿಖೆ ಶುರು

11:51 AM Feb 09, 2018 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ನಡೆಸಲಾಗಿರುವ ರಾಜಪಥ ಕಾಮಗಾರಿಯಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ನಗರದಲ್ಲಿ ನಡೆದಿರುವ ರಾಜಪಥ ಕಾಮಗಾರಿ ಪರಿಶೀಲನೆ ಆರಂಭಿಸಿದ್ದಾರೆ.

Advertisement

ರಾಜಪಥ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಪಾಲಿಕೆಯ ಬಿಜೆಪಿ ಸದಸ್ಯ ನಂದೀಶ್‌ ಪ್ರೀತಂ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ನಗರಕ್ಕೆ ಆಗಮಿಸಿದ ಲೋಕಾಯುಕ್ತ ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಎಚ್‌.ಎಂ.ಜಯಕುಮಾರ್‌ ನೇತೃತ್ವದ ತಂಡ ಎರಡು ದಿನಗಳ ಕಾಲ ಪರಿಶೀಲನೆ ನಡೆಸಲಿದೆ.

ನಗರದ ಹಾರ್ಡಿಂಜ್‌ ವೃತ್ತದಲ್ಲಿ ಗುರುವಾರ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ವಿಶೇಷವಾಗಿ ರಾಜಪಥ ಕಾಮಗಾರಿಯಲ್ಲಿ ರಸ್ತೆಬದಿಯಲ್ಲಿ ಅಳವಡಿಸಿರುವ ಸ್ಟೋನ್‌ ರೇಲಿಂಗ್‌(ಕಲ್ಲಿನ ಬ್ಯಾರಿಕೇಡ್‌)ಗಳ ಗುಣಮಟ್ಟ ಹಾಗೂ ಇನ್ನಿತರ ಅಂಶಗಳನ್ನು ಪರಿಶೀಲಿಸಿದರು.

ದೂರಿನ ಹಿನ್ನೆಲೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೈಸೂರಿಗೆ ನೀಡಿದ್ದ ವಿಶೇಷ 100 ಕೋಟಿ ರೂ. ಅನುದಾನದಲ್ಲಿ 16 ಕೋಟಿ ರೂ.ಗಳನ್ನು ರಾಜಪಥ ಕಾಮಗಾರಿಗೆ ಬಳಸಲಾಗಿತ್ತು. ಇದಕ್ಕಾಗಿ ಅಂದಾಜು ಪಟ್ಟಿಯನ್ನು ತಯಾರಿಸಿ, ಟೆಂಡರ್‌ ಕರೆದು, ಚಾಬ್ರಾಸ್‌ ಅಸೋಸಿಯೇಟ್ಸ್‌ ಸಂಸ್ಥೆಗೆ 2010ರಲ್ಲಿ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು.

ಅಂದು ಪಾಲಿಕೆ ಆಯುಕ್ತರಾಗಿದ್ದ ಸಿ.ಜೆ.ಬೆಟಸೂರ್‌ ಮಠ ಅವರು ಸರ್ಕಾರದಿಂದ ಅನುಮತಿ ಪಡೆಯದೆ ಶೇ.91.60 ಹೆಚ್ಚುವರಿ ಹಣವನ್ನು ಕಾಮಗಾರಿ ಗುತ್ತಿಗೆ ಪಡೆದಿದ್ದ ಸಂಸ್ಥೆಗೆ ನೀಡಲು ಆದೇಶಿಸಿದ್ದಾರೆ. ಆದರೆ, ಗುತ್ತಿಗೆದಾರ ರಾಜಪಥ ಕಾಮಗಾರಿಯಲ್ಲಿ ಅಳವಡಿಸಿರುವ ಸ್ಟೋನ್‌ ರೇಲಿಂಗ್‌ ಅನ್ನು ಒಂದು ಮೀಟರ್‌ಗೆ 4,375 ರೂ.ಗಳಿಗೆ ಅಳವಡಿಸಲು ಒಪ್ಪಿಕೊಂಡು, ಕಾಮಗಾರಿಯನ್ನು ಆರಂಭಿಸಿದ್ದರು.

Advertisement

ಹೀಗಿದ್ದರೂ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ಹಾಗೂ ಪಾಲಿಕೆ ಆಯುಕ್ತರಾಗಿದ್ದ ಸಿ.ಜೆ.ಬೆಟಸೂರ್‌ ಮಠ ಅವರ ಆದೇಶದಂತೆ, ಒಂದು ಮೀಟರ್‌ ಸ್ಟೋನ್‌ ರೇಲಿಂಗ್‌ಗೆ 33,000 ರೂ.ಗಳನ್ನು ಪಾವತಿಸಲಾಗಿದೆ ಎಂದು ಪಾಲಿಕೆ ಸದಸ್ಯ ನಂದೀಶ್‌ ಪ್ರೀತಂ 2015ರ ಮಾರ್ಚ್‌ 9 ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಇಂದಿನ ಬೆಲೆ 5500 ರೂ.: ರಾಜಪಥ ಕಾಮಗಾರಿಯಲ್ಲಿ ಅಳವಡಿಸಿರುವ ಸ್ಟೋನ್‌ ರೇಲಿಂಗ್‌ 1 ಮೀಟರ್‌ಗೆ 4,375 ರೂ.ಗಳಿದ್ದರೂ, ಈ ಇಬ್ಬರು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಡೇಟಾ ರೇಟ್ಸ್‌ ಅನ್ನು ಶೇ.685 ಹೆಚ್ಚಿಸಿ ಗುತ್ತಿಗೆದಾರನಿಗೆ ಪಾವತಿಸಿದ್ದು, ಇದರಿಂದ ಸರ್ಕಾರಕ್ಕೆ 25.88 ಕೋಟಿ ರೂ.ಗಳು ನಷ್ಟವಾಗಿದೆ.

ಅಲ್ಲದೆ ಈಗಾಗಲೇ ಅಳವಡಿಸಿರುವ ಸ್ಟೋನ್‌ ರೇಲಿಂಗ್‌ ಇಂದಿನ ಮಾರುಕಟ್ಟೆ ಬೆಲೆ, ಒಂದು ಮೀಟರ್‌ಗೆ 5500 ರೂ. ಆಗಿದೆ. ಹೀಗಾಗಿ ಹರ್ಷಗುಪ್ತಾ ಹಾಗೂ ಸಿ.ಜೆ.ಬೆಟಸೂರ್‌ ಮಠ ಅವರುಗಳು ಗುತ್ತಿಗೆದಾರನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಬಾರೀ ಹಣ ದುರುಪಯೋಗ ಮಾಡಿದ್ದಾರೆ ಎಂಬುದು ಪಾಲಿಕೆ ಸದಸ್ಯ ನಂದೀಶ್‌ ಪ್ರೀತಂ ಅವರ ಆರೋಪ.

ಪರಿಶೀಲನೆ ಆರಂಭ: ರಾಜಪಥ ಕಾಮಗಾರಿ ನಡೆಸಲಾಗಿರುವ ಹಾರ್ಡಿಂಜ್‌ ವೃತ್ತ, ಚಾಮರಾಜ ಒಡೆಯರ್‌ ವೃತ್ತ, ಕೆ.ಆರ್‌. ವೃತ್ತ ಹಾಗೂ ಸಯ್ನಾಜಿರಾವ್‌ ರಸ್ತೆ ಮಾರ್ಗದಲ್ಲಿ ನಡೆದಿರುವ ರಾಜಪಥ ಕಾಮಗಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಅಭಿವೃದ್ಧಿ ಅಧಿಕಾರಿ ರುದ್ರೇಶ್‌ ಕುಮಾರ್‌, ಸಹಾಯಕ ಎಂಜಿನಿಯರ್‌ಗಳಾದ ವಾಸು, ಸತ್ಯಮೂರ್ತಿ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.

ನಗರದಲ್ಲಿ ನಡೆದಿರುವ ರಾಜಪಥ ಕಾಮಗಾರಿಯ ಸ್ಟೋನ್‌ ರೇಲಿಂಗ್‌ ಅಳವಡಿಕೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ಹಾಗೂ ಪಾಲಿಕೆ ಆಯುಕ್ತರಾಗಿದ್ದ ಸಿ.ಜೆ.ಬೆಟಸೂರ್‌ ಮಠ ಅವರು ಸರ್ಕಾರದ ಅನುಮತಿ ಪಡೆಯದೆ, ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಹಣವನ್ನು ಗುತ್ತಿಗೆದಾರನಿಗೆ ನೀಡಿದ್ದಾರೆ. ಅಲ್ಲದೆ 5 ಕಿ.ಮೀ ಇದ್ದ ರಾಜಪಥ ಕಾಮಗಾರಿ ವಿಸ್ತೀರ್ಣವನ್ನು 1.45 ಕಿ.ಮೀ.ಗೆ ಇಳಿಸುವ ಮೂಲಕ ಅವ್ಯವಹಾರ ನಡೆಸಿದ್ದು, ಈ ಬಗ್ಗೆ ತನಿಖೆಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ.
-ನಂದೀಶ್‌ ಪ್ರೀತಂ, ಪಾಲಿಕೆ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next