ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ 120 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಂಬಂಧಿಸಿದ ನಕಲಿ ಬಿಲ್ ಸೃಷ್ಟಿಸಲು ಯತ್ನಿಸಿದ ಪ್ರಕರಣದಲ್ಲಿ ಶಾಸಕ ಜಿ.ಮುನಿರತ್ನ ಸೇರಿ ಮೂವರನ್ನು ಆರೋಪಿಗಳನ್ನಾಗಿಸುವಂತೆ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಅರ್ಜಿಗೆ 2 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
ವಕೀಲ ಎನ್.ಪಿ.ಅಮೃತೇಶ್ ಪ್ರಕರಣದಲ್ಲಿ ಶಾಸಕ ಮುನಿರತ್ನ ಮತ್ತು ಇವರ ಪತ್ನಿ ಮಂಜುಳಾ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ಈ ಸೂಚನೆ ನೀಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾಮಗಾರಿಯ ದಾಖಲೆಗಳು ಪತ್ತೆಯಾದ ಮನೆ ನಮ್ಮ ಪತ್ನಿ ಹೆಸರಿನಲ್ಲಿದ್ದು, ಕಡತ ಇಡಲು ತಾವೇ ಅನುಮತಿ ಕೊಟ್ಟಿರುವುದಾಗಿ ಮುನಿರತ್ನ ಒಪ್ಪಿಕೊಂಡಿದ್ದರು. ಅಲ್ಲದೆ,ಆರೋಪಿಗಳನ್ನಾಗಿ ಗುರುತಿಸಿರುವ ವ್ಯಕ್ತಿಗಳು ನಮಗೆ ಪರಿಚಯವಿರುವುದಾಗಿಯೂ ಹೇಳಿದ್ದರು. ಆದರೂ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿಲ್ಲ ಎಂದು ಅವರು ಆರೋಪಿಸಿದರು.
ಇದಕ್ಕೆ ಲೋಕಾಯುಕ್ತ ಪರ ವಕೀಲರು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಮನವಿನಯ್ನು ಪುರಸ್ಕರಿಸಿದ ಪೀಠ ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.
ಏನಿದು ಪ್ರಕರಣ?: ಬಿಬಿಎಂಪಿಗೆ ಸೇರಿದ ಒಂದು ಸಾವಿರ ಕಡತಗಳನ್ನು ಅಕ್ರಮವಾಗಿ ಶಾಸಕ ಮುನಿರತ್ನ ಅವರಿಗೆ ಸೇರಿದ್ದು ಎನ್ನಲಾದ ವೈಯಲಿಕಾವಲ್ ಮನೆಯೊಂದಲ್ಲಿ ಇರಿಸಲಾಗಿದ್ದು, ರಾಜರಾಜೇಶ್ವರಿನಗರ ಕ್ಷೇತ್ರದ 120 ಕೋಟಿ ರೂ. ಮೌಲ್ಯದ ಸಿವಿಲ್ ಕಾಮಗಾರಿಯ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ವೈ.ಎಚ್.ಶ್ರೀನಿವಾಸ್ ಎಂಬುವರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಐವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ನಂತರ ತನಿಖೆ ಪೂರ್ಣಗೊಳಿಸಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಲ್ಲಿ ಮುನಿರತ್ನ, ಅವರ ಪತ್ನಿ ಮಂಜುಳ ಹಾಗೂ ಸೂರಪ್ಪ ಬಾಬು ಅವರಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ವಕೀಲ ಅಮೃತೇಶ್, ಈ ಮೂವರನ್ನೂ ಆರೋಪಿಗಳನ್ನಾಗಿ ಸೇರಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇದೀಗ ಅಮೃತೇಶ್ ಹೈಕೋರ್ಟ್ ಮೊರೆ ಹೋಗಿದ್ದಾರೆ.