Advertisement

ಲೋಕಾ ಚುನಾವಣೆ: ಸೂಕ್ಷ್ಮ ಮತಗಟ್ಟೆಗಳಲ್ಲಿ ನಿಗಾವಹಿಸಿ 

07:16 AM Mar 02, 2019 | |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಸದ್ಯದಲೇ ಘೋಷಣೆಯಾಗುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ವಲಯದ ನೂತನ ಐಜಿಪಿ ಶರತ್‌ ಚಂದ್ರ, ಜಿಲ್ಲೆಯ ಪೊಲೀಸ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ಕಳೆದ ಶನಿವಾರವಷ್ಟೇ ಕೇಂದ್ರ ವಲಯದ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಶುಕ್ರವಾರ ಜಿಲ್ಲೆಗೆ ಆಗಮಿಸಿದ ಅವರು, ನಗರದ ಹೊರ ವಲಯದ ಅಣಕನೂರು ಸಮೀಪ ಇರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಶಾಂತಿ ಕಾಪಾಡಲು ಅರಿವು ಮೂಡಿಸಿ: ಚುನಾವಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಲಾಖೆ ಅಗತ್ಯ ಮುಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೀಟ್‌ ಸಿಬ್ಬಂದಿಯನ್ನು ಇನ್ನಷ್ಟು ಸಕ್ರಿಯಾಶೀಲಗೊಳಿಸಬೇಕು. ಮತಗಟ್ಟೆವಾರು ಸಾರ್ವಜನಿಕರ ಸಭೆಗಳನ್ನು ನಡೆಸಿ ಶಾಂತಿ ಕಾಪಾಡುವಂತೆ ಅರಿವು ಮೂಡಿಸಬೇಕೆಂದ ಅವರು, ವಿಶೇಷವಾಗಿ ಹಿಂದಿನ ಚುನಾವಣೆಗಳಲ್ಲಿ ಎಲ್ಲಲ್ಲಿ ಕಾನೂನು ಸುವ್ಯವಸ್ಥೆಗೆ ತೊಡಕಾಗಿದೆ. ಅಲ್ಲಲ್ಲಿ ಹೆಚ್ಚಿ ಭದ್ರತಾ ವ್ಯವಸ್ಥೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ರೌಡಿಗಳ ಮೇಲೆ ನಿಗಾವಹಿಸಿ: ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಕೂಡ ಹೆಚ್ಚಿನ ಭದ್ರತೆ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದರು. ಚುನಾವಣೆ ಹಿನ್ನಲೆಯಲ್ಲಿ ರೌಡಿಪಟ್ಟಿಯಲ್ಲಿರುವ ಅಸಾಮಿಗಳನ್ನು ಕಡ್ಡಾಯವಾಗಿ ಪರೇಡ್‌ ಮಾಡಿಸಿ ಅಗತ್ಯ ಬಿದ್ದಲ್ಲಿ ತಹಶೀಲ್ದಾರ್‌ ಮುಂದೆ ಹಾಜರುಪಡಿಸಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವಂತೆ ಸೂಚಿಸಿದ ಅವರು, ರೌಡಿಗಳ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಎಂದು ಸೂಚನೆ ನೀಡಿದರು.

ಗಡಿ ಭಾಗಗಳಲ್ಲಿ ಭದ್ರತೆಗೆ ವಿಶೇಷ ಒತ್ತು: ಚುನಾವಣೆಯನ್ನು ಶಾಂತಿಯುತವಾಗಿ ಪಾರದರ್ಶಕವಾಗಿ ನಡೆಸಬೇಕು. ಚುನಾವಣೆಯ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಇರುವ ಕಡೆ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಿಕೊಳ್ಳುವಂತೆ ಸೂಚಿಸಿದರು. ಜಿಲ್ಲೆಯು ಆಂಧ್ರದ ಗಡಿ ಪ್ರದೇಶದಲ್ಲಿರುವುದರಿಂದ ಗಡಿ ಭಾಗಗಳಲ್ಲಿ ಭದ್ರತೆಗೆ ವಿಶೇಷ ಒತ್ತು ಕೊಡಬೇಕು ಎಂದು ತಿಳಿಸಿದರು.

Advertisement

ಐಜಿಪಿಗೆ ಭವ್ಯ ಸ್ವಾಗತ: ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ ಕೇಂದ್ರ ವಲಯದ ನೂತನ ಐಜಿಪಿ ಶರತ್‌ ಚಂದ್ರ ರವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್‌ ವಾದ್ಯ ವೃಂದ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿ ಭವ್ಯ ಸ್ವಾಗತ ಕೋರಿದರು. ಇದೇ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯನ್ನು ಹಾಗೂ ಮೂಲ ಸೌಕರ್ಯಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ ಬಾಬು, ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್‌ಪಿ ಪ್ರಭುಶಂಕರ್‌, ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್‌ ಸೇರಿದಂತೆ ಜಿಲ್ಲೆಯ ಎಲ್ಲಾ ವೃತ್ತಗಳ ಆರಕ್ಷಕ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು ಉಪಸ್ಥಿತರಿದ್ದರು.

ಇಲಾಖೆ ಪ್ರಗತಿ ಪರಾಮರ್ಶೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಜಿಲ್ಲೆಯಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು ಎಷ್ಟಿವೆ. ಹಿಂದಿನ ವರ್ಷ ಅಪರಾಧ ಪ್ರಕರಣಗಳು ಎಷ್ಟು ನಡೆದಿವೆ. ಕೊಲೆ, ಸುಲಿಗೆ, ಫೋಕೊÕà ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆಯಾಗಿದೆ.

ತನಿಖೆ ಹಂತದಲ್ಲಿರುವ ಪ್ರಕರಣಗಳು ಎಷ್ಟು ಎಂಬುದು ಸೇರಿದಂತೆ ಇಲಾಖೆಯಲ್ಲಿ ಅದರಲ್ಲೂ ವಿವಿಧ ಠಾಣೆಗಳಲ್ಲಿ ಕೊರತೆ ಇರುವ ಮೂಲ ಸೌಕರ್ಯ, ಸಿಬ್ಬಂದಿ ಕೊರತೆ ಬಗ್ಗೆ ಪ್ರತಿ ಠಾಣೆವಾರು ಮಾಹಿತಿ ಪಡೆದುಕೊಂಡ ಐಜಿಪಿ ಶರತ್‌ ಚಂದ್ರ, ಇದೇ ವೇಳೆ ಅಧಿಕಾರಿಗಳು ಠಾಣೆಗಳಲ್ಲಿ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next