ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆ ಟಿಕೆಟ್ ಕದನ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕ್ಷೇತ್ರದ ಮಟ್ಟಿಗೆ ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದು, ಟಿಕೆಟ್ ಘೋಷಣೆಯಾದರೂ ರಾಜಕೀಯ ಪಕ್ಷಗಳಿಗೆ ಬಂಡಾಯದ ಬೇಗುದಿ ತಗಲುವ ಸಾಧ್ಯತೆ ಎದ್ದು ಕಾಣುತ್ತಿದೆ.
ರಾಜ್ಯದ ಬಹುತೇಕ ಕ್ಷೇತ್ರಗಳಿಗೆ ಕಾಂಗ್ರೆಸ್, ಬಿಜೆಪಿ ತನ್ನ ಅಭ್ಯರ್ಥಿ ಗಳನ್ನು ಘೋಷಿಸಿದರೂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾತ್ರ ಇನ್ನೂ ಅಂತಿಮ ಅಭ್ಯರ್ಥಿ ಘೋಷಿ ಸುವಲ್ಲಿ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳು ಹಿಂದೆ ಬಿದ್ದಿವೆ. ದಿನಕ್ಕೊಬ್ಬರ ಹೆಸರುಗಳು ಅಖಾಡದಲ್ಲಿ ತೇಲಿ ಬರುತ್ತಿವೆ.
ಪಕ್ಷಗಳಿಗೆ ಬಂಡಾಯ ಖಚಿತ: ಅಭ್ಯರ್ಥಿಗಳ ಆಯ್ಕೆಗೆ ಕಳೆದೊಂದು ತಿಂಗಳಿಂದ ರಾಜಕೀಯ ಪಕ್ಷಗಳಲ್ಲಿ ತೀವ್ರ ಕರಸತ್ತು ನಡೆಸುತ್ತಿರುವಾಗಲೇ ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ನಡುವೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲಾಗದಷ್ಟು ಅಂತರ ಸೃಷ್ಟಿಯಾಗಿದೆ. ಆದರಲ್ಲೂ ಬಣ ರಾಜಕೀಯದ ಗುಂಪುಗಾರಿಕೆ ಅಂತೂ ಎರಡು ಪಕ್ಷಗಳಲ್ಲಿ ತಾರಕಕ್ಕೇರಿದೆ. ಯಾರಿಗೆ ಟಿಕೆಟ್ ಘೋಷಿಸಿದರೂ ಚುನಾವಣಾ ಅಖಾಡದಲ್ಲಿ ಎದುರಾಳಿ ಟಿಕೆಟ್ ಆಕಾಂಕ್ಷಿ ಟಿಕೆಟ್ ಪಡೆದವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುವುದು ಅನುಮಾನವಾಗಿದೆ. ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳು ಚುನಾವಣೆಯಲ್ಲಿ ಬಂಡಾಯ ಎದುರಿಸುವ ಪರಿಸ್ಥಿತಿಯನ್ನು ಟಿಕೆಟ್ ಕಸರತ್ತು ಸೃಷ್ಟಿಸಿದೆ.
ಸುಧಾಕರ್, ವಿಶ್ವನಾಥ ನಡುವೆ ವಾರ್: ಬಿಜೆಪಿ ಪಕ್ಷದಲ್ಲಿ ಇದವರೆಗೂ ತನ್ನ ಪುತ್ರ ಆಲೋಕ್ ಕುಮಾರ್‌ಗೆ ಟಿಕೆಟ್ ಕೇಳುತ್ತಿದ್ದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಇದೀಗ ಸ್ವತಃ ತನಗೆ ಟಿಕೆಟ್ ಕೊಡಿಯೆಂದು ಪಕ್ಷದ ವರಿಷ್ಠರಿಗೆ ಮನವಿ ಮಾಡುವ ಮೂಲಕ, ಯಾವುದೇ ಕಾರಣಕ್ಕೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಟಿಕೆಟ್ ಕೊಡಬಾರದೆಂದು ಹಠ ಹಿಡಿದು ಕೂತಿರುವುದು ನೋಡಿದರೆ ಬಿಜೆಪಿಗೆ ಚುನಾವಣೆಯಲ್ಲಿ ಬಂಡಾಯದ ಬಿಸಿ ತಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಸುಧಾಕರ್‌ಗೆ ಟಿಕೆಟ್ ಸಿಕ್ಕರೂ ವಿಶ್ವನಾಥ್ ಪಕ್ಷದ ವಿರುದ್ಧ ಬಂಡಾಯ ಸಾರುವ ಸಾಧ್ಯತೆಯನ್ನು ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ತಳ್ಳಿ ಹಾಕುವಂತಿಲ್ಲ. ಇತ್ತ ವಿಶ್ವನಾಥ್ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಸಿಕ್ಕರೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅದರಲ್ಲೂ ಸುಧಾಕರ್ ಬೆಂಬಲಿಗರು ಬಂಡಾಯ ಸಾರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೂ ಟಿಕೆಟ್ ಅಂತಿಮಗೊಳ್ಳದೇ ಇದ್ದರೂ ವಿಶ್ವನಾಥ್ ಸುಧಾಕರ್ ವಿರುದ್ಧ ಪದೇ ಪದೇ ಟೀಕಾ ಪ್ರಹಾರ ನಡೆಸುತ್ತಿರುವುದು ಎದ್ದು ಕಾಣುತ್ತಿದೆ.
ಜಾತಿ ಗೌಣವಾಗಿದ್ದ ಕ್ಷೇತ್ರದಲ್ಲೀಗ ಜಾತಿ ಪ್ರಧಾನ! :
ವಿಪರ್ಯಾಸದ ಸಂಗತಿಯೆಂದರೆ ಒಂದು ಕಾಲಕ್ಕೆ ಜಾತಿ ಗೌಣವಾಗಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈಗ ಅಭ್ಯರ್ಥಿ ಆಯ್ಕೆಗೆ ಜಾತಿಯೆ ಪ್ರಧಾನ ಮಾನದಂಡವಾಗಿರುವುದು ಎದ್ದು ಕಾಣುತ್ತಿದೆ. ಬ್ರಾಹ್ಮಣರು, ದೇವಾಡಿಗರು, ಈಡಿಗರು ಸುಲಭವಾಗಿ ಇಲ್ಲಿ ಟಿಕೆಟ್ ಪಡೆದು ಒಂದಲ್ಲ, ಎರಡಲ್ಲ, ಹ್ಯಾಟ್ರಿಕ್ ಗೆಲುವು ಸಾಧಿಸಿರುವ ನಿರ್ದೇಶನಗಳು ಇವೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಳೆದ ಚುನಾವಣೆಗಳಗಿಂತ ಹೆಚ್ಚು ಅಭ್ಯರ್ಥಿ ಆಯ್ಕೆಗೆ ಜಾತಿ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಒಕ್ಕಲಿಗರು, ಬಲಿಜಿಗರು ಟಿಕೆಟ್‌ಗೆ ಹೆಚ್ಚು ತಮ್ಮ ಹಕ್ಕೋತ್ತಾಯ ಮಾಡುತ್ತಿದ್ದಾರೆ. ಉಳಿದ ಜಾತಿಗಳು ಇಲ್ಲಿ ಗೌಣವಾಗಿ ತೊಡಗಿವೆ.
ಕೈನಲ್ಲೂ ಮುಂದುವರಿದ ಟಿಕೆಟ್ ಕದನ :
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲೂ ಈಗಾಗಲೇ ಟಿಕೆಟ್‌ಗಾಗಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಬಣ, ರಕ್ಷಾ ರಾಮಯ್ಯ ಬಣ ಹಾಗೂ ಗೌರಿಬಿದನೂರು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಬಣಗಳು ಸೃಷ್ಠಿಯಾಗಿವೆ. ಟಿಕೆಟ್‌ಗಾಗಿ ನಡೆಯುತ್ತಿರುವ ಹೋರಾಟ ಕೈ ಪಾಳೆಯದ ಮುಖಂಡರಲ್ಲಿ ಗುಂಪುಗಾರಿಕೆಗೆ ಇನ್ನಷ್ಟು ತುಪ್ಪ ಸವರಿದಂತಾಗಿದೆ. ಯಾರೇ ಟಿಕೆಟ್ ಪಡೆದರೂ ಉಳಿದವರು ಅವರ ಪರ ಕೆಲಸ ಮಾಡುತ್ತಾರೆಂಬ ನಂಬಿಕೆ, ವಿಶ್ವಾಸ ಉಳಿದವರಲ್ಲಿ, ಹೀಗಾಗಿ ಕಾಂಗ್ರೆಸ್‌ನಲ್ಲೂ ಬಂಡಾಯ ಬಾವುಟ ಹಾರಿಸಿದರೂ ಯಾರು ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಬಿಜೆಪಿ ಸೇರುವ ವದಂತಿ ಕ್ಷೇತ್ರದಲ್ಲಿ ದಟ್ಟವಾಗಿತ್ತು.
-ಕಾಗತಿ ನಾಗರಾಜಪ್ಪ