Advertisement
ಆಗ ಸ್ವತಂತ್ರವಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್-ಜೆಡಿಎಸ್ ಇದೀಗ ಒಟ್ಟಾಗಿದ್ದರೆ, ಬಿಜೆಪಿ, ಎರಡೂ ಪಕ್ಷಗಳ ಮೈತ್ರಿ ಎದುರಿಸುವ ಹೊಸ ಸವಾಲು ಎದುರಿಸುತ್ತಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಹೆಚ್ಚಿನ ಸ್ಥಾನ ಗಳಿಸಿ ಆ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಗುರಿ ಕಾಂಗ್ರೆಸ್-ಜೆಡಿಎಸ್‌ನದ್ದಾಗಿದೆ. ಆದರೆ, ಎರಡೂ ಪಕ್ಷಗಳಿಗೆ ಒಂದು ಸೀಟನ್ನೂ ಹೆಚ್ಚಾಗಿ ಗೆಲ್ಲಲು ಬಿಡದೆ ಮೈತ್ರಿ ಸರ್ಕಾರಕ್ಕೆ ಸಂಚಕಾರ ತರುವ ದೂರಾಲೋಚನೆ ಬಿಜೆಪಿಯದು.
Related Articles
Advertisement
ಇನ್ನು, ಜೆಡಿಎಸ್‌ಗೆ ಯಾವ ರೂಪದಲ್ಲಿ ನೋಡಿದರೂ ಲಾಭ. ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಹಾಸನ, ಮಂಡ್ಯ ಈಗಲೂ ಉಳಿಸಿಕೊಳ್ಳಬಹುದು. ಕಾಂಗ್ರೆಸ್ ಬೆಂಬಲ ಸಿಕ್ಕರೆ ಶಿವಮೊಗ್ಗ ಹಾಗೂ ಸೀಟು ಹಂಚಿಕೆಯಡಿ ಕ್ಷೇತ್ರ ಬಿಟ್ಟು ಕೊಟ್ಟರೆ ಬೆಂಗಳೂರು ಉತ್ತರ, ಮೈಸೂರು, ವಿಜಯಪುರ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಹಾಲಿ ಇರುವ ಸಂಖ್ಯಾಬಲವನ್ನು 4 ಅಥವಾ 5ಕ್ಕೆ ಹೆಚ್ಚಿಸಿಕೊಳ್ಳುವ ತವಕ ಜೆಡಿಎಸ್‌ನದು. ಆದರೆ, ಸೀಟು ಹಂಚಿಕೆಯಡಿ ಜೆಡಿಎಸ್ ಬಯಸಿದಷ್ಟು ಸೀಟು ಸಿಗುವುದಾ? ಎಂಬುದನ್ನು ಕಾದು ನೋಡಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನ ಗಳಿಸಿದ್ದವು. ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬಳ್ಳಾರಿ ಸ್ಥಾನ ಕಳೆದುಕೊಂಡಿತು. ಬೆಂಗಳೂರು ದಕ್ಷಿಣ ಸಂಸದರಾಗಿದ್ದ ಕೇಂದ್ರ ಸಚಿವರೂ ಆಗಿದ್ದ ಅನಂತಕುಮಾರ್ ಅವರು ನಿಧನರಾಗಿರುವುದರಿಂದ ಆ ಸ್ಥಾನ ತೆರವಾಗಿದೆ. ಪ್ರಸ್ತುತ ಬಿಜೆಪಿ 15, ಕಾಂಗ್ರೆಸ್ 10, ಜೆಡಿಎಸ್ 2 ಸ್ಥಾನ ಹೊಂದಿವೆ.
ಹಿಂದೆ ಏನಾಗಿತ್ತು?2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು, ಪ್ರಕಾಶ್ ಹುಕ್ಕೇರಿಯವರು ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕಡೆ, ಬಿಜೆಪಿ ಒಂದು ಕಡೆ ಮಾತ್ರ ಗೆದ್ದಿತ್ತು. 2019ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಸ್ಪರ್ಧಿಸಿ, ಆಯ್ಕೆಯಾದರು. ನಂತರ, ನಡೆದ ಉಪಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಮಂಡ್ಯದಲ್ಲಿ ಜೆಡಿಎಸ್, ಶಿವಮೊಗ್ಗದಲ್ಲಿ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದ್ದವು. ಎಸ್.ಲಕ್ಷ್ಮೀ ನಾರಾಯಣ