Advertisement

Lok Sabha Elections: ಬಿಜೆಪಿ ವರಿಷ್ಠರಿಂದ 25 ಸ್ಥಾನ ಗೆಲ್ಲುವ ಹೊಣೆ, ಶತದಿನಗಳ ಮಾರ್ಗಸೂಚಿ

01:59 AM Jan 09, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯ ಗೆಲುವಿಗಾಗಿ ರಾಜ್ಯ ನಾಯಕರಿಗೆ 100 ದಿನಗಳ ಮಾರ್ಗಸೂಚಿ ನಿಗದಿ ಮಾಡಿರುವ ಬಿಜೆಪಿಯ ವರಿಷ್ಠರು ಕನಿಷ್ಠ 25 ಲೋಕಸಭಾ ಸ್ಥಾನಗಳ ಗೆಲುವಿನ ಗುರಿ ನಿಗದಿಪಡಿಸಿದ್ದಾರೆ. ಜತೆಗೆ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ವೈಫ‌ಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಜೆಂಡಾ ಹಾಕಿಕೊಳ್ಳುವಂತೆಯೂ ಫ‌ರ್ಮಾನು ಹೊರಡಿಸಿದೆ.

Advertisement

ಬೆಂಗಳೂರಿನ ಹೊರವಲಯದ ಖಾಸಗಿ ಹೊಟೇಲ್‌ನಲ್ಲಿ ದಿನಪೂರ್ತಿ ನಡೆದ ಸಭೆಯಲ್ಲಿ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ರಾಜ್ಯ ನಾಯಕರಿಗೆ ಈ ಸಂದೇಶ ರವಾನಿಸಿದ್ದು, “28ಕ್ಕೆ 28 ಸ್ಥಾನ’ ಎಂಬ ಲಕ್ಷ್ಯವನ್ನು ಬೆನ್ನು ಹತ್ತಿ. ಆದರೆ ವರಿಷ್ಠರು ಕನಿಷ್ಠ 25 ಸ್ಥಾನಗಳಲ್ಲಾದರೂ ಬಿಜೆಪಿಯ ಗೆಲುವು ಬಯಸುತ್ತಿದ್ದಾರೆ ಎಂದು ಸೂಚನೆ ನೀಡುವ ಮೂಲಕ ರಾಜ್ಯ ಬಿಜೆಪಿಯ ಹೊಸ ನಾಯಕತ್ವದ ಮುಂದೆ ದೊಡ್ಡ ಹೊಣೆಗಾರಿಕೆಯನ್ನೇ ನೀಡಿದ್ದಾರೆ. ಹೀಗಾಗಿ ಎಲ್ಲ ಬಣ ಲೆಕ್ಕಾಚಾರಗಳನ್ನು ಬದಿಗಿರಿಸಿ ಮುಂದಿನ 100 ದಿನಗಳ ಕಾಲ ಶ್ರಮಿಸುವುದು ಬಿಜೆಪಿ ನಾಯಕರಿಗೆ ಅನಿವಾರ್ಯವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ವಿಪಕ್ಷ ನಾಯಕರಾದ ಆರ್‌. ಅಶೋಕ್‌, ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ, ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ. ಸುನಿಲ್‌ ಕುಮಾರ್‌, ಪಿ. ರಾಜೀವ್‌, ಪ್ರೀತಂ ಗೌಡ, ನಂದೀಶ್‌ ರೆಡ್ಡಿ ಸಹಿತ 45ಕ್ಕೂ ಹೆಚ್ಚು ಪ್ರಮುಖ ನಾಯಕರು ಪಾಲ್ಗೊಂಡ ಸಭೆಯಲ್ಲಿ ಮುಂದಿನ ನೂರು ದಿನಗಳಲ್ಲಿ ಮಾಡಬೇಕಾದ ಕಾರ್ಯ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಪಕ್ಷದ ವಿರುದ್ಧ ಮುನಿಸಿಕೊಂಡು ಹಲವು ವೇದಿಕೆಗಳಲ್ಲಿ ಬಹಿರಂಗ ಹೇಳಿಕೆ ನೀಡಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ಸಭೆಗೆ ಹಾಜರಾಗಿದ್ದರು.

100 ದಿನಗಳ ಮಾರ್ಗಸೂಚಿ
ಜಿಲ್ಲೆ ಹಾಗೂ ಮಂಡಲ ವ್ಯಾಪ್ತಿಯಲ್ಲಿ ಸಾರ್ವ ಜನಿಕರು, ಪಕ್ಷದಲ್ಲಿ ಆಂತರಿಕವಾಗಿ ಚಟುವಟಿಕೆ ರೂಪಿಸಬೇಕು. ಫ‌ಲಾನುಭವಿಗಳು, ಸೈದ್ಧಾಂತಿಕ ಹಿನ್ನೆಲೆಯ ಮತದಾರರ ಸಂಪರ್ಕದ ಜತೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಬೇಕು.ಒಟ್ಟು ಚುನಾವಣ ಕಾರ್ಯವನ್ನು 5 ಹಂತಗಳ ಚಟುವಟಿಕೆಯಾಗಿ ವಿಭಜಿಸಲಾಗಿದೆ.

ಟಿಕೆಟ್‌ ಬಗ್ಗೆ ಪ್ರಾಸಂಗಿಕ ಪ್ರಸ್ತಾವ
ಟಿಕೆಟ್‌ ಹಂಚಿಕೆ ಬಗ್ಗೆ ಈ ಸಭೆಯಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾವವಾಗಿದ್ದು, ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮಾಡಿದ “ಹೊಸ ಪ್ರಯೋಗ’ಗಳಿಗೆ ಈ ಬಾರಿ ಕೈ ಹಾಕುವ ಸಾಧ್ಯತೆಗಳು ಕ್ಷೀಣಿಸಿವೆ. 28ಕ್ಕೆ 28 ಸ್ಥಾನ ಗೆಲ್ಲಬೇಕೆಂಬ ವರಿಷ್ಠರ ಸೂಚನೆಯ ಹಿಂದೆ ಪ್ರತೀ ಸ್ಥಾನವೂ ಮಹತ್ವದ್ದು ಎಂಬ ಸಂದೇಶವಿದೆ. ಹೀಗಾಗಿ ವ್ಯಾಪಕ ಬದಲಾವಣೆ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

Advertisement

-ಮತದಾರರ ಸಂಪರ್ಕಿಸಿ, ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿ
-ಯಾರ ವಿರುದ್ಧವೂ ಸದ್ಯಕ್ಕೆ ಶಿಸ್ತುಕ್ರಮದ ಆಗ್ರಹ ಬೇಡ.
-ಎಲ್ಲರೂ ಒಂದಾಗಿ ಚುನಾವಣೆ ಎದುರಿಸಿ ಎಂದು ಸಲಹೆ
-ಜೆಡಿಎಸ್‌ ಜತೆ ಹೊಂದಾಣಿಕೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಿ

ವರಿಷ್ಠರ ಭೇಟಿಗೆ ದಿಲ್ಲಿ ತಲುಪಿದ ಸೋಮಣ್ಣ
ಪಕ್ಷದ ಕೆಲವು ನಾಯಕರ ಮೇಲೆ ಮುನಿಸಿಕೊಂಡಿದ್ದ ಮಾಜಿ ಸಚಿವ ವಿ. ಸೋಮಣ್ಣ ಬಿಜೆಪಿ ವರಿಷ್ಠರ ಭೇಟಿ ಗಾಗಿ ಸೋಮವಾರ ದಿಲ್ಲಿ ತಲುಪಿದ್ದು, ಮಂಗಳವಾರ ಪಕ್ಷದ ಪ್ರಮುಖರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಸೋಮಣ್ಣ ಅವರು ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನ ಪಡಿಸುವ ಕಸರತ್ತು ನಡೆಸಿರುವ ಬಿಜೆಪಿ ವರಿಷ್ಠರು ದಿಲ್ಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.

ತುಮಕೂರು ಕ್ಷೇತ್ರದಿಂದ ಕಣ ಕ್ಕಿಳಿಯಲು ಸೋಮಣ್ಣ ಬಯಸಿದ್ದು ಅದಕ್ಕೆ ವರಿಷ್ಠರ ಸಮ್ಮತಿ ಇದೆಯೇ ಇಲ್ಲವೇ ಎಂಬುದು ನಿರ್ಧಾರವಾಗುವ ಸಾಧ್ಯತೆಗಳಿವೆ. ಈ ಮಧ್ಯೆ ಅವರು ಜೆಡಿಎಸ್‌ ಮೂಲಕವೂ ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next