ಕುಣಿಗಲ್ : ಲೋಕಸಭೆ ಚುನಾವಣೆ ದಿನಾಂಕ ಘೊಷಣೆ ಹಾಗೂ ನೀತಿ ಸಂತಿ ಸಂಹಿತೆ ಜಾರಿಯಾಗಿರು ಹಿನ್ನಲೆಯಲ್ಲಿ ಚುನಾವಣಾ ಪೂರ್ವ ಹಾಗೂ ಮತದಾನದ ಮೇಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು, (ಸಿಐಎಸ್‌ಎಫ್) ಯೋಧರು ಹಾಗೂ ಸ್ಥಳೀಯ ಪೊಲೀಸ್ ಪಡೆ ಸೋಮವಾರ ಪಟ್ಟಣದ ಪ್ರಮುಖ ಬೀದಿಯಲ್ಲಿ ಪಥ ಸಂಚಲನ ನಡೆಸಿದರು.
ಡಿವೈಎಸ್‌ಪಿ ಓಂಪ್ರಕಾಶ್ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ನವೀನ್‌ಗೌಡ ಹಾಗೂ (ಸಿಐಎಸ್‌ಎಫ್) ಯೋಧರು ಮತ್ತು ಪೊಲೀಸ್ ಸಿಬ್ಬಂದಿ ಪಡೆ ಸೇರಿದಂತೆ ಸುಮಾರು 80 ಕ್ಕೂ ಅಧಿಕ ಮಂದಿ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್, ಗ್ರಾಮ ದೇವತೆ ವೃತ್ತ, ದೊಡ್ಡಪೇಟೆ, ಕೋಟೆ, ಗುಜ್ಜಾರಿ ಮೊಹಲ್ಲಾ, ಮದ್ದೂರು, ಅಂಬೇಡ್ಕರ್ ನಗರ, ಕೆಆರ್‌ಎಸ್. ಅಗ್ರಹಾರ ಸೇರಿದಂತೆ ಮೊದಲಾದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ, ಶಾಂತಿಯುತ ಮತದಾನದ ಜಾಗೃತಿ ಮೂಡಿಸಿದರು.
ಯೋಧರಿಗೆ ಹಾರ ಹಾಕಿ ಭವ್ಯ ಸ್ವಾಗತ : ಏ. 26 ರಂದು ನಡೆಯಲಿರುವ ಬೆಂಗಳೂರು ಗ್ರಾಮಾಂತರ ಲೋಸಕಭಾ ಚುನಾವಣೆಯ ಕರ್ತವ್ಯಕ್ಕೆ ಆಗಮಿಸಿದ (ಸಿಐಎಸ್‌ಎಫ್) ಯೋಧರನ್ನು ಪಟ್ಟಣದ ನಾಗರೀಕರು ಹೂ ಮಾಲೆ ಹಾಕಿ, ಭವ್ಯವಾಗಿ ಬರಮಾಡಿಕೊಂಡರು, ಬಳಿಕ ತಂಪುಪಾನೀಯ ನೀಡಿ ಸತ್ಕರಿಸಿದರು.
ಡಿವೈಎಸ್‌ಪಿ ಓಂಪ್ರಾಕಾಶ್ ಮಾತನಾಡಿ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಸುಮಾರು 80ಕ್ಕೂ ಅಧಿಕ (ಸಿಐಎಸ್‌ಎಫ್) ಯೋಧರು ಬಂದಿದ್ದಾರೆ ಒಂದು ತಂಡ ಕುಣಿಗಲ್ ತಾಲೂಕಿನಲ್ಲಿ ಸ್ಥಳೀಯ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸಿದರೆ ಮತ್ತೊಂದು ತಂಡ ತುರುವೇಕೆರೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಈ ಎರಡು ತಂಡ ಚುನಾವಣೆ ಮುಗಿಯುವ ವರೆಗೂ ಎರಡು ತಾಲೂಕಿನಲ್ಲಿ ಇದ್ದು ಸೂಕ್ಷ್ಮ ಮತಗಟ್ಟೆಗಳಲ್ಲಿ ಸ್ಥಳೀಯ ಪೊಲೀಸರೊಂದಿಗೆ ಸೇರಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ನಿಷ್ಪಕ್ಷಪಾತ ಮತದಾನಕ್ಕೆ ಅವಕಾಶ : ವೃತ್ತ ನಿರೀಕ್ಷಕ ನವೀನ್‌ಗೌಡ ಮಾತನಾಡಿ ಶಾಂತಿಯುತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತ ಚುನಾವಣೆಗೆ ಪೊಲೀಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ ಹಾಗಾಗಿ ನಾಗರೀಕರು ಯಾವುದೇ ಭಯವಿಲ್ಲದೆ ಹಾಗೂ ಅಮಿಷಗಳಿಗೆ ಒಳಗಾಗದೇ, ಧೈರ್ಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಲು ವಾತಾವರಣ ಸೃಷ್ಠಿ ಮಾಡಲಾಗಿದೆ.ಹೀಗಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದ ಅವರು, ಈ ದಿಸೆಯಲ್ಲಿ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬಲು ಇಂದು ಪಥ ಸಂಚಲನ ನಡೆಸಲಾಯಿತು ಎಂದು ಹೇಳಿದರು.
ಈ ವೇಳೆ ಸಿ.ಐ.ಎಸ್.ಎಫ್‌ನ ಸಬ್ ಇನ್ಸ್ ಸ್ಪೆಕ್ಟರ್ ಹೇಮಂತ್‌ಕುಮಾರ್, ಎಎಸ್‌ಐ ಅಜೀತ್‌ಕುಮಾರ್, ಕುಣಿಗಲ್ ಠಾಣೆಯ ಎಎಸ್‌ಐ ಪ್ರಕಾಶ್, ಶ್ರೀಧರ್ ಮತ್ತಿತರರು ಇದ್ದರು.