ದಾವಣಗೆರೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾತ್ರವಲ್ಲ ತಪ್ಪನ್ನೂ ಮಾಡಿಲ್ಲ. ಹಾಗಾಗಿ ನಮ್ಮನ್ನು ಪಕ್ಷದ ರಾಜ್ಯಾಧ್ಯಕ್ಷರು ಏನನ್ನೂ ಕೇಳಿಲ್ಲ ಎಂದರು.
ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇವೆ ಎನ್ನುವವರು ಹರಿಹರ ಮತ್ತು ಜಗಳೂರು ಕ್ಷೇತ್ರದಲ್ಲಿ ಯಾಕೆ ಮತಗಳು ಕಡಿಮೆ ಬಂದಿವೆ ಎಂಬುದನ್ನ ಹೇಳಬೇಕು. ಮೊದಲು ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನ ನೋಡಿಕೊಳ್ಳಬೇಕು ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ187 ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ. ಅದಕ್ಕೆ ಸಂಬಂಧಿಸಿದಂತೆ ಕೇವಲ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದರೆ ಸಾಲದು. ನಿಗಮದ ಅಧ್ಯಕ್ಷರು, ಮುಖ್ಯಮಂತ್ರಿಗಳು ಸೇರಿ ದಂತೆ ಸರ್ಕಾರವೇ ಶಾಮೀಲಾಗಿದೆ ಎಂದು ದೂರಿದರು.
ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಮುಖ್ಯಮಂತ್ರಿಯವರ ಪತ್ನಿ ಅವರಿಗೆ ಬದಲಿ ನಿವೇಶನ ನೀಡಲಾಗಿದೆ ಎನ್ನಲಾಗುತ್ತಿದೆ. ವಾಸ್ತವವಾಗಿ ಅವರ ಮನೆಯವರ ಹೆಸರಲ್ಲಿ ಯಾವುದೇ ದಾಖಲೆಗಳೇ ಇಲ್ಲ ಎಂದು ಸಹ ಹೇಳಲಾಗುತ್ತಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಒಂದು ತಿಂಗಳಲ್ಲಿ ಒಂದೇ ಒಂದು ಅಭಿವೃದ್ದಿ ಕಾರ್ಯ ಆಗಿಲ್ಲ. ಜನಪರ ಅಭಿವೃದ್ಧಿ ಕಾರ್ಯಕ್ಕೆ ಹಣ ಕೊಡದಷ್ಟು ಈ ಸರ್ಕಾರ ಪಾಪರ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.