Advertisement
ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಆಕಾಂಕ್ಷಿತರು ಹೆಚ್ಚಿದ್ದಾರೆ. ಮತ್ತೂಂದೆಡೆ ಸಂಸದೆ ಸುಮಲತಾ ಅಂಬರೀಷ್ ದಳಪತಿಗಳ ವಿರುದ್ಧ ಮತ್ತೆ ಸಮರ ಸಾರಲು ಸಜ್ಜಾಗುತ್ತಿದ್ದಾರೆ. ಇದರಿಂದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆಯ ಜೊತೆಗೆ ಕಾಂಗ್ರೆಸ್ ಕೂಡ ಯಾವ ದಾಳ ಉರು ಳಿಸಲಿದೆ ಎಂಬ ಲೆಕ್ಕಚಾರಗಳು ಜೋರಾಗಿದೆ.
Related Articles
Advertisement
ಕಾಂಗ್ರೆಸ್ ಸೇರುತ್ತಾರಾ ಹಾಲಿ ಸಂಸದೆ?: ಮತ್ತೂಂದೆಡೆ ಸಂಸದೆ ಸುಮಲತಾ ಅಂಬರೀಷ್ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದರಿಂದ ಸುಮಲತಾಗೆ ಬಿಜೆಪಿ ಟಿಕೆಟ್ ಕೈತಪ್ಪುವುದು ಬಹುತೇಕ ಖಚಿತವಾಗಲಿದೆ. ಆದ್ದರಿಂದ ಸುಮಲತಾ ಕಾಂಗ್ರೆಸ್ ಪಕ್ಷಕ್ಕೆ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸುಮಲತಾ ಕಾಂಗ್ರೆಸ್‌ಗೆ ಬಂದರೆ ಬಿಜೆಪಿಯ ಮೈತ್ರಿ ಅಸಮಾಧಾನಿತ ಕಾರ್ಯಕರ್ತರ ಮತಗಳನ್ನು ಸೆಳೆಯಬಹುದೆಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದು, ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಾಗುವಂತೆ ಮಾಡಿತ್ತು. ಇದು ಸುಮಲತಾ ಪಕ್ಷ ಸೇರ್ಪಡೆಯ ವಿರೋಧಕ್ಕೆ ಕಾರಣವಾಗಲಿದೆ.
ಟಿಕೆಟ್ ರೇಸ್‌ನಲ್ಲಿ ತಮ್ಮಣ್ಣ, ಪುಟ್ಟರಾಜು, ಸುರೇಶ್‌ಗೌಡ : ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಲು ಘಟಾನುಘಟಿ ನಾಯಕರ ಹೆಸರು ಕೇಳಿಬರುತ್ತಿದೆ. ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು ಹಾಗೂ ಮಾಜಿ ಶಾಸಕ ಕೆ.ಸುರೇಶ್‌ಗೌಡ ಸಹ ರೇಸ್‌ನಲ್ಲಿದ್ದಾರೆ. ಇದರ ನಡುವೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ನಿಖೀಲ್‌ಗೂ ಆಫರ್ ನೀಡುತ್ತಿದ್ದಾರೆ. ಜಿಲ್ಲೆಯ ಜೆಡಿಎಸ್‌ನಲ್ಲಿ ನಾಯಕರ ನಡುವಿನ ಭಿನ್ನಾಭಿಪ್ರಾಯಕ್ಕೆ ಮುಲಾಮು ಹಚ್ಚಲು ವರಿಷ್ಟರೇ ಕಣಕ್ಕಿಳಿಯಬೇಕೆಂಬ ಮಾತುಗಳು ಕೇಳಿಬರುತ್ತಿವೆ.
ದಾಳ ಉರುಳಿಸಲಿದ್ದಾರಾ ದಳಪತಿಗಳು? ; ಸುಮಲತಾ ಒಂದು ವೇಳೆ ಪಕ್ಷೇತರರಾಗಿ ಕಣಕ್ಕಿಳಿದರೆ ದಳಪತಿಗಳು ಯಾವ ದಾಳ ಉರುಳಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೈ-ದಳ ಮೈತ್ರಿ ಅಭ್ಯರ್ಥಿಯಾಗಿದ್ದರೂ ದಳಪತಿಗಳು ಸೋಲಬೇಕಾಯಿತು. ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಕ್ಷೇತ್ರದಲ್ಲಿ ಸ್ಥಳೀಯ ಮಟ್ಟದ ದಳ-ಬಿಜೆಪಿ ಕಾರ್ಯಕರ್ತರಲ್ಲಿ ಮೈತ್ರಿಗೆ ಅಪಸ್ವರಗಳು ಕೇಳಿಬರುತ್ತಿವೆ. ಇದು ಮತ್ತೂಮ್ಮೆ ಉಲ್ಟಾ ಹೊಡೆದು ಕಳೆದ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಮರುಕಳುಹಿಸಿದಂತೆ ತಡೆಯಲು ದಳಪತಿಗಳು ರಾಜಕೀಯ ರಣತಂತ್ರವನ್ನೇ ಹೆಣೆಯಬೇಕಾಗಿದೆ.
ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಎಚ್.ಡಿ.ಕುಮಾರಸ್ವಾಮಿ : ಜೆಡಿಎಸ್ ಹಾಗೂ ಬಿಜೆಪಿ ಈಗಾಗಲೇ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುವುದು ಖಚಿತವಾಗಿದೆ. ಅದರಂತೆ ಇಲ್ಲಿ ದಳಪತಿಗಳ ದರ್ಬಾರ್ ಮುಂದುವರಿಯಲಿದೆ. ಲೋಕಸಭೆ ಚುನಾವಣೆಗೆ ಎರಡು ಪಕ್ಷಗಳ ಒಮ್ಮತದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಿದ್ದು, ಈಗಾಗಲೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಪೂರಕವೆಂಬ ಕುಮಾರಸ್ವಾಮಿ ಕ್ಷೇತ್ರ ಸಂಚರಿಸುತ್ತಿದ್ದಾರೆ. ಕಾರ್ಯಕರ್ತರ ಮದುವೆ, ಶುಭ, ಸಮಾರಂಭಗಳಿಗೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ಕಾರ್ಯಕರ್ತರ ಮನೆಗಳಿಗೂ ಎಡತಾಕುತ್ತಿದ್ದಾರೆ.
– ಎಚ್.ಶಿವರಾಜು