Advertisement

Lok Sabha Elections; ಬಿಜೆಪಿಯ 22 ಹೆಸರು ಫೈನಲ್‌; 6 ಬಾಕಿ, ಮೈಸೂರು, ಉ.ಕ.ಕ್ಕೆ ಹೊಸಬರು?

01:14 AM Mar 12, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ರಾತ್ರಿ ಹೊಸದಿಲ್ಲಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಚುನಾವಣ ಸಮಿತಿ (ಸಿಇಸಿ) ಸಭೆಯಲ್ಲಿ ರಾಜ್ಯದ 22 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ ಎನ್ನಲಾಗಿದೆ.

Advertisement

6 ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಕೊನೆಗೆ ಯಾವುದೇ ತೀರ್ಮಾನ ಕೈಗೊಳ್ಳ ಲಾಗದೆ ನಿರ್ಧಾರವನ್ನು ಬಾಕಿ ಉಳಿಸಿಕೊಳ್ಳ ಲಾಗಿದೆ. ಹೆಸರುಗಳನ್ನು ಮಂಗಳವಾರ ಸಾಯಂಕಾಲ ಅಥವಾ ಬುಧವಾರ ಬೆಳಗ್ಗೆ ಪ್ರಕಟಗೊಳಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕೆಲ ಅಚ್ಚರಿಯ ಅಭ್ಯರ್ಥಿಗಳ ಹೆಸರುಗಳು ಚರ್ಚೆಗೆ ಬಂದಿದ್ದು, ಮೈಸೂರು ಸಂಸತ್‌ ಕ್ಷೇತ್ರದಿಂದ ಯದುವೀರ್‌ ಒಡೆಯರ್‌ ಹೆಸರು ಕೇಳಿಬಂದಿದೆ. ಈ ಮೂಲಕ ಹಾಲಿ ಸಂಸದ ಪ್ರತಾಪ್‌ ಸಿಂಹ ಹೆಸರು ಪಟ್ಟಿಯಿಂದ ಹೊರಗುಳಿಯುವ ಲಕ್ಷಣಗಳಿವೆ. ಅದೇ ರೀತಿ ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದ ಅನಂತ ಕುಮಾರ್‌ ಹೆಗಡೆ ಹೆಸರೂ ಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚಾಗಿವೆ.

ಈ ಸಭೆಯಲ್ಲಿ ರಾಜ್ಯದ ಪರವಾಗಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್‌. ಅಶೋಕ್‌, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯ ಕೇಳುವ ಹಂತದ ಸಭೆಯಲ್ಲಿ ಪಾಲ್ಗೊಂಡಿದ್ದರು. ನಿರ್ಣಯ ತೆಗೆದುಕೊಳ್ಳುವ ಹಂತದ ಸಭೆಯಲ್ಲಿ ಯಡಿಯೂರಪ್ಪ ಮಾತ್ರ ಭಾಗವಹಿಸಿದ್ದರು.

ಕಳೆದ ವಾರ ನಡೆದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಕೇಂದ್ರ ಬಿಜೆಪಿ, ಅಮಿತ್‌ ಶಾ ಹಾಗೂ ರಾಜ್ಯ ಬಿಜೆಪಿ ನಡೆಸಿದ ಸರ್ವೆ, ವಿವಿಧ ಮಾಧ್ಯಮ ಸಂಸ್ಥೆಗಳ ಸರ್ವೇ ಸೇರಿ ಎಲ್ಲ ಕೋನಗಳಿಂದಲೂ ಸಮಗ್ರ ಚರ್ಚೆ ನಡೆಸಲಾಗಿದ್ದು, ಅಂತಿಮವಾಗಿ 22 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಗಿದೆ. ಹೆಸರುಗಳನ್ನು ಮಂಗಳವಾರ ಸಾಯಂಕಾಲ ಅಥವಾ ಬುಧವಾರ ಬೆಳಗ್ಗೆ ಪ್ರಕಟಗೊಳಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Advertisement

6 ಕ್ಷೇತ್ರಗಳಿಗೆ ತಡೆ
ಹಲವು ಕಾರಣಗಳಿಂದ 6 ಕ್ಷೇತ್ರಗಳ ಹೆಸರನ್ನು ಬಿಜೆಪಿ ಕೇಂದ್ರ ನಾಯಕತ್ವ ತಡೆದಿರಿಸಿದ್ದು, ಈ ಬಗ್ಗೆ ಅಳೆದು -ತೂಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುತೂಹಲಕಾರಿ ಸಂಗತಿ ಎಂದರೆ ಇವೆಲ್ಲವೂ ಬಿಜೆಪಿಯ ಸಿದ್ಧಾಂತಬದ್ಧ ಹಿನ್ನೆಲೆಯಿಂದ ಬಂದ ಸಂಸದರ ಕ್ಷೇತ್ರಗಳಿಗೆ ಸಂಬಂಧಪಟ್ಟದ್ದಾಗಿದೆ. ಹೀಗಾಗಿ ಬಿಜೆಪಿ ಕೇಂದ್ರ ನಾಯಕತ್ವ ತನ್ನ “ಪೋಸ್ಟರ್‌ ಬಾಯ್‌’ಗಳ ವಿಚಾರದಲ್ಲಿ ಮುನಿಸಿಕೊಂಡಿದೆಯೇ ಎಂಬ ಅನುಮಾನ ಸೃಷ್ಟಿಯಾಗಿದ್ದು, ಶೀಘ್ರದಲ್ಲೇ ಈ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ.

ಇನ್ನೆರಡು ದಿನ ಬೇಕು
ಸಭೆಗೆ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನಾಳೆ ಅಥವಾ ನಾಡಿದ್ದು ಟಿಕೆಟ್‌ ಘೋಷಣೆಯಾಗಲಿದೆ. 28 ಲೋಕಸಭಾ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಎರಡು ಹಂತದಲ್ಲಿ ಟಿಕೆಟ್‌ ಘೋÐಣೆಯಾಗಲಿದೆ ಎಂದಿದ್ದಾರೆ.

ಹಾಲಿ ಸಂಸದರಿಗೆ ಟಿಕೆಟ್‌ ಕೈ ತಪ್ಪುವ ವಿಚಾರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಹೊಸಮುಖಗಳಿಗೆ ಟಿಕೆಟ್‌ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡದ ಅವರು, ಆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದಿದ್ದಾರೆ.

ಸಂಭವನೀಯರು
ಶಿವಮೊಗ್ಗ: ಬಿ.ವೈ. ರಾಘವೇಂದ್ರ
ಚಿಕ್ಕೋಡಿ: ರಮೇಶ್‌ ಕತ್ತಿ,
ತುಮಕೂರು: ಸೋಮಣ್ಣ,
ಚಿತ್ರದುರ್ಗ: ನಾರಾಯಣಸ್ವಾಮಿ,
ಬೆಂಗಳೂರು ದಕ್ಷಿಣ:ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ:ಪಿ.ಸಿ. ಮೋಹನ್‌
ಬೆಂಗಳೂರು ಗ್ರಾಮಾಂತರ:ಡಾ| ಸಿ.ಎನ್‌. ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next