Advertisement

Lok Sabha Elections; ಜೆಡಿಎಸ್‌ ಮುಖಂಡರಿಗೆ ಎಚ್‌ಡಿಕೆ ಸಮನ್ವಯದ ಪಾಠ

01:36 AM Jan 09, 2024 | Team Udayavani |

ಬೆಂಗಳೂರು: ಜೆಡಿಎಸ್‌- ಬಿಜೆಪಿ ಮೈತ್ರಿ ಮಾಡಿ ಕೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ಹಾಗೂ ಮುಖಂಡರಿಗೆ “ಸಮನ್ವಯ’ದ ಪಾಠ ಮಾಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಎಲ್ಲ 28 ಕ್ಷೇತ್ರಗಳಲ್ಲಿ ಸಮನ್ವಯ ಸೂತ್ರ ಪಾಲಿಸು ವಂತೆ ಕರೆ ನೀಡಿದ್ದಾರೆ.

Advertisement

ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಪೂರ್ವ ಸಿದ್ಧತೆ ಹಾಗೂ ಸ್ಥಳೀಯ ಮಟ್ಟದಲ್ಲಿ ಮಿತ್ರಪಕ್ಷ ಬಿಜೆಪಿ ಜತೆ ನಾಯಕರು, ಕಾರ್ಯಕರ್ತರ ಹೊಂದಾಣಿಕೆ ಮತ್ತಿತರ ವಿವಿಧ ಅಂಶಗಳ ಬಗ್ಗೆ ಸೋಮವಾರ ಕುಮಾರಸ್ವಾಮಿ ಮಹತ್ವದ ಸಭೆ ನಡೆಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಲೋಕಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳಷ್ಟೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಚುನಾವಣೆ ಸಿದ್ಧತೆಗಳನ್ನು ವೇಗಗೊಳಿಸಬೇಕಾಗಿದೆ. ಕ್ಷೇತ್ರ ಹಂಚಿಕೆಯ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ನಿರ್ಧಾರ ಆಗಲಿದೆ. ಆದರೆ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ಪರಸ್ಪರ ಹೊಂದಾಣಿಕೆ, ಸಮನ್ವಯದಿಂದ ಕೆಲಸ ಮಾಡುವುದಕ್ಕೆ ಅಗತ್ಯವಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಆತಂಕ ಎಂದ ಎಚ್‌ಡಿಕೆ
ರಾಜ್ಯದ ಎಲ್ಲ ಲೋಕಸಭೆ ಕ್ಷೇತ್ರಗಳ ನಾಯಕರ ಅಭಿಪ್ರಾಯ ಆಲಿಸಿದ ಮಾಜಿ ಮುಖ್ಯ ಮಂತ್ರಿಗಳು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೈತ್ರಿಕೂಟದ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ ಆಗಬೇಕು. ಈ ದೇಶದ ಪ್ರಧಾನಿ ಹಾಗೂ ಮಾಜಿ ಪ್ರಧಾನಿಗಳ ನಡುವೆ ಆಗಿರುವ ಮೈತ್ರಿ ಚರ್ಚೆ ಫ‌ಲಪ್ರದವಾಗಿ ಕಾಂಗ್ರೆಸ್‌ ಆತಂಕಗೊಂಡಿದೆ. ಯಾರೇ ಆಗಲಿ, ಪ್ರತಿಷ್ಠೆ ಬದಿಗಿರಿಸಿ ಕೆಲಸ ಮಾಡಬೇಕು ಎಂದರು.

Advertisement

ಜೆಡಿಎಸ್‌ ಶಾಸಕಾಂಗ ಪಕ್ಷದ ಉಪ ನಾಯಕಿ ಶರದಾ ಪೂರ್ಯಾ ನಾಯಕ್‌, ಶಾಸಕರಾದ ವೆಂಕಟ ಶಿವಾರೆಡ್ಡಿ, ಎಂ.ಟಿ. ಕೃಷ್ಣಪ್ಪ, ಎ. ಮಂಜು ಸಹಿತ ಹಲವು ನಾಯಕರು ಪಾಲ್ಗೊಂಡಿದ್ದರು.

ಸುಮಲತಾ ಶತ್ರುವಲ್ಲ : ಎಚ್‌.ಡಿ. ಕುಮಾರಸ್ವಾಮಿ
“ಸುಮಲತಾ ನನಗೇನೂ ಶತ್ರು ಅಲ್ಲ. ಅಗತ್ಯ ಬಿದ್ದರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ’ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಪುನರುಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಚುನಾವಣೆ ಸಂಬಂಧ ನಡೆದ ಪಕ್ಷದ ಶಾಸಕರು, ಮುಖಂಡರ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದರು. “ಸುಮಲತಾ ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದಾರೆ. ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನು? ಆ ಹಿನ್ನೆಲೆಯಲ್ಲಿ ಈ ಹೇಳಿಕೆ ಅಷ್ಟೇ’ ಎಂದರು.

ಲೋಕಸಭಾ ಚುನಾ ವಣೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಹಿನ್ನೆಲೆಯಲ್ಲಿ ಈ ಸಲ ಮಂಡ್ಯದಿಂದ ಯಾರು ಎಂಬ ಪ್ರಶ್ನೆ ಉದ್ಭವವಾಗಿರುವಂತೆಯೇ ಎಚ್‌ಡಿಕೆಯಿಂದ ಈ ಹೇಳಿಕೆ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next